ಪ್ರಯಾಣಿಕರಿಗೆ ಟಿಕೇಟ್ ನೀಡದ ಸಿಬಂದಿ; 34 ಬಸ್ಸುಗಳ ಮೇಲೆ ಪೊಲೀಸರಿಂದ ಕೇಸು
ಮಂಗಳೂರು: ಮೋಟಾರು ವಾಹನ ಕಾಯ್ದೆಯಲ್ಲಿನ ಮಿತಿಗಿಂತ ಹೆಚ್ಚು ಶಬ್ದ ಹೊರಹೊಮ್ಮಿಸುವ, ಕರ್ಕಶ ಹಾರನ್‌ಗಳನ್ನು ಹೊಂದಿರುವ ಬಸ್‌ಗಳ ವಿರುದ್ಧ ಸೋಮವಾರ ವಿಶೇಷ ಕಾರ್ಯಾಚರಣೆ ನಡೆಸಿದ ನಗರ ಸಂಚಾರ ವಿಭಾಗದ ಪೊಲೀಸರು, 34 ಬಸ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ನಗರ ಪೊಲೀಸ್ ಕಮಿಷನರ್ ಪ್ರತಿವಾರ ನಡೆಸುವ ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ಕರೆ ಮಾಡುವ ಬಹುತೇಕರು ಬಸ್‌ಗಳ ವಿರುದ್ಧವೇ ದೂರುತ್ತಾರೆ. ಕರ್ಕಶ ಹಾರನ್ ಬಳಕೆ, ಪ್ರಯಾಣಿಕರಿಗೆ ಟಿಕೆಟ್ ನೀಡದಿರುವುದು, ಸಿಬ್ಬಂದಿ ದುರ್ವರ್ತನೆ ಕುರಿತು ದೂರುಗಳ ಮಹಾಪೂರವೇ ಬರುತ್ತಿದೆ.
ಈ ಕಾರಣದಿಂದ ಸಂಚಾರ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ ನೇತೃತ್ವದಲ್ಲಿ ಎ.ಬಿ.ಶೆಟ್ಟಿ ವೃತ್ತದ ಬಳಿ ಇರುವ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಎದುರಿನಲ್ಲೇ ಸೋಮವಾರ ಸಂಜೆ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ಸಂಚಾರ ವಿಭಾಗದ ಪೊಲೀಸರು ಆ ಮಾರ್ಗವಾಗಿ ಬಂದ ಎಲ್ಲ ಬಸ್‌ಗಳ ತಪಾಸಣೆ ನಡೆಸಿದರು. 34 ಬಸ್ ಗಳಲ್ಲಿ ಕರ್ಕಶ ಹಾರನ್ ಪತ್ತೆಯಾಯಿತು. ಅವುಗಳನ್ನು ವಶಕ್ಕೆ ಪಡೆದು, ನೆಹರೂ ಮೈದಾನದಲ್ಲಿ ನಿಲ್ಲಿಸಲಾಗಿದೆ.
‘ಸೋಮವಾರದ ಕಾರ್ಯಾಚರಣೆ ವೇಳೆ ವಶಪಡಿಸಿಕೊಂಡಿರುವ ಎಲ್ಲ ಬಸ್‌ಗಳನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಗೆ ಹಸ್ತಾಂತರಿಸಲಾಗಿದೆ. ಕರ್ಕಶ ಹಾರನ್ ಬಳಕೆ ಬಸ್‌ಗಳ ಪರವಾನಗಿ ಷರತ್ತುಗಳ ಉಲ್ಲಂಘನೆಯ ವ್ಯಾಪ್ತಿಗೆ ಬರುತ್ತದೆ. ಕಾನೂನಿನ ಅಡಿಯಲ್ಲಿ ಕಠಿಣವಾದ ಕ್ರಮ ಜರುಗಿಸುವಂತೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗಿದೆ’ ಎಂದು ಮಂಜುನಾಥ ಶೆಟ್ಟಿ ತಿಳಿಸಿದರು.