ಪ್ರಸವ ಪೂರ್ವ ಲಿಂಗ ಪತ್ತೆ: ಜಾಗೃತಿಗೆ ಡಿಸಿ ಡಾ. ಕೆ.ಜಿ.ಜಗದೀಶ ಕರೆ

Spread the love

ಪ್ರಸವ ಪೂರ್ವ ಲಿಂಗ ಪತ್ತೆ: ಜಾಗೃತಿಗೆ ಡಿಸಿ ಡಾ. ಕೆ.ಜಿ.ಜಗದೀಶ  ಕರೆ

ಮ0ಗಳೂರು : ಗರ್ಭಪೂರ್ವ ಹಾಗೂ ಪ್ರಸವಪೂರ್ವ ಲಿಂಗಪತ್ತೆ ತಡೆ ಕಾಯಿದೆಯ ಬಗ್ಗೆ ಜಿಲ್ಲೆಯಲ್ಲಿ ಹೆಚ್ಚು ಜನಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ ಕರೆ ನೀಡಿದ್ದಾರೆ.

ಅವರು ಶುಕ್ರವಾರ ನಗರದ ಐಎಂಎ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಗರ್ಭಪೂರ್ವ ಹಾಗೂ ಪ್ರಸವಪೂರ್ವ ಲಿಂಗಪತ್ತೆ ತಡೆ ಕಾಯಿದೆಯ ಬಗ್ಗೆ ಸ್ತ್ರೀರೋಗ ವೈದ್ಯರಿಗೆ ಹಾಗೂ ಸ್ಕ್ಯಾನಿಂಗ್ ಕೇಂದ್ರಗಳ ವೈದ್ಯರಿಗೆ ಕಾರ್ಯಾಗಾರದಲ್ಲಿ ಮಾತನಾಡಿದರು. 1996ರಲ್ಲಿಯೇ ಈ ಕಾಯಿದೆ ಜಾರಿಗೆ ಬಂದಿದ್ದರೂ, ಇನ್ನೂ ಕಾಯಿದೆಯ ಬಗ್ಗೆ ಜಾಗೃತಿ ಮೂಡದಿರುವುದು ವಿಷಾಧಕರ. ಸಾಕ್ಷರತೆಯಲ್ಲಿ ಮುಂದುವರಿದಿರುವ ದಕ್ಷಿಣ ಕ್ನನಡ ಜಿಲ್ಲೆಯಲ್ಲಿ ಗಂಡು ಹೆಣ್ಣು ಜನನ ಪ್ರಮಾಣ ಅನುಪಾತದಲ್ಲಿ ಕುಸಿತ ಉಂಟಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಇದರ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಿ, ಕಾನೂನಿನ ದಂಡನಾತ್ಮಕ ಅಂಶಗಳ ಬಗ್ಗೆ ತಿಳುವಳಿಕೆ ನೀಡಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ ಮಾತನಾಡಿ, ಶಿಕ್ಷಣದೊಂದಿಗೆ ಸಂಸ್ಕಾರವೂ ಇಂದಿನ ಅಗತ್ಯವಾಗಿದೆ. ಮಾನವನೇ ಇನ್ನೊಂದು ಮಾನವನ ಹುಟ್ಟಿನ ಬಗ್ಗೆ ತಾತ್ಸಾರ ಪಡುವುದು ವಿಷಾಧಕರ. ಜೀವವನ್ನು ಉಳಿಸಬೇಕಾದವರು ಜೀವವನ್ನು ಅದರ ಆರಂಭದಲ್ಲೇ ಹೊಸಕಿ ಹಾಕುತ್ತಿರುವುದು ಅಕ್ಷಮ್ಯವಾಗಿದೆ ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ ಪಾಟೀಲ್ ಅವರು ಕಾರ್ಯಾಗಾರ ಉದ್ಘಾಟಿಸಿದರು. ಕಾಯಾಗಾರದಲ್ಲಿ ಪಿಸಿ & ಪಿಎನ್‍ಡಿಟಿ ವಿಭಾಗದ ಉಪನಿರ್ದೇಶಕಿ ಡಾ. ರಜನಿ ಎಂ., ಪ್ರಸೂತಿ ತಜ್ಞೆ ಡಾ. ಮೇಖಲಾ, ಡಾ. ರಶ್ಮಿ ಅವರು ಮಾಹಿತಿ ನೀಡಿದರು. ಲೇಡಿಘೋಷನ್ ಅಧೀಕ್ಷಕಿ ಡಾ. ಸವಿತಾ, ಡಾ. ಸಿಕಂದರ್ ಪಾಶಾ, ಪ್ರೇಮಾ ಡಿ ಕುನ್ಹಾ ಮತ್ತಿತರರು ಇದ್ದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಸ್ವಾಗತಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ನಿರೂಪಿಸಿದರು.


Spread the love