ಪ್ರಧಾನಿ, ಸಂಸದರಿಗೆ ಸಂತ್ರಸ್ತರ ಕಾಳಜಿಯಿಲ್ಲ – ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಳ್ತಂಗಡಿ: ‘ರಾಜ್ಯ ಪ್ರವಾಹದಿಂದ ತತ್ತರಿಸಿದ್ದರೂ ಪ್ರಧಾನಿ ಮೋದಿ ಇನ್ನೂ ಭೇಟಿ ನೀಡಿಲ್ಲ. ಕೇಂದ್ರ ಸರ್ಕಾರ ಒಂದು ರೂಪಾಯಿ ನೀಡಿಲ್ಲ. ರಾಜ್ಯದಿಂದ 25 ಜನ ಬಿಜೆಪಿ ಸಂಸದರಿದ್ದಾರೆ. ಅವರು ಜನಪರ ಕಾಳಜಿಯ ಸಂಸದರಾಗಿದ್ದರೆ, ಪ್ರಧಾನಿಯನ್ನು ಕರೆತಂದು ಪರಿಹಾರ ನೀಡುವಂತೆ ಮಾಡಬೇಕಾಗಿತ್ತು. ಸಂತ್ರಸ್ತರ ಬಗ್ಗೆ, ಜನಸಾಮಾನ್ಯರ ಬಗ್ಗೆ ಇವರಿಗೆ ಕಾಳಜಿಯಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ತಾಲ್ಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಂತ್ರಸ್ತರ ಅಹವಾಲು ಆಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಮೋದಿಯವರು ಕರ್ನಾಟಕದ ವೋಟು ತೆಗೆದುಕೊಂಡು ಹೋದರೇ ಹೊರತು, ಅವರಿಗೆ ರಾಜ್ಯದ ಜನತೆಯ ಬಗ್ಗೆ ಕಾಳಜಿಯಿಲ್ಲ. 2009ರಲ್ಲಿ ರಾಜ್ಯದಲ್ಲಿ ಪ್ರವಾಹ ಸಂಭವಿಸಿದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಕೂಡಲೇ ರಾಜ್ಯಕ್ಕೆ ಬಂದು ₹1,600 ಕೋಟಿ ಪರಿಹಾರ ನೀಡಿದ್ದರು. ಈ ಮಾದರಿಯನ್ನು ಅನುಸರಿಸಲಿ’ ಎಂದು ಆಗ್ರಹಿಸಿದರು.
ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರ್ಲಾನಿಗೆ ಭೇಟಿ ನೀಡಿದಾಗ, ಅಲ್ಲಿಗೆ ಬಂದಿದ್ದ ಸಂತ್ರಸ್ತ ಕುಟುಂಬಗಳು, ‘ನಮ್ಮ ತೋಟಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿವೆ. ಮನೆಗೆ ಏನೂ ಆಗಿಲ್ಲ. ನಮಗೆ ಈ ವರೆಗೆ ಒಂದು ರೂಪಾಯಿ ಪರಿಹಾರ ದೊರೆತಿಲ್ಲ. ನಾವು ಹೇಗೆ ಬದುಕಬೇಕು ಎಂದೇ ತಿಳಿಯುತ್ತಿಲ್ಲ’ ಎಂದು ತಿಳಿಸಿದರು.
ನೇರವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಕರೆ ಮಾಡಿದ ಸಿದ್ದರಾಮಯ್ಯ, ಈ ಕುಟುಂಬಗಳ ಅಳಲನ್ನು ಕೇಳಿ, ಅವರಿಗೆ ಕೂಡಲೇ ಸೂಕ್ತ ಪರಿಹಾರ ಒದಗಿಸಿ ಎಂದು ಸೂಚಿಸಿದರು. ಕೇವಲ ಮನೆ ಕಳೆದುಕೊಂಡವರಿಗೆ ತಲಾ ₹10 ಸಾವಿರ ತಕ್ಷಣದ ಪರಿಹಾರ ನೀಡಿದ್ದಾರೆ. ಇಡೀ ಕೃಷಿ ಭೂಮಿಯನ್ನು ಕಳೆದುಕೊಂಡವರಿಗೆ ಯಾವುದೇ ಪರಿಹಾರವನ್ನೂ ನೀಡಲಾಗಿಲ್ಲ ಇದು ಸರಿಯಾದ ಕ್ರಮವಲ್ಲ. ಕೃಷಿ ಭೂಮಿ ಹಾಗೂ ಸರ್ವಸ್ವವನ್ನೂ ಕಳೆದುಕೊಂಡವರಿಗೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದರು.
ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕ ಮೊಹಿಯುದ್ದೀನ್ ಬಾವ, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮಿಥುನ್ ರೈ, ಉಪಸ್ಥಿತರಿದ್ದರು.