Home Mangalorean News Kannada News ಪ್ರಮೋದ್ ಮುತಾಲಿಕ್ ಜಿಲ್ಲೆಯ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ : ಉಡುಪಿ ಜಿಲ್ಲಾ ಯುವ ಕಾಂಗ್ರೆಸ್

ಪ್ರಮೋದ್ ಮುತಾಲಿಕ್ ಜಿಲ್ಲೆಯ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ : ಉಡುಪಿ ಜಿಲ್ಲಾ ಯುವ ಕಾಂಗ್ರೆಸ್

Spread the love

ಪ್ರಮೋದ್ ಮುತಾಲಿಕ್ ಜಿಲ್ಲೆಯ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ : ಉಡುಪಿ ಜಿಲ್ಲಾ ಯುವ ಕಾಂಗ್ರೆಸ್

 ಉಡುಪಿ: ಎಲ್ಲಾ ಧರ್ಮದವರು ಪ್ರೀತಿ ಹಾಗೂ ಸಹಬಾಳ್ವೆಯಿಂದ ಬದುಕುತ್ತಿರುವ ಉಡುಪಿ ಜಿಲ್ಲೆಯ ಶಾಂತಿ ಸೌಹಾರ್ದವನ್ನು ಕದಡಿಸುವ ಕೆಲಸವನ್ನು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ ಮಾಡುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಆರೋಪಿಸಿದ್ದಾರೆ.

 ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೇಜಾವರ ಸ್ವಾಮಿ  ದೇಶಕ್ಕೆ ಮಾರ್ಗದರ್ಶಕರಾಗಿದ್ದು, ಎಲ್ಲಾ ಧರ್ಮದವರೂ ಜೊತೆಯಾಗಿ ಸಹಬಾಳ್ವೆ ನಡೆಸಬೇಕು ಎಂಬ  ಮನೋಭಾವವನ್ನು ಬಿತ್ತುತ್ತಿರುವ ಪೂಜ್ಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಕೃಷ್ಣ ಮಠದ ಪರಿಸರದಲ್ಲಿ ಮುಸ್ಲಿಂ ಸಮುದಾಯದ ರಂಜಾನ್ ಉಪವಾಸ ಬಿಡುವ ಕೊನೆಯ ದಿನದಂದು ಇಫ್ತಾರ್ ಕೂಟವನ್ನು ಆಯೋಜಿಸಿದ್ದು ತಪ್ಪು ಎಂದು ಪೇಜಾವರ ಸ್ವಾಮೀಜಿಯವರ ವಿರುದ್ದ ಜುಲೈ 2 ರಂದು ಆಯೋಜಿಸಿರುವ ಪ್ರತಿಭಟನೆಯನ್ನು ಜಿಲ್ಲಾ ಯುವಕಾಂಗ್ರೆಸ್ ಖಂಡಿಸುತ್ತದೆ.

 ಉಡುಪಿ ಜಿಲ್ಲೆಯು ಹಲವಾರು ವರ್ಷಗಳಿಂದ ಶಾಂತಿಯಿಂದ ಎಲ್ಲಾ ಸಮುದಾಯದ ಜನರು ಜೊತೆಯಾಗಿ ಬಾಳುವ ಮಾದರಿ ಜಿಲ್ಲೆಯಾಗಿದೆ. ಪಕ್ಕದ ದಕ ಜಿಲ್ಲೆಯಲ್ಲಿ ಹಲವಾರು ಕೋಮು ಸಂಬಂಧಿತ ಘರ್ಷಣೆಗಳು ನಡೆದರೂ ಸಹ ಉಡುಪಿ ಜಿಲ್ಲೆಯ ಗಡಿಯನ್ನು ದಾಟಿ ಬಂದಿಲ್ಲ ಇದಕ್ಕೆ ಕಾರಣ ಈ ಜಿಲ್ಲೆಯ ಶಾಂತಿಯನ್ನು ಬಯಸುವ ಜನ. ಆದರೆ ಜಿಲ್ಲೆಯಲ್ಲಿ ಶಾಂತಿಯನ್ನು ಕದಡುವ ಕೆಲಸವನ್ನು ಮಾಡುವ ಸಲುವಾಗಿಯೇ ಪ್ರಮೋದ್ ಮುತಾಲಿಕರಂತಹ ವ್ಯಕ್ತಿಗಳು ಜಿಲ್ಲೆಗೆ ಆಗಮಿಸಿ ಕ್ಷುಲ್ಲಕ ವಿಷಯಗಳನ್ನು ಹಿಡಿದುಕೊಂಡು ಜಿಲ್ಲೆಯಲ್ಲಿ ಗಲಭೆಯನ್ನು ಸೃಷ್ಟಿಸುವ ಹುನ್ನಾರವನ್ನು ಹೊಂದಿದ್ದಾರೆ ಎನ್ನುವುದು ಅವರ ವರ್ತನೆಯಿಂದ ಕಾಣುತ್ತಿದೆ. ಜುಲೈ 2 ರಂದು ಒಂದು ವೇಳೆ ಶ್ರೀರಾಮ ಸೇನೆ ಪೇಜಾವರ ಸ್ವಾಮೀಜಿಯ ವಿರುದ್ದ ಪ್ರತಿಭಟನೆ ಹಮ್ಮಿಕೊಂಡಲ್ಲಿ ಅದಕ್ಕೆ ಪರ್ಯಾಯವಾಗಿ ಜಿಲ್ಲಾ ಯುವ ಕಾಂಗ್ರೆಸ್ ಕೂಡ ಪೇಜಾವರ ಸ್ವಾಮೀಗೆ ಬೆಂಬಲಿಸಿ ಬೃಹತ್ ಮಟ್ಟದ ಪ್ರತಿಭಟನೆಯನ್ನು ಶ್ರೀರಾಮ ಸೇನೆಯ ವಿರುದ್ದ  ಹಮ್ಮಿಕೊಳ್ಳಲಿದೆ. ಇನ್ನಾದರೂ ಕೂಡ ಪ್ರಮೋದ್ ಮುತಾಲಿಕ್ ತಮ್ಮ ನಿರ್ದಾರವನ್ನು ಕೈಬಿಟ್ಟು ಪೇಜಾವರ ಸ್ವಾಮೀಜಿಯ ಬಳಿ ಕ್ಷಮೆಯಾಚಿಸಬೇಕು. ಅಲ್ಲದೆ ಜಿಲ್ಲೆಯ ಸ್ವಾಸ್ಥ್ಯ ಕೆಡಿಸುವ ಪ್ರಯತ್ನ ಮಾಡುವ ಮುತಾಲಿಕ್ ಅವರನ್ನು ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾ ಪೋಲಿಸರು ತಡೆಯಬೇಕು ಮತ್ತು ಜಿಲ್ಲೆಯಲ್ಲಿ ಶಾಂತಿ ಕಾಪಾಡಬೇಕಾಗಿದೆ ಎಂದರು.

ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಕಿಣಿ ಮಾತನಾಡಿ ಪೇಜಾವರ ಸ್ವಾಮೀಜಿಗಳು ಹಿಂದೂ ಧರ್ಮದ ರಕ್ಷಣೆಗೆ ಸದಾ ಬದ್ಧರಾಗಿದ್ದು, ಅದರ ಜೊತೆಯಲ್ಲಿಯೇ ಇತರ ಧರ್ಮಗಳ ಬಗ್ಗೆಯೂ ಪ್ರೀತಿ ಗೌರವನ್ನು ಹೊಂದಿದ್ದಾರೆ. ಮುಸ್ಲಿಂ ಸಮುದಾಯವರನ್ನು ಗೋಭಕ್ಷಕರೆಂದು, ಗೋ ಕಳ್ಳರೆಂದು ಕೆರೆದು ಪ್ರಮೋದ್ ಮುತಾಲಿಕ್ ಅವಮಾನ ಮಾಡಿರುವುದು ಖಂಡನೀಯ.  ಆಹಾರದ ಹಕ್ಕು ಅವರವರ ವಿವೇಚನೆಗೆ ಬಿಟ್ಟ ವಿಷಯವಾಗಿದ್ದು, ಪ್ರಮೋದ್ ಮುತಾಲಿಕ್ ಅದರ ಗುತ್ತಿಗೆಯನ್ನು ಪಡೆದಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಮುಸ್ಲಿಂ ವಿದ್ವಾಂಸರು ಸೌಹಾರ್ದ ಸಮಾವೇಶ ನಡೆಸುವ ಮೂಲಕ ಎಲ್ಲಾ ವರ್ಗದ ಜನರ ಶಾಂತಿ ರಂಜಿತ ಬದುಕಿಗೆ ಕೊಡುಗೆಗಳನ್ನು ನೀಡುತ್ತಿರುವಾಗ   ಪೇಜಾವರ ಮಠಾಧೀಶರಾದ   ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಉಡುಪಿ ಮಠದಲ್ಲಿ ಮುಸ್ಲಿಮರಿಗೆ ಇಫ್ತಾರ್ ಮಾಡಿಸುವ ಮೂಲಕ ಸೌಹಾರ್ದತೆಯ ಸಂದೇಶ ಸಾರಿದ್ದಾರೆ ಅಲ್ಲದೆ ನಮಾಜ್ ಪ್ರಾರ್ಥನೆಗೆ ಅವಕಾಶ ನೀಡಿರುವುದು ಸ್ವಾಗತಾರ್ಹ ವಿಚಾರ. ಪೇಜಾವರ ಸ್ವಾಮೀಜಿಗಳು ಸದಾ ತಮ್ಮ ಕ್ರಾಂತಿಕಾರಕ ಬದಲಾವಣೆಗಳಿಂದ ಹೆಸರುವಾಸಿಯಾಗಿದ್ದಾರೆ. ದಲಿತ ಕೇರಿಗಳಿಗೆ ಭೇಟಿ ನೀಡಿ ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದಾರೆ ದೇಶದಲ್ಲಿ ಮುಸ್ಲಿಂರೂ ಕೂಡ ದೇಶದ ಪ್ರಜೆಗಳು ಅವರಿಗೂ ಬದುಕುವ ಹಾಗೂ ದೇವಸ್ಥಾನಗಳಿಗೂ ಹೋಗುವ ಅವಕಾಶ ಸ್ವಾತಂತ್ರ್ಯ ಇದೆ ಎನ್ನುವುದನ್ನು ವಿರೋಧಿಸುವ ಪಟ್ಟಭದ್ರ ಹಿತಾಸಕ್ತಿಗಳು ಅರ್ಥಮಾಡಿಕೊಳ್ಳಬೇಕು. ಉಡುಪಿ ಮಠಕ್ಕೆ ಮುಸ್ಲಿಂ ಸಮುದಾಯದ ಕೊಡುಗೆ ಅಪಾರ. ಕಳೆದ ಪರ್ಯಾಯದಲ್ಲಿ ಮುಸ್ಲಿಂ ಸಮುದಾಯ ಹಲವಾರು ರೀತಿಯಲ್ಲಿ ತಮ್ಮ ಕೊಡುಗೆಗಳನ್ನು ನೀಡಿದ್ದು ಅದನ್ನು ಮರೆಯುವಂತಿಲ್ಲ. ಇಂತಹ ಕೊಡುಗೆ ನೀಡಿರುವ ಮುಸ್ಲಿಂ ಸಮುದಾಯವನ್ನು ಪ್ರಮೋದ್ ಮುತಾಲಿಕ್ ಅವಮಾನ ಮಾಡಿರುವುದು ಖಂಡನೀಯ ಸಂಗತಿಯಾಗಿದೆ.

 ಸದಾ ಜಾತ್ಯಾತೀತೆ, ಸಹಬಾಳ್ವೆ ಎನ್ನುವ ಸೋಗಾಲಾಡಿತನ ತೋರಿಸುವ ಬಿಜೆಪಿ ಪಕ್ಷ ಪೇಜಾವರ ಶ್ರೀಗಳ ವಿರುದ್ದ ಪ್ರಮೋದ್ ಮುತಾಲಿಕ್ ಅವರ ಸಂಘಟನೆ ಪ್ರತಿಭಟನೆ ಮಾಡುತ್ತೇನೆ ಎನ್ನುವ ಕರೆ ನೀಡಿದರೂ ಕನಿಷ್ಟ ಪೇಜಾವರ ಶ್ರೀಗಳಿಗೆ ಬೆಂಬಲಿಸುವ ಕೆಲಸ ಮಾಡದಿರುವುದು, ಬಿಜೆಪಿಯವರಿಗೆ ಮುಸ್ಲಿಂ ಹಾಗೂ ಅಲ್ಪಸಂಖ್ಯಾತರು ದಲಿತ ಸಮುದಾಯದವರ ಮೇಲೆ ಇರುವ ಮನೋಸ್ಥಿತಿಯನ್ನು ತೋರಿಸುತ್ತದೆ ಎಂದರು.

 ಅಬ್ದುಲ್ ಅಝೀಜ್ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ನೀರಜ್ ಪಾಟೀಲ್ ಉಡುಪಿ ಬ್ಲಾಕ್ ಐಟಿ ಸೆಲ್ ಅಧ್ಯಕ್ಷ, ಸಂತೋಷ್ ಕಾಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಉಪಸ್ಥಿತರಿದ್ದರು.

ಪತ್ರಿಕಾಗೋಷ್ಟಿಯ ಬಳಿಕ ಯುವಕಾಂಗ್ರೆಸ್ ಪದಾಧಿಕಾರಿಗಳು ಪೇಜಾವರ ಸ್ವಾಮೀಜಿಯವರನ್ನು ಭೇಟಿ ಮಾಡಿ ತಮ್ಮ ನೈತಿಕ ಬೆಂಬಲವನ್ನು ಸೂಚಿಸಿದರು.


Spread the love

Exit mobile version