ಪ್ರತಿ ದಿನ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸಿ: ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್

Spread the love

ಪ್ರತಿ ದಿನ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸಿ: ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್

ನವದೆಹಲಿ: ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ಪ್ರತಿ ದಿನ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ  ಸೂಚನೆ ನೀಡಿದೆ.

ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಪುನರ್ ಪರಿಶೀಲಿಸುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯ ಉಭಯ ರಾಜ್ಯಗಳ  ಪರ ವಕೀಲರ ವಾದವನ್ನು ಆಲಿಸಿತು. ಬಳಿಕ ತನ್ನ ಆದೇಶ ನೀಡಿದ ನ್ಯಾಯಾಲಯ ಪ್ರತಿ ದಿನ 12 ಸಾವಿರ ಕ್ಯೂಸೆಕ್ಸ್ ನಂತೆ ಸೆಪ್ಟೆಂಬರ್ 20ರವರೆಗೆ ನೀರು ಹರಿಸುವಂತೆ ಆದೇಶ ನೀಡಿದೆ.  ಅಲ್ಲದೆ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 20ಕ್ಕೆ ಮುಂದೂಡಲಾಗಿದೆ.

ಇದಕ್ಕೂ ಮೊದಲು ಕರ್ನಾಟಕದ ಪರ ತಮ್ಮ ವಾದ ಮಂಡಿಸಿದ ವಕೀಲ ಫಾಲಿ ನಾರಿಮನ್ ಅವರು, ಕರ್ನಾಟಕ ರಾಜ್ಯವೇ ಸಾಕಷ್ಟು ನೀರಿನ ತೊಂದರೆ ಎದುರಿಸುತ್ತಿದೆ. ಈ ಸಂಕಷ್ಟ ಕಾಲದಲ್ಲಿ  ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ತನ್ನ ಈ ಹಿಂದಿನ ಆದೇಶಕ್ಕೆ ತಡೆ ನೀಡಬೇಕು ಎಂದು ಹೇಳಿದರು.

ಇದಕ್ಕೆ ತಕರಾರು ತೆಗೆದ ತಮಿಳುನಾಡು ಪರ ವಕೀಲ ಶೇಖರ್ ನಫಡೆ ಅವರು, ಕರ್ನಾಟಕದ ವಾದವನ್ನು ಒಪ್ಪುವಂತಿಲ್ಲ. ಕರ್ನಾಟಕ ಏಕ ಪಕ್ಷೀಯವಾಗಿ ಮೇಲ್ಮನವಿ ಸಲ್ಲಿಸಿದೆ. ಉಭಯ ರಾಜ್ಯಗಳಿಗೂ ನೀರು ಸರಿಸಮಾನವಾಗಿ ಹಂಚಿಕೆಯಾಗಬೇಕು. ಆದರೆ ಪ್ರಸ್ತುತ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿ ಏಕಪಕ್ಷೀಯವಾಗಿದೆ ಎಂದು ವಾದ ಮಂಡಿಸಿದರು.

ಬಳಿಕ ತಮ್ಮ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನ್ಯಾ. ದೀಪಕ್ ಮಿಶ್ರಾ ಮತ್ತು ನ್ಯಾ. ಉದಯ್ ಲಲಿತ್  ನೇತೃತ್ವದ ನ್ಯಾಯಪೀಠ ಪ್ರತಿ ನಿತ್ಯ 12 ಸಾವಿರ ಕ್ಯೂಸೆಕ್ಸ್ ನೀರಿನಂತೆ ಸೆಪ್ಟೆಂಬರ್ 20ರವರೆಗೆ ನೀರು ಬಿಡುವಂತೆ ಆದೇಶ ನೀಡಿತು. ಆ ಮೂಲಕ ಈ ಹಿಂದಿನ ಆದೇಶಕ್ಕಿಂತ ಕರ್ನಾಟಕ ತಮಿಳುನಾಡಿಗೆ ಹೆಚ್ಚುವರಿ 3 ಟಿಎಂಸಿ ಅಧಿಕ ನೀರು ಬಿಡುವ ಅನಿವಾರ್ಯತೆ ಎದುರಾಗಿದೆ.

ಕರ್ನಾಟಕದ ಪರ ತೀರ್ಪಿಗೆ ತಮಿಳುನಾಡು ಪರ ವಕೀಲರ ಕೊಕ್ಕೆ?

ಇದಕ್ಕೂ ಮೊದಲು ಕರ್ನಾಟಕದ ಪರ ವಕೀಲ ನಾರಿಮನ್ ವಾದಕ್ಕೆ ಮನ್ನಣೆ ನೀಡಿದ್ದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು, ಪ್ರತಿನಿತ್ಯ 10 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಆದೇಶ ನೀಡಲು  ಮುಂದಾಗುತ್ತಿದ್ದಂತೆಯೇ ತಮಿಳುನಾಡಪರ ವಕೀಲ ಶೇಖರ್ ನಫಡೆ ಆದೇಶಕ್ಕೆ ತಕರಾರು ತೆಗೆದರು. 10 ಸಾವಿರ ಕ್ಯೂಸೆಕ್ಸ್ ನೀರು ಏನೇನಕ್ಕೂ ಸಾಲುವುದಿಲ್ಲ. ನೀರಿಲ್ಲದೇ ತಮಿಳುನಾಡು  ರೈತರು ಸಾಕಷ್ಟು ತೊಂದರೆಗೀಡಾಗಿದ್ದಾರೆ ಎಂದು ಹೇಳಿದರು. ಆ ಬಳಿಕ ಇಡೀ ತೀರ್ಪನ್ನೇ ಬದಲಿಸಿದ ನ್ಯಾಯಮೂರ್ತಿಗಳು ಪ್ರತಿನಿತ್ಯ 12 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ  ನೀಡಿದರು.

ಕರ್ನಾಟಕಕ್ಕೆ ಮುಳುವಾದ ಪ್ರತಿಭಟನೆ?

ಇದೇ ವೇಳೆ ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಕರ್ನಾಟಕದ ಜನತೆ ವಿರೋಧಿಸಿದ್ದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನ್ಯಾ.ದೀಪಕ್ ಮಿಶ್ರಾ  ಅವರು, ದೇಶದ ನಾಗರಿಕರು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಬೇಕು. ಆದೇಶ ಪಾಲನೆ ಪ್ರತಿಯೊಬ್ಬ ನಾಗರೀಕನ ಕರ್ತವ್ಯ. ಯಾವುದೇ ಕಾರಣಕ್ಕೂ ನಾಗರಿಕರು ಕಾನೂನು ಕೈಗೆ  ತೆಗೆದುಕೊಳ್ಳಬಾರದು. ಅಂತೆಯೇ ಕಾರ್ಯಾಂಗ ಕೂಡ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಮಧ್ಯಂತರ ಅರ್ಜಿ ವಿಚಾರಣೆಯಲ್ಲೂ ಕರ್ನಾಟಕಕ್ಕೆ ಹಿನ್ನಡೆ; ರಾಜ್ಯಾದ್ಯಂತ ಭುಗಿಲೆದ್ದ ಆಕ್ರೋಶ

ಬೆಂಗಳೂರು: ಮದ್ಯಂತರ ಅರ್ಜಿ ವಿಚಾರಣೆಯಲ್ಲೂ ಕರ್ನಾಟಕಕ್ಕೆ ಹಿನ್ನಡೆಯಾದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಪ್ರತಿಭಟನಾಕಾರರ ಆಕ್ರೋಶ ಭುಗಿಲೆದ್ದಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು  ಯತ್ನಿಸಿದ ಕನ್ನಡಪರ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅತ್ತ ಸುಪ್ರೀಂ ಕೋರ್ಟ್ ನಲ್ಲಿ ಮಧ್ಯಂತರ ಅರ್ಜಿ ವಿಚಾರಣೆ ತೀರ್ಪು ಹೊರ ಬೀಳುತ್ತಿದ್ದಂತೆಯೇ ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ಅವರು ಇಂದು  ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚಿಸಿದರು. ಬಳಿಕ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು ಇದೇ ಸೆಪ್ಟೆಂಬರ್ 15ರಂದು ರಾಜ್ಯಾದ್ಯಂಚ  ರೈಲು ಬಂದ್ ಮಾಡುವ ಪ್ರತಿಭಟನೆ ಮಾಡುವುದಾಗಿ ಘೋಷಣೆ ಮಾಡಿದರು.
ಬಳಿಕ ಸಾರಾಗೋವಿಂದು ಸೇರಿದಂತೆ, ಕರ್ನಾಟಕ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರೊಂದಿಗೆ ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಅಲ್ಲೇ ಕರ್ತವ್ಯ  ನಿರತರಾಗಿದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಒಂದು ಹಂತದಲ್ಲಿ ವಾಟಾಳ್ ನಾಗರಾಜ್, ಸಾರಾಗೋವಿಂದು ಸೇರಿದಂತೆ ಹಲವು ಕನ್ನಡಪರ ಸಂಘಟನೆಯ ಮುಖಂಡರು  ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು.
ತಮ್ಮನ್ನು ತಡೆದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್ ಅವರು, ತಾವೇನೂ ದರೋಡೆಕೋರರಲ್ಲ. ಈ ಹಿಂದೆಯೂ ಕೂಡ ವಿಧಾನಸೌಧ ಮುತ್ತಿಗೆಗೆ  ಪ್ರಯತ್ನಿಸಿದೆವು. ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಇಲ್ಲಿಗೆ ಆಗಮಿಸಿದ್ದೇವೆಯೇ ಹೊರತು ಕಾನೂನು ಸುವ್ಯವಸ್ಥೆಗೆ ಭಂಗ ತರಲು ಅಲ್ಲ ಎಂದು ಹೇಳಿದರು. ಬಳಿಕ ವಾಟಾಳ್ ನಾಗರಾಜ್,  ಸಾರಾಗೋವಿಂದು ಸೇರಿದಂತೆ ವಿವಿಧ ಕನ್ನಡಪರ ಮುಖಂಡರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ರಾಜ್ಯಾದ್ಯಂತ ಭುಗಿಲೆದ್ದ ಆಕ್ರೋಶ
ಇದೇ ವೇಳೆ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಮತ್ತೆ ಆಕ್ರೋಶ ಭುಗಿಲೆದ್ದಿದ್ದು, ರಾಜಧಾನಿ ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನಾಕಾರರ  ಆಕ್ರೋಶ ಭುಗಿಲೆದ್ದಿದೆ. ಮಂಡ್ಯದಲ್ಲಿ ರೈತರು ಬೃಹತ್ ಜಾಥಾ ನಡೆಸುವ ಮೂಲಕ ಸುಪ್ರೀಂ ಕೋರ್ಟ್ ಆದೇಶವನ್ನು ವಿರೋಧಿಸಿದರೆ, ಮೈಸೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ  ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ಬೆಳಗಾವಿಯಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಚೆನ್ನಮ್ಮ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು.
ಬೆಂಗಳೂರು ಪ್ರಕ್ಷುಬ್ಧ
ಇನ್ನು ಕಾವೇರಿ ವಿಚಾರವಾಗಿ ರಾಜಧಾನಿ ಬೆಂಗಳೂರು ಪ್ರಕ್ಷುಬ್ಧಗೊಂಡಿದ್ದು, ಮೈಸೂರು ರಸ್ತೆಯಲ್ಲಿ ಉದ್ರಿಕ್ತರ ಗುಂಪೊಂದು ತಮಿಳುನಾಡು ನೋಂದಣಿಯ ಲಾರಿಗಳಿಗೆ ಬೆಂಕಿ ಹಾಕಲಾಗಿದೆ.  ಮೈಸೂರು ರಸ್ತೆಯಲ್ಲಿರುವ ಟಿಂಬರ್ ಯಾರ್ಡ್ ನಲ್ಲಿ ಈ ಘಟನೆ ನಡೆದಿದ್ದು, ಲಾರಿ ಸಂಪೂರ್ಣ ಭಸ್ಮವಾಗಿದೆ ಎಂದು ತಿಳಿದುಬಂದಿದೆ. ಅಂತೆಯೇ ಮೈಸೂರುರಸ್ತೆಯ ಸ್ಯಾಟೆಲೈಟ್ ಬಸ್  ನಿಲ್ದಾಣದ ಆವರಣದಲ್ಲಿರುವ ಅಡಿಯಾರ್ ಆನಂದಭವನದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಹೊಟೆಲ್ ನ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ವಿಚಾರ  ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅರೆ ಸೇನಾ ಪಡೆ ಸಿಬ್ಬಂದಿಗಳು ಲಘು ಲಾಠಿ ಪ್ರಹಾರ ನಡೆಸುವ ಮೂಲಕ ಉದ್ರಿಕ್ತರನ್ನು ಚದುರಿಸಿದರು. ಪೊಲೀಸರು  ಆಗಮಿಸುತ್ತಿದ್ದಂತೆಯೇ ಸ್ಯಾಟೆಲೈಟ್ ಬಸ್ ನಿಲ್ದಾಣಕ್ಕೆ ಪ್ರತಿಭಟನಾಕಾರರು ಹಾಗೂ ಪೊಲೀಸರು ನುಗ್ಗಿದ್ದರಿಂದ ಸ್ಯಾಟೆಲೈಟ್ ಬಸ್ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ  ಸೃಷ್ಟಿಯಾಗಿತ್ತು. ಪ್ರಸ್ತುತ ಬಸ್ ನಿಲ್ದಾಣದಲ್ಲಿ ಪೊಲೀಸರ ಲಾಠಿಚಾರ್ಜ್ ವಿರೋಧಿಸಿ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ.
ಸೆಪ್ಟೆಂಬರ್ 5ರಂದು ನೀಡಿದ್ದ ತೀರ್ಪಿಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಕರ್ನಾಟಕ ಸರ್ಕಾರ ಕಳೆದ ಶನಿವಾರ ಮದ್ಯಂತರ ಅರ್ಜಿ ಸಲ್ಲಿಸಿತ್ತು. ಇಂದು ಈ ಅರ್ಜಿಯ ವಿಚಾರಣೆ ನಡೆಸಿದ  ನ್ಯಾಯಾಲಯ ಸೆಪ್ಟೆಂಬರ್ 20ರವರೆಗೆ ಪ್ರತಿನಿತ್ಯ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸಬೇಕು ಎಂದು ಹೇಳಿತ್ತು. ಈ ಹಿಂದಿನ ತೀರ್ಪಿನಲ್ಲಿ ಕರ್ನಾಟಕ 10 ಸಾವಿರ ಕ್ಯೂಸೆಕ್ಸ್ ನಂತೆ 1.50 ಲಕ್ಷ  ಕ್ಯೂಸೆಕ್ಸ್ ನೀರು ಹಿರಿಸಿದ್ದರೆ ಸಾಕಿತ್ತು. ಆದರೆ ಇಂದಿನ ತೀರ್ಪಿನ ಬಳಿಕ ಸರ್ಕಾರ ಹೆಚ್ಚುವರಿಯಾಗಿ 30 ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸಬೇಕಿದೆ. ಅಂದರೆ ಒಟ್ಟಾರೆ ಸೆಪ್ಟೆಂಬರ್  20ರವರೆಗೆ ಒಟ್ಟು 1.80ಲಕ್ಷ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸಬೇಕಿದೆ.

ಕ್ರಪೆ: ಕನ್ನಡಪ್ರಭ


Spread the love