ಪ್ರವಾಹ ಸ್ಥಳಕ್ಕೆ ತೆರಳಿದ್ದ ಸಿಎಂ ಯಡಿಯೂರಪ್ಪ ಗೆ ಜನರ ದಿಗ್ಭಂಧನ ಪೊಲೀಸರಿಂದ ಲಘು ಲಾಠಿ ಪ್ರಹಾರ
ಪ್ರವಾಹ ಪರಿಸ್ಥಿತಿ ಅರಿಯಲು ಜಿಲ್ಲೆಯ ಕೊಣ್ಣೂರು ಗ್ರಾಮಕ್ಕೆ ತೆರಳಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾರಿಗೆ ಗ್ರಾಮಸ್ಥರು ದಿಗ್ಭಂಧನ ಹಾಕಿದ ಘಟನೆ ನಡೆಯಿತು. ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.
ಕೊಣ್ಣೂರು ಗ್ರಾಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ, ಪ್ರವಾಹ ಪರಿಸ್ಥಿತಿ ಅವಲೋಕಿಸಿದರು. ಆದರೆ, ಸಂತ್ರಸ್ತರನ್ನು ವಿಚಾರಿಸದೆ ಹಾಗೆಯೇ ತೆರಳಿದರು.
ಪರಿಹಾರ ಘೋಷಣೆ ಮಾಡದೇ ತೆರಳಿದ್ದಕ್ಕೆ ಸಿಟ್ಟಿಗೆದ್ದ ಜನರು ತಮ್ಮ ಜೊತೆ ಮಾತಾಡುವಂತೆ ಒತ್ತಾಯಿಸಿದರು. ನೂರಾರು ಗ್ರಾಮಸ್ಥರು ಸಿಎಂ ಡ್ರೈವರ್ಗೆ ಅವಾಚ್ಯ ಶಬ್ದಗಳಿಂದ ಬೈದರಲ್ಲದೆ, ಕಾರಿಗೆ ದಿಗ್ಭಂಧನ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಪೊಲೀಸ್ ವಾಹನವನ್ನು ಗುದ್ದಿ ಹೇಗೆ ಹೊಗ್ತಾ ಇದ್ದಿರಿ ಎಂದು ಗ್ರಾಮಸ್ಥರು ಪ್ರಶ್ನೆ ಮಾಡಿದರು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಆಕ್ರೋಶಗೊಂಡ ಗ್ರಾಮಸ್ಥರು, ಪೊಲೀಸರು ಮತ್ತು ಸರ್ಕಾರಿ ವಾಹನಗಳನ್ನು ಊರಿಂದ ಹೊರಗೆ ಕಳಿಸಿದರು. ಕೊನೆಗೂ ಪೊಲೀಸರು ಗ್ರಾಮಸ್ಥರ ಕ್ಷಮೆ ಕೇಳಿ ಮುನ್ನಡೆದರು.