ಪ್ರಕೃತಿ ವಿಕೋಪಕ್ಕೆ ಶೀಘ್ರದಲ್ಲಿ ಪರಿಹಾರ- ಸಚಿವ ಪ್ರಮೋದ್ ಮಧ್ವರಾಜ್
ಉಡುಪಿ: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಹಾನಿಯಾದ ಕುಟುಂಬಗಳಿಗೆ ಶೀಘ್ರದಲ್ಲಿ ಪರಿಹಾರ ವಿತರಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಅವರು ಗುರುವಾರ ಬೊಮ್ಮರಬೆಟ್ಟು, ಪುತ್ತಿಗೆ, ಪೆರ್ಡೂರು- ಬೆಳ್ಳರಪಾಡಿ, ಪಾಡಿಗಾರ ದಲ್ಲಿ ಪ್ರಕಥಿ ವಿಕೋಪದಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದರು.
ಈ ಪ್ರದೇಶಗಳ ವ್ಯಾಪ್ತಿಯಲ್ಲಿ ಜುಲೈ 1 ರಂದು , 15 ರಿಂದ 20 ಮೀ ಅಗಲದ ಭಾರೀ ಸುಂಟರಗಾಳಿ ಬೀಸಿದ್ದು, 18 ಕಿ.ಮೀ ವ್ಯಾಪ್ತಿಯಲ್ಲಿ ಬಿರುಗಾಳಿಗೆ 191 ಮನೆಗಳಿಗೆ ಹಾನಿಯಾಗಿದ್ದು, 54 ಪೂರ್ಣ ಮತ್ತು 137 ಭಾಗಶ: ಹಾನಿಯಾಗಿವೆ, ಮನೆಗಳಿಗೆ ಒಟ್ಟು 84 ಲಕ್ಷ ಹಾನಿಯಾಗಿದ್ದು, 18 ಎಕ್ರೆಯ ಅಡಿಕೆ ತೋಟ ನಾಶವಾಗಿ 12 ಲಕ್ಷ ಹಾನಿಯಾಗಿದ್ದು,ಒಟ್ಟು 96 ಲಕ್ಷದ ಹಾನಿಯಾಗಿದೆ, ಅಲ್ಲದೇ ಮಹಾಂತೇಶ್ ಎಂಬುವವರ ಮನೆಯ ಶೀಟುಗಳು ಹಾರಿ ಹೋಗಿ, ತೊಟ್ಟಲಿಗೆ ಕಟ್ಟಿದ್ದ 1 ಳಿ ತಿಂಗಳ ಅರ್ಜುನ್ ಎಂಬ ಮಗು ಸುಮಾರು 100 ಮೀಟರ್ ದೂರ ಎಸೆಯಲ್ಪಟ್ಟಿದ್ದು , ಮಗು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದೆ. ಈ ಮಗುವಿನ ಚಿಕಿತ್ಸೆಗೆ ವಿಶೇಷ ಗಮನ ಹರಿಸುವಂತೆ ಶಾಸಕರು ಆಸ್ಪತ್ರೆಯ ವೈದ್ಯರಿಗೆ ದೂರವಾಣಿ ಮೂಲಕ ಸಚಿವರು ಸೂಚಿಸಿದರು.
ಇದುವರವಿಗೂ 10 ಲಕ್ಷ 20 ಸಾವಿರಗಳ ತಾತ್ಕಾಲಿಕ ಪರಿಹಾರ ವಿತರಿಸಲಾಗಿದ್ದು, 2.5 ಲಕ್ಷ ಮೌಲ್ಯದ ಹೆಂಚು ಮತ್ತು ಶೀಟುಗಳನ್ನು ಸಂತ್ರಸ್ಥರಿಗೆ ವಿತರಿಸಲಾಗಿದೆ, ಇದೇ ಶನಿವಾರ 36 ಲಕ್ಷದ ಪರಿಹಾರವನ್ನು ವಿತರಿಸಲಾಗುವುದು ಎಂದು ಪ್ರಮೋದ್ ಹೇಳಿದರು.
ವಿಕೋಪದಿಂದ ಮನೆ ಹಾನಿಯಾದವರಿಗೆ ಬಸವ ವಸತಿ ಯೋಜನೆಯಿಂದ 1.20 ಲಕ್ಷ ಹಾಗೂ ನರೇಗಾದಿಂದ 20 ಸಾವಿರ ಪರಿಹಾರ, ಹಾಗೂ ಮೀನುಗಾರ ಮಹಿಳೆ ಒಬ್ಬರಿಗೆ ಮತ್ಸ್ಯಾಶ್ರಯ ಯೋಜನೆಯಲ್ಲಿ ಮನೆ ನಿರ್ಮಿಸಿಕೊಡಲಾಗುವುದು ಎಂದು ಸಚಿವರು ಹೇಳಿದರು.
ಅಲ್ಲದೇ 2 ದೇವಾಲಯಗಳಿಗೂ ಸಹ ಹಾನಿಯಾಗಿದ್ದು, ಇದಕ್ಕೆ ಪರಿಹಾರ ನೀಡುವಂತೆ ಧಾರ್ಮಿಕ ದತ್ತಿ ಇಲಾಖೆಯ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯರಾದ ಚಂದ್ರಿಕಾ, ಸುಧಾಕರ ಶೆಟ್ಟಿ, ತಾ.ಪಂ. ಸದಸ್ಯ ಲಕ್ಷ್ಮಿ ನಾರಾಯಣ ಪ್ರಭು, ತಹಸೀಲ್ದಾರ್ ಗುರುಪ್ರಸಾದ್,ಪೆರ್ಡೂರು, ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಗಳ ಅಧ್ಯಕ್ಷರು, ಉಪಾಧ್ಯಕ್ಷರು ಉಪಸ್ಥಿತರಿದ್ದರು.