ಪ್ರಣಾಳಿಕೆ: ಸಮೃದ್ಧ ಉಡುಪಿ-ಚಿಕ್ಕಮಗಳೂರು ಜೆಪಿ ಹೆಗ್ಡೆ ಕನಸು
ಉಡುಪಿ: ಉಡುಪಿ ಮತ್ತು ಚಿಕ್ಕಮಗಳೂರಿನ ಸಮೃದ್ಧ ಅಭಿವೃದ್ಧಿ ನನ್ನ ಕನಸಾಗಿದೆ. ಇದಕ್ಕಾಗಿ ಮಲೆನಾಡು, ಬಯಲುಸೀಮೆ, ಕರಾವಳಿಯ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆಯ ಮೂಲಕ ನನ್ನ ಕನಸನ್ನು ನನಸಾಗಿಸುವ ಪ್ರಯತ್ನದಲ್ಲಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಜೆಪಿ ಹೆಗ್ಡೆ ಪ್ರಣಾಳಿಕೆ ಹೈಲೈಟ್ಸ್ ಈ ಕೆಳಗಿನಂತಿದೆ
- ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆ ಅಭಿವೃದ್ಧಿ
- ನಿಷ್ಕ್ರಿಯವಾಗಿರುವ ‘ಅಡಿಕೆ ಸಂಶೋಧನಾ ಕೇಂದ್ರ’ವನ್ನು ಕ್ರಿಯಾಶೀಲವಾಗುವಂತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವುದು.
- ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿ ನೇಮಿಸಿದ್ದ ಗೋರಖ್ ಸಿಂಗ್ ವರದಿಯ ಅನುಷ್ಠಾನಕ್ಕಾಗಿ ಪ್ರಯತ್ನಿಸುವುದು.
- ಅಡಿಕೆ ಬೆಳೆಯನ್ನು ಕಾಡುತ್ತಿರುವ ಎಲೆಚುಕ್ಕಿ ರೋಗದ ಶಾಶ್ವತ . ನಿವಾರಣೆಗಾಗಿ ಸಂಶೋಧನೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವುದು.
- ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆ.ಎಮ್.ಎಫ್ ಹಾಲಿನ ಘಟಕ ಸ್ಥಾಪಿಸಿ ಹೈನುಗಾರಿಕೆಗೆ ಉತ್ತೇಜನ ನೀಡುವುದು.
‘ನೀರಾ’ ಅನೌಪಚಾರಿಕ ಉದ್ಯೋಗವನ್ನು ಸೃಷ್ಟಿಸಲು ಕೃಷಿ ಕಾರ್ಯಕ್ರಮ. - ಮಲೆನಾಡಿನ ಕೃಷಿ ಉತ್ಪನ್ನಗಳಿಗೆ ಜಾಗತಿಕ ಬ್ರಾಂಡ್ (ಜಿ. ಟ್ಯಾಗ್) ನೀಡಲು ಕ್ರಮಕೈಗೊಳ್ಳುವುದು.
- ತರೀಕೆರೆ ತಾಲ್ಲೂಕಿನ ಇತರ ಪ್ರಮುಖ ಬೆಳೆಗಳಾದ ಈರುಳ್ಳಿ ಹಾಗೂ ಇತರ ತರಕಾರಿಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಿಸಲು ಪ್ರೋತ್ಸಾಹ ನೀಡಲು ಸೂಕ್ತ ಕ್ರಮಕ್ಕಾಗಿ ಪ್ರಯತ್ನ.
- ವರ್ಷವಾರು ಕೃಷಿ ಮೇಳ,
2. ಮಲೆನಾಡು ಅಭಿವೃದ್ಧಿ
- ಮಲೆನಾಡಿನಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆಗಳಿಗೆ ಪರಿಹಾರ ಮೊತ್ತವನ್ನು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದು.
- ಮಲೆನಾಡಿನ ಜನ ಪರಂಪರೆಯ ವಾಸ ಸ್ಥಳಗಳನ್ನು ಪುನರ್ ಸರ್ವೆ ಮಾಡಿ ಪ್ರತ್ಯೇಕ ಮಜೆರಗಳನ್ನು ಗುರುತಿಸಿ ಅಲ್ಲಿರುವ ಮನೆಗಳನ್ನು ಕ್ರಮಬದ್ಧವಾದ ನಿವೇಶನವೆಂದು ತೀರ್ಮಾನಿಸಿ ನಮೂನೆ 9 ಮತ್ತು 11 ಎ ನೀಡಲು ಪ್ರಯತ್ನಿಸುವುದು.
- ಪ್ರತಿ ವರ್ಷ ಏಪ್ರಿಲ್ 15 ರಂದು ‘ಮಲೆನಾಡ ದಿನ’ವನ್ನಾಗಿ ಆಚರಿಸಿ, ಮಲೆನಾಡಿನ ಜನ ಜೀವನ, ಕೃಷಿ, ಪರಂಪರೆ, ಜನಪದ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು, ಈ ಕಾರ್ಯಕ್ರಮಕ್ಕೆ ವಿಶೇಷ ಅನುದಾನ ನೀಡುವಂತೆ ಪ್ರಾಮಾಣಿಕ ಪ್ರಯತ್ನ ಮಾಡುವುದು.
- ಪಶ್ಚಿಮ ಘಟ್ಟ ತಪ್ಪಲಿನ ಮಲೆನಾಡು ಪ್ರದೇಶವನ್ನು ವಿಶೇಷ ಕೃಷಿವಲಯವಾಗಿ ಘೋಷಿಸಲು ಸೂಕ್ತ ಕ್ರಮ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದು.
3. ನಿವೇಶನರಹಿತ ಹಾಗೂ ಭೂರಹಿತರಿಗೆ ಸೌಲಭ್ಯ
- ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕನಿಷ್ಠ 10 ಎಕರೆ ಜಮೀನನ್ನು ಗುರುತಿಸಿ ನಿವೇಶನ ರಹಿತರಿಗೆ ನಿವೇಶನ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳೊಂದಿಗೆ ವ್ಯವಹರಿಸುವುದು.
- ರೈತರು, ನೆಲವಾಸಿಗಳು ಸರಕಾರಿ ಭೂಮಿಯಲ್ಲಿ ಕೃಷಿ ಮಾಡಿಕೊಂಡಿರುವ ಕೃಷಿ ಪ್ರದೇಶವನ್ನು ಕಾನೂನಿನ ನಿರ್ಭಂದಗಳನ್ನು ಸರಳೀಕರಣಗೊಳಿಸಿ ಭೂ ಮಂಜೂರಾತಿಗೆ ಅವಕಾಶ ಮಾಡಿಕೊಡಲು ಸೂಕ್ತ ಕ್ರಮ ಕೈಗೊಳ್ಳುವುದು.
- ಪಾರಂಪರಿಕ ಅರಣ್ಯ ಕಾಯ್ದೆಯಡಿ ಭೂ ಮಂಜೂರಾತಿಯ ಕಾಲ ಮಿತಿಯನ್ನು ಅವಶ್ಯಕ ಪ್ರಸಕ್ತ 75 ವರ್ಷಗಳ ದಾಖಲೆಗಳನ್ನು 25 ವರ್ಷಕ್ಕೆ ಇಳಿಸಿ ಅರಣ್ಯವಾಸಿಗಳಿಗೆ ಬದುಕಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ
- ಅರಣ್ಯ ಕಾಯಿದೆಯ ಸೆಕ್ಷನ್ 4 ಉದ್ಯೋಷಣೆಗೆ ಗ್ರಾಮ ಸಭೆಗಳ ಪೂರ್ವಾನುಮತಿ ಪಡೆಯದೇ ಇರುವುದರಿಂದ ಸದರಿ ಉದ್ಯೋಷಣೆಯನ್ನು ಸಂಪೂರ್ಣವಾಗಿ ವಾಪಸ್ಸು ಪಡೆಯುವಂತೆ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದು.
4. ಮೀನುಗಾರಿಕೆ ಅಭಿವೃದ್ಧಿ
- ಅಳಿವೆ ಮತ್ತು ಬಂದರಿನ ಡ್ರಜ್ಜಿಂಗ್ ಹಾಗೂ ಬ್ರೇಕ್ ವಾಟರ್ ಯೋಜನೆಗಳಿಗೆ ಒತ್ತು ಕೊಡುವುದು. ಮೀನುಗಾರಿಕಾ ಬಂದರಿನ ತ್ಯಾಜ್ಯ ಶೀಘ್ರ ವಿಲೇವಾರಿಗೆ ಒತ್ತು ನೀಡಿ ಬಂದರಿನ ಸ್ವಚ್ಚತೆಗೆ ಆದ್ಯತೆ ನೀಡುವುದು.
- ಅಸಂಘಟಿತ ಕಾರ್ಮಿಕರಿಗೆ ಸರಕಾರದಿಂದ ದೊರಕುವ ಸೌಲಭ್ಯಗಳನ್ನು ಮೀನುಗಾರಿಕಾ ಕಾರ್ಮಿಕರಿಗೂ ವಿಸ್ತರಿಸಲು ಪ್ರಯತ್ನಿಸುವುದು. ಸಾಂಪ್ರದಾಯಿಕ ಮಹಿಳಾ ಮೀನುಗಾರರಿಗೆ ಬಡ್ಡಿರಹಿತ ಸಾಲ ನೀಡಿ ಮೀನು ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುವುದು.
- ನಿವೃತ್ತ ಮೀನುಗಾರರಿಗೆ ಪಿಂಚಣಿ ಸೌಲಭ್ಯ ಒದಗಿಸಲು ಪ್ರಯತ್ನಿಸುವುದು.
- ನಾಡ ದೋಣಿಗಳಿಗೆ ನೀಡುತ್ತಿರುವ ಸೀಮೆ ಎಣ್ಣೆ ಸಹಾಯಧನವನ್ನು ಲೀಟರೊಂದಕ್ಕೆ 35 ರೂಪಾಯಿಯಿಂದ ಕನಿಷ್ಠ 50 ರೂಪಾಯಿಗೆ ಹೆಚ್ಚಿಸುವ ಪ್ರಯತ್ನ.
- ಸಂಕಷ್ಟ ಪರಿಹಾರ ಸಹಾಯಧನವನ್ನು ರೂ. 10 ಲಕ್ಷಕ್ಕೆ ಹಾಗೂ ಮತ್ಸಾಶ್ರಯ ಯೋಜನೆಯ ಸಹಾಯಧನವನ್ನು 5 ಲಕ್ಷಕ್ಕೆ ಹೆಚ್ಚಿಸಲು ಪ್ರಯತ್ನಿಸುವುದು.
- ಪ್ರಧಾನಿ ಮತ್ಸಾ ಸಂಪದ ಯೋಜನೆಯ ಸದುಪಯೋಗಕ್ಕೆ ಶ್ರಮಿಸುವುದು.
- 1984ರ ಮೀನುಗಾರಿಕಾ ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು ಪ್ರಸಕ್ತ ಪರಿಸ್ಥಿತಿಗೆ ಅನುಗುಣವಾಗಿ ಬದಲಾವಣೆ ತರುವುದು.
- ಮೀನುಗಾರಿಕೆಗೆ ಸಂಬಂಧಪಟ್ಟ ಎಲ್ಲಾ ಇನ್ಸೂರೆನ್ಸ್ ಕ್ಷೇಮ್ಗಳನ್ನು ಕಾಲಮಿತಿಯೊಂದಿಗೆ ಪಾವತಿ ಮಾಡಲು ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುವುದು.
- ಡೀಸೆಲ್ ಪಾಸ್ ಪುಸ್ತಕ ಹಾಗೂ ಲೈಸೆನ್ಸ್ ಮರುನವೀಕರಣಗಳನ್ನು ಸರಳೀಕರಣಗೊಳಿಸುವುದು.
- ಕರ್ನಾಟಕ ಕರಾವಳಿಯಲ್ಲಿ ಮೀನುಗಾರಿಕೆಗೆ ಸಂಬಂಧಪಟ್ಟ ಹವಾಮಾನ ಮುನ್ಸೂಚನಾ ಕೇಂದ್ರವನ್ನು ಸ್ಥಾಪಿಸಲು ಪ್ರಯತ್ನಿಸುವುದು.
- ಮೀನುಗಾರಿಕೆಗೆ ಅನುಕೂಲವಾಗುವಂತೆ ಅಂತರರಾಜ್ಯ ಸಮನ್ವಯ ಸಮಿತಿಯನ್ನು ರಚಿಸಲು ಪ್ರಯತ್ನಿಸುವುದರೊಂದಿಗೆ ದೇಶದ ಪಶ್ಚಿಮ ಕರಾವಳಿಯ ಏಕರೂಪ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು.
- ಕೆ.ಎಸ್.ಡಿ.ಸಿ ಸಂಸ್ಥೆಯನ್ನು ಅಭಿವೃದ್ಧಿಗೊಳಿಸಲು ಪ್ರಯತ್ನ.
- ಅಧಿಕ ಮೀನುಗಾರಿಕೆ ಹಾಗೂ ಬೋಟ್ ಇಂಜಿನ್ ಅಶ್ವಶಕ್ತಿಗನುಗುಣವಾಗಿ ವಾರ್ಷಿಕ ಕೋಟಾ ಹೆಚ್ಚಿಸುವುದು ಹಾಗೂ ಕನಿಷ್ಠ ದಿನವಹಿ 500 ಲೀಟರ್ ಡೀಸೆಲ್ ನೀಡಲು ಪ್ರಯತ್ನಿಸುವುದು.
- ಆಯಾಯ ಬಂದರಿನ ಮೀನುಗಾರಿಕೆಗೆ ಸಂಬಂಧಪಟ್ಟ ಸುರ್ಮಿ, ಫಿಲ್, ಐಸ್ ಪ್ಲಾಂಟ್ ಮುಂತಾದ ಕಾರ್ಖಾನೆಗಳನ್ನು ಪ್ರಾರಂಭ ಮಾಡಲು ಪ್ರೋತ್ಸಾಹಿಸುವುದು.
- ರಾಜ್ಯದಲ್ಲಿ ನಡೆಯುತ್ತಿರುವ ಹೊರ ರಾಜ್ಯದ ಅಕ್ರಮ ಮೀನುಗಾರಿಕೆಯನ್ನು ನಿಷೇಧಿಸುವುದು.
5. ಮೂಲಭೂತ ಸೌಕರ್ಯ ಅಭಿವೃದ್ಧಿ
- ಮಲೆನಾಡಿಗೆ ಪೂರಕವಾಗಿರುವ ಮಿನಿ ಬಸ್ ಸಂಪರ್ಕ ಜಾಲವನ್ನು ವಿಸ್ತರಿಸುವಂತೆ ಕೆ.ಎಸ್.ಆರ್.ಟಿ.ಸಿ.ಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದು.
- ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ “ಏರ್ ಸ್ಟ್ರಿಪ್” ನಿರ್ಮಾಣಕ್ಕೆ ಪ್ರಯತ್ನ.
- ಬಂದರಿನ ಸಂಪರ್ಕ ರಸ್ತೆಗಳ ಅಭಿವೃದ್ಧಿ.
- ಬಂದರುಗಳಲ್ಲಿ ಪಾರ್ಕಿಂಗ್ ಸಮಸ್ಯೆಯನ್ನು ಬಗೆಹರಿಸಲು ಹೈಟೆಕ್ ಪಾರ್ಕಿಂಗ್ ಕಟ್ಟಡಗಳ ನಿರ್ಮಾಣ.
- ರಾಜ್ಯದ ಎಲ್ಲಾ ಮೀನುಗಾರಿಕಾ ಬಂದರುಗಳ ವಿಸ್ತರಣೆಗೆ ಕಾರ್ಯಕ್ರಮ ರೂಪಿಸುವುದು.
6. ಪ್ರವಾಸೋದ್ಯಮ ಅಭಿವೃದ್ಧಿ
- ಕರಾವಳಿ ಹಾಗೂ ಮಲೆನಾಡಿಗೆ ಪೂರಕವಾಗುವ ಹಾಗೂ ಉದ್ಯೋಗ ಸೃಷ್ಟಿಗೆ ಅನುಕೂಲವಾಗುವಂತೆ ‘ಪ್ರವಾಸೋದ್ಯಮ ನೀತಿ’ಯನ್ನು ರೂಪಿಸುವಂತೆ ಕ್ರಮ ಕೈಗೊಳ್ಳುವುದು.
- ಹೋಂ ಸ್ಟೇಗಳಿಗೆ ಸಂಬಂಧಿಸಿದ ಇಲಾಖೆಗಳಿಂದ ಆಗುತ್ತಿರುವ ಕಾನೂನಿನ ನಿರ್ಭಂದಗಳನ್ನು ಸರಳೀಕರಣಗೊಳಿಸಿ, ಈ ಉದ್ಯಮಕ್ಕೆ ಪ್ರೋತ್ಸಾಹ ನೀಡುವುದು.
- ಸಮುದ್ರ ತೀರದ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಕಾನೂನಿನ ತೊಡಕನ್ನು ನಿವಾರಿಸಿ ‘ಪರಿಸರ ಸ್ನೇಹಿ’ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಪ್ರಯತ್ನಿಸುವುದು.ದೇವಾಲಯ ಪ್ರವಾಸೋದ್ಯಮ ಅಭಿವೃದ್ಧಿ.
- ಮಲೆನಾಡು ಹಾಗೂ ಕರಾವಳಿ ಪ್ರದೇಶದ ಪ್ರವಾಸೋದ್ಯಮಕ್ಕೆ ಒತ್ತು ನೀಡಿ ಉದ್ಯೋಗವಕಾಶಗಳನ್ನು ಹೆಚ್ಚಿಸಲು ಪ್ರಯತ್ನ.
7. ಕೈಗಾರಿಕಾ ಅಭಿವೃದ್ಧಿ
- ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೈಗಾರಿಕಾ ನಿವೇಶನಗಳ ಕೊರತೆಯಿದ್ದು, ಕೈಗಾರಿಕೆಗಳಿಗೆ ಸೂಕ್ತ ಕೈಗಾರಿಕಾ ನಿವೇಶನ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ.
- ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಜಾಗದಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಕೈಗಾರಿಕಾ ವಸಾಹತು ಅಭಿವೃದ್ಧಿಗೆ ಪ್ರಯತ್ನ
- ಮಲೆನಾಡು ಭಾಗದಲ್ಲಿ ಕೃಷಿ ಪೂರಕ ಉದ್ಯಮದ ಸ್ಥಾಪನೆಗೆ ವಿಶೇಷ ಕಾರಿಡಾರ್ ಸ್ಥಾಪಿಸಲು ಪ್ರಯತ್ನ.
- ಕೃಷಿ ಕೈಗಾರಿಕಾ ವಲಯದ ಮಾದರಿಯಲ್ಲಿ ಮೀನುಗಾರಿಕಾ ಕೈಗಾರಿಕಾ ವಲಯ ನಿರ್ಮಾಣಕ್ಕಾಗಿ ಪ್ರಯತ್ನಿಸುವುದು.
- ರಫ್ತು ಉತ್ತೇಜಿಸಲು ಸಮುದ್ರ ಆಹಾರ ಸಂಸ್ಕರಣಾ ವಲಯ ಮತ್ತು ಶೇಖರಣಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ.
- ರಫ್ತು ನ್ನು ಉತ್ತೇಜಿಸಲು 10 ವಿಭಿನ್ನ ಕೃಷಿ ಮತ್ತು ಕೈಗಾರಿಕಾ ಉತ್ಪನ್ನವನ್ನು ಗುರುತಿಸುವುದು.
- ‘ನೀರಾ’ ಕ್ಷೇತ್ರದಾದ್ಯಂತ 5 ವಿವಿಧ ಸ್ಥಳಗಳಲ್ಲಿ ಶುದ್ದೀಕರಣ ಘಟಕ/ಸ್ಟೋರೇಜ್ ಕ್ಲಸ್ಟರ್.ವರ್ಷವಾರು ಉದ್ಯೋಗ ಮೇಳ
8. ಆರೋಗ್ಯ ಮತ್ತು ಶಿಕ್ಷಣ
- ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣ, ಉಡುಪಿ ಜಿಲ್ಲೆಯಲ್ಲಿ ಕೈಗಾರಿಕಾ ಕಾರ್ಮಿಕರಿಗೆ ಉಪಯೋಗವಾಗುವಂತೆ ಶೀಘ್ರವಾಗಿ ಸುಸಜ್ಜಿತ ಇ.ಎಸ್.ಐ ಆಸ್ಪತ್ರೆ ಸ್ಥಾಪಿಸಲು ಪ್ರಯತ್ನಿಸುವುದು.
- ಉಡುಪಿ ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಪ್ರಯತ್ನಿಸುವುದು.
- ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಕ್ರಮ ಕೈಗೊಳ್ಳುವುದು.
- ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿವಿಧ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸುಸಜ್ಜಿತ ‘ಸ್ಪೋರ್ಟ್ಸ್ ಕಾಂಪ್ಲೆಕ್ಸ್’ ನಿರ್ಮಾಣಕ್ಕೆ ಪ್ರಯತ್ನಿಸುವುದು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಕಾಫಿ ಮತ್ತಿತರ ವಾಣಿಜ್ಯ ಬೆಳೆಗಳಿಗೆ ಪ್ರಸಿದ್ಧವಾಗಿದ್ದು ರಾಜ್ಯಕ್ಕೆ, ದೇಶಕ್ಕೆ ಕೊಡುಗೆ ನೀಡಿದ್ದರೂ ಅಭಿವೃದ್ಧಿಯ ದೃಷ್ಟಿಯಿಂದ ಹಿಂದಿರುತ್ತದೆ. ಕ್ಷೇತ್ರವು ಗುಡ್ಡಗಾಡು ಪ್ರದೇಶಗಳಿಂದ ಕೂಡಿದ್ದು ಸರಕಾರದಿಂದ ವಿಶೇಷ ಅನುದಾನ ಪಡೆದು ಈ ಕೆಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸಲು ಇಚ್ಚಿಸಿಲಾಗಿದೆ
- ಕಾಫಿ ಬೆಳೆಯುವ ಪ್ರದೇಶಗಳಿಗೆ ಜಮೀನು ವಶಪಡಿಸುವಂತಹ ಮಾರಕ SARFAESI ಕಾಯ್ದೆ ಅನ್ವಯವಾಗಿದ್ದು, ಕಾಫಿ ಬೆಳೆಗಾರರನ್ನು ಕಾಯ್ದೆಯ ವ್ಯಾಪ್ತಿಯಿಂದ ಹೊರ ತರಲು ಪ್ರಯತ್ನ
- ಕೇಂದ್ರ ಸರ್ಕಾರ ಸಾಮ್ಯದ ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿ ಕಾಫಿ ಬೆಳೆಗಾರರಿಗೆ/ರೈತರಿಗೆ ಬಡ್ಡಿದರ ವಾರ್ಷಿಕ ಶೇಕಡಾ 9.5%-12% ತನಕ ಇದ್ದು, ಈ ಬಡ್ಡಿಯನ್ನು ಶೇಕಡಾ 4% ಅಷ್ಟು ಇಳಿಸಲು ಪ್ರಾಮಾಣಿಕ ಪ್ರಯತ್ನ.
- ಫಾರಂ ನಂ. 53,57 94ಸಿ-ಗಳ ಅಡಿಯಲ್ಲಿ ಭೂರಹಿತರಿಗೆ, ಸಣ್ಣ ರೈತರಿಗೆ ರೈತ ಕಾರ್ಮಿಕರಿಗೆ ಜಮೀನುಗಳ/ಮನೆಗಳ ಮತ್ತು ಕಟ್ಟಡ ಮಂಜೂರಿಗೆ ಬಾಕಿ ಇರುವ ಕಡತಗಳನ್ನು ಶಾಸಕರ ಸಹಕಾರದೊಂದಿಗೆ ಅತೀ ಶೀಘ್ರದಲ್ಲಿ ಪೂರ್ಣಗೊಳಿಸಲು ಪ್ರಯತ್ನ.
- ಮೂಡಿಗೆರೆ, ಶೃಂಗೇರಿ ಮತ್ತು ಇತರ ಭಾಗಗಳಲ್ಲಿ ಚುಕ್ಕಿ ರೋಗ ಮತ್ತು ಹಳದಿ ರೋಗಗಳಿಂದ ಅಡಿಕೆ ತೋಟಗಳು ನಾಶವಾಗಿದ್ದು, ಅವುಗಳ ನಿಯಂತ್ರಣಕ್ಕೆ ಅನುದಾನ ತಂದು ಪೌಷ್ಠಿಕಾಂಶ ಮತ್ತು ರೋಗ . ನಿರ್ವಹಣೆಗೆ ಒತ್ತು.
- ಅತಿವೃಷ್ಟಿ /ಅನಾವೃಷ್ಟಿ ಸಂದರ್ಭಗಳಲ್ಲಿ ತೋಟಗಾರಿಕಾ ಬೆಳೆಗಳಿಗೆ NDRF/SDRFF ನಲ್ಲಿ ಈಗಿರುವ 2 ಹೆಕ್ಟೇರ್ ವ್ಯಾಪ್ತಿಯನ್ನು 10 ಹೆಕ್ಟೇರ್ವರೆಗೆ ವಿಸ್ತರಿಸಲು ಪ್ರಯತ್ನ.
- ಹವಾಮಾನ ವೈಪರೀತ್ಯದಿಂದ ಕಾಫಿ ಬೆಳೆ ಅನೇಕ ಬಾರಿ ನಾಶ ಆಗಿದ್ದು, ಹವಾಮಾನ ಅಧಾನಿತ/ಬೆಳೆನಾಶ ಆಧಾರಿತ ಇನ್ಸೂರೆನ್ಸ್ ತರುವ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.