ಪ್ರತಿಕೂಲ ಹವಾಮಾನ; ಮಾರ್ಗಮಧ್ಯದಲ್ಲಿ ಸಿಲುಕಿದ ಅನಂತಕುಮಾರ್‌ ಹೆಗಡೆ ಪ್ರಯಾಣಿಸುತ್ತಿದ್ದ ವಿಮಾನ

Spread the love

ಪ್ರತಿಕೂಲ ಹವಾಮಾನ; ಮಾರ್ಗಮಧ್ಯದಲ್ಲಿ ಸಿಲುಕಿದ ಅನಂತಕುಮಾರ್‌ ಹೆಗಡೆ ಪ್ರಯಾಣಿಸುತ್ತಿದ್ದ ವಿಮಾನ

ಹುಬ್ಬಳ್ಳಿ: ಉತ್ತರ ಕನ್ನಡ ಸಂಸದ ಅನಂತಕುಮಾರ್‌ ಹೆಗಡೆ ಸೇರಿದಂತೆ 49 ಪ್ರಯಾಣಿಕರನ್ನು ಸಾಗಿಸುತ್ತಿದ್ದ ವಿಮಾನ ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ವಾಯುಮಾರ್ಗದಲ್ಲೇ ಸಿಲುಕಿಕೊಂಡ ಘಟನೆ ಭಾನುವಾರ ನಡೆದಿದೆ.

ಇಂಡಿಗೊ ಸಂಸ್ಥೆಯ ಬೆಂಗಳೂರು-ಹುಬ್ಬಳ್ಳಿ ನಡುವೆ ಪ್ರಯಾಣಿಸುವ 6E 7162 ವಿಮಾನ ಬೆಳಗ್ಗೆ 8.55ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಬೇಕಿತ್ತು. ಆದರೆ, ವಿಮಾನ ಕೆಳಗಿಳಿಸಲು ಅನುಕೂಲಕರ ಹವಾಮಾನ ಇಲ್ಲದ್ದರಿಂದ ಸುಮಾರು ಒಂದು ಗಂಟೆಯ ಕಾಲ ವಿಮಾನ ಗಾಳಿಯಲ್ಲಿಯೇ ಹಾರಾಡುತ್ತಿತ್ತು. ಕೊನೆಗೆ 10.25ರ ಸುಮಾರು ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

ವಿಮಾನದಲ್ಲಿ ಸಾಕಷ್ಟು ಇಂಧನ ಸಂಗ್ರಹವಿತ್ತು. ಹೀಗಾಗಿ ಏನೂ ತೊಂದರೆ ಇರಲಿಲ್ಲ. ವಾತಾವರಣ ಸಮಸ್ಯೆಯಿಂದ ತಡವಾಗಿ ಲ್ಯಾಂಡ್ ಆಗಿದೆ. ಸ್ಥಳೀಯ ವಾತಾವರಣ ಹಾಗೂ ಲ್ಯಾಂಡಿಂಗ್ ತಡವಾಗುವುದರ ಬಗ್ಗೆ ಮೊದಲೇ‌ ಮಾಹಿತಿ ಇತ್ತು ಎಂದು ಇಂಡಿಗೊ ಸಂಸ್ಥೆಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಈ ವಿಮಾನದಲ್ಲಿ ಸಂಸದ ಅನಂತಕುಮಾರ್ ಹೆಗಡೆ ಸೇರಿದಂತೆ 40 ಪ್ರಯಾಣಿಕರು ಇದ್ದರು.

ಇತ್ತೀಚೆಗಷ್ಟೇ ಕೇರಳದ ಕಲ್ಲಿಕೋಟೆಯಲ್ಲಿ ಇದೇ ರೀತಿಯ ಪ್ರತೀಕೂಲ ಹವಾಮಾನದಿಂದಾಗಿ ಏರ್ ಇಂಡಿಯಾದ ವಿಮಾನ ದುರಂತಕ್ಕೀಡಾಗಿತ್ತು.


Spread the love