ಪ್ರತಿಭಟನೆಗೆ ವಿರೋಧವಿಲ್ಲ, ಸಿದ್ದರಾಮಯ್ಯ ಅವರಿಗೆ ಅವಮಾನ ಮಾಡಿದರೆ ಕಾಂಗ್ರೆಸ್ ಸಹಿಸಲ್ಲ – ವೆರೋನಿಕಾ ಕರ್ನೆಲಿಯೋ

Spread the love

ಪ್ರತಿಭಟನೆಗೆ ವಿರೋಧವಿಲ್ಲ, ಸಿದ್ದರಾಮಯ್ಯ ಅವರಿಗೆ ಅವಮಾನ ಮಾಡಿದರೆ ಕಾಂಗ್ರೆಸ್ ಸಹಿಸಲ್ಲ – ವೆರೋನಿಕಾ ಕರ್ನೆಲಿಯೋ

ಉಡುಪಿ: ಪ್ರತಿಭಟನೆಯ ನೆಪದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿಗೆ ಅವಮಾನ ಮಾಡಿರುವುದಕ್ಕಾಗಿ ಬಿಜೆಪಿ ನಾಯಕರ ವಿರುದ್ದ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಕಾನೂನು ಎಲ್ಲರಗೂ ಒಂದೇ ಎನ್ನುವುದನ್ನು ಇನ್ನಾದರೂ ಬಿಜೆಪಿಗರು ಆರ್ಥಮಾಡಿಕೊಳ್ಳಲಿ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ.

ಪ್ರತಿಭಟಿಸಲು ಪ್ರತಿಯೊಬ್ಬ ಭಾರತೀಯನಿಗೆ ಅವಕಾಶವಿದ್ದು ಅದು ನ್ಯಾಯಯುತವಾದ ರೀತಿಯಲ್ಲಿ ನಡೆಸಿದರೆ ಯಾರೂ ಕೂಡ ಅದಕ್ಕೆ ವಿರೋಧವನ್ನು ವ್ಯಕ್ತಪಡಿಸುವುದಿಲ್ಲ. ಈ ಹಿಂದೆಯೂ ಕೂಡ ಬಿಜೆಪಿಗರು ಹಲವಾರು ಪ್ರತಿಭಟನೆಗಳನ್ನು ನಡೆಸಿದ್ದು ಆ ಎಲ್ಲಾ ಸಮಯದಲ್ಲಿ ಅವರುಗಳ ಮೇಲೆ ಪ್ರಕರಣ ದಾಖಲಿಸಲಾಗಿದೆಯೇ? ರಾಜ್ಯವನ್ನು ಆಳುತ್ತಿರುವ ಮುಖ್ಯಮಂತ್ರಿ ಒಂದು ಗೌರವದ ಹುದ್ದೆಯಲ್ಲಿದ್ದಾಗ ಅವರ ಪ್ರತಿಕೃತಿ ರಚಿಸಿ ಚಪ್ಪಲಿಯಿಂದ ಹೊಡೆದು ಅವಮಾನಿಸುವುದು ಸರಿಯಾದ ಕ್ರಮವಲ್ಲ. ಸ್ಥಳದಲ್ಲಿ ಉಪಸ್ಥಿತರಿದ್ದ ಶಾಸಕರು ಇದನ್ನು ಕಂಡು ಕುರುಡರಂತೆ ವರ್ತಿಸುವ ಬದಲು ತಡೆಯುವ ಕೆಲಸ ಮಾಡಬೇಕಾಗಿತ್ತು ಅದನ್ನು ಬಿಟ್ಟು ತನ್ನ ಕಾರ್ಯಕರ್ತರು ಮಾಡಿದ್ದೆ ಸರಿ ಎಂಬಂತೆ ವರ್ತಿಸಿರುವುದು ಸರಿಯಾದ ವರ್ತನೆಯಲ್ಲ.

ಈ ಹಿಂದೆ ಹಲವಾರು ಪ್ರಕರಣಗಳಲ್ಲಿ ಬಿಜೆಪಿ ಆಡಳಿತದಲ್ಲಿರುವ ಮುಖ್ಯಮಂತ್ರಿಗಳನ್ನು ಅವಮಾನಿಸಿದವರ ವಿರುದ್ದ ಕೂಡ ಪ್ರಕರಣಗಳನ್ನು ದಾಖಲಿಸಿರುವುದು ಬಿಜೆಪಿಗರು ಮರೆತಂತೆ ಕಾಣುತ್ತಿದೆ. ಇದರಲ್ಲಿ ಕಾಂಗ್ರೆಸ್ ಯಾವುದೇ ದ್ವೇಷ ರಾಜಕಾರಣ ಮಾಡಲು ಹೊರಟಿಲ್ಲ ಬದಲಾಗಿ ಕಾನೂನಿನ ಪ್ರಕಾರ ಒರ್ವ ಮುಖ್ಯಮಂತ್ರಿಯನ್ನು ಅವಮಾನಿಸಿರುವುದು ಪಕ್ಷದ ಕಾರ್ಯಕರ್ತರಿಗೆ ನೋವು ತಂದಿದ್ದು ಅದಕ್ಕಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಅದರಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಇದನ್ನು ತಿರುಚಿ ಬಿಜೆಪಿಗರು ಇದಕ್ಕೆ ಬೇರೆಯೇ ಅರ್ಥ ನೀಡುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ,

ಸದಾ ಸಂಸ್ಕೃತಿ ಸಭ್ಯತೆಯ ಪಾಠ ಹೇಳುವು ಬಿಜೆಪಿಗರು ಮಾಡುವ ಎಲ್ಲಾ ಪುಂಡಾಟಗಳನ್ನು ಕಣ್ಣು ಮುಚ್ಚಿ ಒಪ್ಪಲು ಕಾಂಗ್ರೆಸ್ ಪಕ್ಷ ಹಾಗೂ ಅದರ ಕಾರ್ಯಕರ್ತರು ಕೈಗೆ ಬಳೆ ತೊಟ್ಟು ಕುಳಿತಿಲ್ಲ. ಸೂಕ್ತ ಸಮಯದಲ್ಲಿ ಕಾನೂನಿನ ಮೂಲಕ ಸೂಕ್ತ ಉತ್ತರವನ್ನು ನೀಡುವ ಕೆಲಸವನ್ನು ಪಕ್ಷ ಮಾಡಲಿದೆ. ಶಾಸಕರನ್ನು ಆಯ್ಕೆ ಮಾಡಿದ ಜನರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಶಾಸಕರು ಹಾಗೂ ನಗರಸಭಾ ಸದಸ್ಯರು ಮೊದಲು ಮಾಡಲಿ ಕೇವಲ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ಕೆಲಸ ಮಾಡಿ ತೋರಿಸುವ ತಾಕತ್ತನ್ನು ಶಾಸಕರು ತೋರಿಸಬೇಕಾಗಿದೆ. ಅವರ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿ ಒರ್ವ ಶಾಸಕರದ್ದಾಗಿದ್ದು ಅದನ್ನು ಮರೆತು ಬೇರೆಲ್ಲಾ ಕೆಲಸಗಳಿಗೆ ಕೈ ಹಾಕುವ ಬದಲು ಒರ್ವ ಮಾದರಿ ಶಾಸಕರಾಗುವತ್ತ ಗಮನ ಹರಿಸಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love