ಪ್ರಮೋದ್ ಮಧ್ವರಾಜ್ ಬಹುಮತದಿಂದ ಗೆಲ್ಲಲ್ಲಿದ್ದಾರೆ – ಸಚಿವ ಕೆ.ಜೆ ಜಾರ್ಜ್
ಉಡುಪಿ: ಹಿಂದುತ್ವ ಗಾಳಿಯೇ ಚುನಾವಣೆಯ ವಿಷಯವಾಗುವುದಾದರೆ ಪ್ರಮೋದ್ ಮಧ್ವರಾಜ್ ಯಾವ ಜಾತಿ ಅವರೂ ಕೂಡ ಹಿಂದು ಅಲ್ಲವೇ ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ ಜೆ ಜಾರ್ಜ್ ಪ್ರಶ್ನಿಸಿದ್ದಾರೆ.
ಅವರು ಸೋಮವಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರ ನಾಮಪತ್ರ ಸಲ್ಲಿಕೆಯ ಬಳಿಕ ಮಾಧ್ಯಮಗಳಿಗೆ ಮಾತನಾಡಿ ಈ ಕ್ಷೇತ್ರದಲ್ಲಿ ಯಾವುದೇ ಹಿಂದುತ್ವದ ಗಾಳಿ ಇಲ್ಲ ನಮ್ಮ ಪಕ್ಷದಲ್ಲೂ ಕೂಡ ಹಿಂದೂಗಳಿದ್ದಾರೆ ಆದರೆ ನಾವು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ. ಈ ಕ್ಷೇತ್ರದಲ್ಲಿ ಸಂಸದೆಯಾಗಿದ್ದ ಶೋಭಾ ಕರಂದ್ಲಾಜೆ ಕಳೆದ 5 ವರ್ಷಗಳಲ್ಲಿ ಕ್ಷೇತ್ರವನ್ನು ನಿರ್ಲಕ್ಷಿಸಿದ್ದಾರೆ. ಈ ಬಾರಿ ಮೈತ್ರಿ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಅವರಿಗೆ ಅವಕಾಶ ನೀಡಿದ್ದು ಅವರು ಬಹುಮತದಿಂದ ಗೆಲ್ಲುತ್ತಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರ ನಡೆಸುತ್ತಿದ್ದು ಅದರಂತೆ ಚುನಾವಣೆಯಲ್ಲಿ ಸೀಟು ಹಂಚಿಕೆ ನಡೆದಿದೆ. ಈ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ ಪಕ್ಷವನ್ನು ಹೊರಗಿಡುವುದಷ್ಟೇ ನಮ್ಮ ಗುರಿ ಎಂದರು.
ತುಮಕೂರಿನಲ್ಲಿ ಹಾಲಿ ಸಂಸದ ಮುದ್ದೇ ಹನುಮೇಗೌಡರಿಗೆ ಟಿಕೇಟ್ ನಿರಾಕರಿಸಿದ ಕುರಿತು ಮಾತನಾಡಿದ ಜಾರ್ಜ್ ಅವರಿಗೆ ಕಾಂಗ್ರೆಸ್ ಮೋಸ ಮಾಡಿಲ್ಲ ಹಿಂದಿನ ಚುನಾವಣೆಯಲ್ಲಿ ಅವರಿಗೆ ಟಿಕೇಟ್ ನೀಡಿ ಗೆಲ್ಲಿಸಿದ್ದು ಕಾಂಗ್ರೆಸ್ ಪಕ್ಷ. ಸೀಟು ಹಂಚಿಕೆ ನಿಯಮದನ್ವಯ ಈ ಬದಲಾವಣೆ ಅನಿವಾರ್ಯವಾಗಿದೆ ಮುಂದೆ ಅವರಿಗೆ ಪಕ್ಷದಲ್ಲಿ ಉನ್ನತ ಹುದ್ದೆ ನೀಡಲಾಗುವುದು ಎಂದರು.