ಪ್ರಯಾಗ್ ರಾಜ್ ನದಿ ನೀರು ಸ್ನಾನಕ್ಕೆ ಯೋಗ್ಯವಲ್ಲ!: ಮಾಲಿನ್ಯ ನಿಯಂತ್ರಣ ಮಂಡಳಿ
ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಇದುವರೆಗೂ 54 ಕೋಟಿ ಜನರು ಪುಣ್ಯಸ್ನಾನ ಮಾಡಿದ್ದಾರೆ. ನಿತ್ಯ ಲಕ್ಷಾಂತರ ಜನ ಗಂಗಾ ನದಿಯಲ್ಲಿ ಮಿಂದೇಳುತ್ತಿದ್ದಾರೆ. ಪವಿತ್ರ ಮಹಾಕುಂಭಮೇಳ ನಡೆಯುತ್ತಿರುವ ಮಧ್ಯೆ ಆಘಾತಕಾರಿ ಮಾಹಿತಿಯೊಂದು ಬಹಿರಂಗವಾಗಿದೆ.
ಪ್ರಯಾಗ್‌ರಾಜ್ ನದಿ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಾಗಿದ್ದು, ಇದು ಸ್ನಾನಕ್ಕೆ ಯೋಗ್ಯವಲ್ಲ ಎಂದು ಸ್ವತಃ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಜನವರಿ 12, 13ರಂದೇ ಗಂಗಾ ನದಿಯ ನೀರಿನ ಸ್ಯಾಂಪಲ್ ತೆಗೆದುಕೊಂಡು ಪರೀಕ್ಷೆ ನಡೆಸಿತ್ತು. ಇದೀಗ ನೀರಿನ ಸ್ಯಾಂಪಲ್ ವರದಿಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ(NGT) ಸಲ್ಲಿಕೆ ಮಾಡಿದೆ.
ಗಂಗಾ ನದಿಯ ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇವೆ. ನೀರಿನ ಬಯೋಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್ ಸ್ನಾನಕ್ಕೆ ಯೋಗ್ಯವಾಗಿಲ್ಲ. ಕುಂಭಮೇಳದಲ್ಲಿ ಕೋಟಿಗಟ್ಟಲೆ ಜನರು ಸ್ನಾನ ಮಾಡುವುದರಿಂದ ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಹೆಚ್ಚಾಗುತ್ತೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಬಗ್ಗೆ ಎನ್‌ಜಿಟಿಯಲ್ಲಿ ವಿಸ್ತೃತ ವಿಚಾರಣೆ ನಡೆಯಲಿದೆ.
ಈ ಮಧ್ಯೆ, 2025 ರ ಮಹಾಕುಂಭಕ್ಕೆ ಪ್ರಯಾಗ್‌ರಾಜ್‌ನಲ್ಲಿ ನೀರಿನ ಗುಣಮಟ್ಟವನ್ನು ಸುಧಾರಿಸುವ ಕುರಿತು ‘ಕ್ರಮ ಕೈಗೊಂಡ ವರದಿ(ATR)’ ಸಲ್ಲಿಸಲು ವಿಫಲವಾದ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ(UPPCB)ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(NGT) ಸಮನ್ಸ್ ಜಾರಿ ಮಾಡಿದ್ದು, ವರ್ಚುವಲ್ ಮೂಲಕ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಧಾರ್ಮಿಕ ಸಮ್ಮೇಳನದ ವೇಳೆ ಗಂಗಾ ನದಿ ನೀರಿನ ಗುಣಮಟ್ಟ ಕಾಪಾಡಲು ಹಿಂದಿನಿಂದಲೂ ಎನ್‌ಜಿಟಿ ಸೂಚನೆ ನೀಡಿತ್ತು. ನೀರಿನ ಗುಣಮಟ್ಟ, ತ್ಯಾಜ್ಯ ನೀರಿನ ಶುದ್ದೀಕರಣ, ತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ ಕೇಳಿದೆ. ನಾಳಿನ ವಿಚಾರಣೆಗೆ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಹಾಜರಿಗೆ ಸಮನ್ಸ್ ನೀಡಲಾಗಿದೆ.