Home Mangalorean News Kannada News ಪ್ರಾಕೃತಿಕ ವಿಕೋಪ ಪರಿಹಾರ ಹೆಚ್ಚಳಕ್ಕೆ ಕ್ರಮ- ಆರ್.ವಿ.ದೇಶಪಾಂಡೆ

ಪ್ರಾಕೃತಿಕ ವಿಕೋಪ ಪರಿಹಾರ ಹೆಚ್ಚಳಕ್ಕೆ ಕ್ರಮ- ಆರ್.ವಿ.ದೇಶಪಾಂಡೆ

Spread the love

ಪ್ರಾಕೃತಿಕ ವಿಕೋಪ ಪರಿಹಾರ ಹೆಚ್ಚಳಕ್ಕೆ ಕ್ರಮ- ಆರ್.ವಿ.ದೇಶಪಾಂಡೆ

ಉಡುಪಿ: ರಾಜ್ಯದಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಭಾಗಶಃ ಹಾನಿಯಾಗುವ ಆಸ್ತಿ ಪಾಸ್ತಿಗೆ ಸರಕಾರದಿಂದ ನೀಡುತ್ತಿರುವ ಪರಿಹಾರದ ಮೊತ್ತ ಕಡಿಮೆ ಇದ್ದು, ಈ ಮೊತ್ತವನ್ನು ಹೆಚ್ಚಳ ಮಾಡುವ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಹಣಕಾಸು ಇಲಾಖೆಯ ಮೂಲಕ ಹೆಚ್ಚಿನ ಪರಿಹಾರ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯದ ಕಂದಾಯ ಮತ್ತು ಕೌಶಲಾಭಿವೃದ್ದಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

ಅವರು ಗುರುವಾರ ಜಿಲ್ಲೆಯ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪದಿಂದ ಭಾಗಶಃ /ಸಂಪೂರ್ಣ ಹಾನಿಯಾದ ಮನೆಗಳ 17 ಕುಟುಂಬಗಳಿಗೆ , 10.75 ಲಕ್ಷ ರೂ ಮೊತ್ತದ ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಅತಿವೃಷ್ಟಿಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ, ಆಸ್ತಿಪಾಸ್ತಿ ಹಾಗೂ ಜೀವಹಾನಿ ಕುರಿತು ಸಮೀಕ್ಷೆ ಮಾಡಲಾಗುತ್ತಿದೆ, ಪ್ರಸ್ತುತ ರಾಜ್ಯದಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಭಾಗಶಃ ಹಾನಿಗೊಳಗಾಗುವ ಸಂತ್ರಸ್ತರಿಗೆ ನೀಡುತ್ತಿರುವ ಪರಿಹಾರದ ಮೊತ್ತ ಅತ್ಯಲ್ಪವಾಗಿದ್ದು, ಇದನ್ನು ಕೇಂದ್ರ ಸರ್ಕಾರ ರೂಪಿಸಿರುವ ಪ್ರಾಕೃತಿಕ ವಿಕೋಪ ಪರಿಹಾರ ಮೊತ್ತ ಬಿಡುಗಡೆ ನಿಯಮಗಳಿಗೆ ಅನುಗುಣವಾಗಿ ವಿತರಿಸಲಾಗುತ್ತಿದೆ, ರಾಜ್ಯದಲ್ಲಿ ಪ್ರಾಕೃತಿಕ ವಿಕೋಪದಿಂದ ಸಂಭವಿಸಿದ ಜೀವಹಾನಿಗೆ 4 ಲಕ್ಷ ರೂ ಪರಿಹಾರದೊಂದಿಗೆ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯ 1 ಲಕ್ಷ ರೂ ಸೇರಿಸಿ ಒಟ್ಟು 5 ಲಕ್ಷ ಪರಿಹಾರ ನೀಡಲಾಗುತ್ತಿದೆ,ಮನೆ ಇನ್ನಿತರ ಆಸ್ತಿ ಹಾನಿಗೆ ನೀಡಲಾಗುವ ಪರಿಹಾರದ ಮೊತ್ತವನ್ನು ಹೆಚ್ಚಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ , ಪರಿಹಾರ ಮೊತ್ತ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ದೇಶಪಾಂಡೆ ಹೇಳಿದರು.

ಉಡುಪಿ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಪರಿಹಾರಕ್ಕಾಗಿ 5 ಕೋಟಿ ರೂ ಬಿಡುಗಡೆಗೊಳಿಸಿದ್ದು, ಪರಿಹಾರ ನಿಧಿ ಬಿಡುಗಡೆಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ ಎಂದು ಸಚಿವರು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯದ ನಗರಾಭಿವೃಧ್ದಿ ಮತ್ತು ವಸತಿ ಸಚಿವ ಯು.ಟಿ.ಖಾದರ್ , ಕಾಪು ಶಾಸಕ ಲಾಲಾಜಿ ಮೆಂಡನ್ , ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನಿಸ್, ಕುಂದಾಪುರ ಉಪ ವಿಭಾಗಾಧಿಕಾರಿ ಭೂ ಬಾಲನ್, ಜಿ.ಪಂ. ಸಿಇಓ ಶಿವಾನಂದ ಕಾಪಶಿ, ಉದ್ಯಾವರ ಗ್ರಾ.ಪಂ. ಅದ್ಯಕ್ಷೆ ಸುಗಂಧಿ ಶೇಖರ್, ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೆಕರ್ , ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version