ಪ್ರಚೋದನಕಾರಿ ಭಾಷಣ ಮಾಡಿದ ಜಗದೀಶ್ ಕಾರಂತರ ಮೇಲೆ ಕ್ರಮಕ್ಕೆ ಮುಸ್ಲಿಂ ವರ್ತಕರ ಆಗ್ರಹ
ಮಂಗಳೂರು: ಸಂಪ್ಯ ಠಾಣೆಯ ಎಸ್. ಐ. ಪೋಲೀಸ್ ಸಿಬ್ಬಂದಿಗಳು ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಾರೆಂದು ಆಪಾದಿಸಿ ಪುತ್ತೂರಿನಲ್ಲಿ ಪೋಲೀಸ್ ಇಲಾಖೆಯ ವಿರುದ್ಧ ಹಿಂದೂ ಜಾಗರಣಾ ವೇದಿಕೆಯು ನಡೆಸಿದ ಪ್ರತಿಭಟನೆಯಲ್ಲಿ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತರು ಅತ್ಯಂತ ಪ್ರಚೋದನಾಕಾರಿಯಾಗಿ ಭಾಷಣವನ್ನು ಮಾಡಿ ಎಸ್. ಐ. ಯವರನ್ನು ಅಶ್ಲೀಲ ಪದಗಳಿಂದ ಬಹಿರಂಗವಾಗಿ ಬೆದರಿಕೆ ಹಾಕಿ ಕತ್ತೆಯ ಮೇಲೆ ಮೆರವಣಿಗೆ ಮಾಡಿಸುವುದಾಗಿ ನಿಂದಿಸಿದ್ದಲ್ಲದೆ ನಮಗೆ ಕಾನೂನಿನ ಯಾವುದೇ ಭಯವಿಲ್ಲ, ಪುತ್ತೂರನ್ನು ಸುರತ್ಕಲ್ ಆಗಿ ಪರಿವರ್ತನೆ ಮಾಡುತ್ತೇವೆಂದು ಕೋಮು ಸೂಕ್ಷ್ಮ ಪ್ರದೇಶವಾದ ಪುತ್ತೂರಿನಲ್ಲಿ ಹೇಳಿರುವುದನ್ನು ಹಾಗೂ ಈ ತನಕ ಕಾರಂತರ ಮೇಲೆ ದೂರು ದಾಖಲಾಗಿರದೇ ಇರುವುದನ್ನು ಮುಸ್ಲಿಂ ವರ್ತಕರ ಸಂಘವು ತೀವ್ರವಾಗಿ ಖಂಡಿಸುತ್ತದೆ.
ವಸ್ತುನಿಷ್ಠ ವರದಿ ಮಾಡಿದ ಪತ್ರಕರ್ತನ ಮೇಲೆ ಜಿಲ್ಲಾ ಎಸ್. ಪಿ. ಯವರು ಹಾಗೂ ಅವರ ಸಿಬ್ಬಂದಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿರುವಂತಹ ಪೋಲೀಸ್ ಇಲಾಖೆಗೆ ತಮ್ಮ ಇಲಾಖೆಯ ವಿರುದ್ಧ ಅವಹೇಳನಕಾರಿಯಾಗಿ ಭಾಷಣ ಮಾಡಿದ ಹಾಗೂ ಕೋಮು ಪ್ರಚೋದನೆ ಮಾಡುವ ಹುನ್ನಾರ ನಡೆಸಿದ ವ್ಯಕ್ತಿಯ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸದೇ ಇರುವುದು ವಿಪರ್ಯಾಸವಾಗಿದ್ದು ಇದು ಗೃಹ ಇಲಾಖೆ, ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಜಿಲಾ ಪೋಲೀಸ್ ಇಲಾಖೆಯ ದೌರ್ಬಲ್ಯ ಹಾಗೂ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಸಂಘದ ಮುಖಂಡರಾದ ಅಲಿ ಹಸನ್, ಯಾಸೀನ್ ಕುದ್ರೋಳಿ ಮತ್ತಿತರರು ಹೇಳಿಕೆಯಲ್ಲಿ ತಿಳಿಸಿರುತ್ತಾರೆ. ಆದುದರಿಂದ ಫೋಲೀಸ್ ಇಲಾಖೆ ತಕ್ಷಣ ಸ್ವಯಪ್ರೇರಿತ ದೂರು ದಾಖಲಿಸಿಕೊಂಡು ಜಗದೀಶ್ ಕಾರಂತರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಘವು ಆಗ್ರಹಿಸುತ್ತದೆ.