ಪ್ರಾಮಾಣಿಕವಾಗಿ ತೆರಿಗೆ ಕಟ್ಟಿದ್ದೇನೆ; ಮತ್ಸೋದ್ಯಮಿಗಳ ಐಟಿ ಟಾರ್ಗೆಟ್ ನೋ ಕಮೆಂಟ್ಸ್ –ಪ್ರಮೋದ್ ಮಧ್ವರಾಜ್
ಉಡುಪಿ: ನನ್ನನ್ನು ದೇವರು ಮಾತ್ರ ಟಾರ್ಗೆಟ್ ಮಾಡಬಹುದು. ಅದನ್ನು ಹೊರತಾಗಿ ನಾನು ಯಾವುದೇ ಟಾರ್ಗೆಟ್ಟಿಗೆ ತಲೆ ಕೆಡಿಸಿಕೊಳ್ಳಲ್ಲ ಎಂದು ಮೀನುಗಾರಿಕಾ- ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಉಡುಪಿಯಲ್ಲಿ ಐಟಿ ಅಧಿಕಾರಿಗಳು ಮತ್ಸ ಘಟಕಗಳ ಮೇಲೆ ಐಟಿ ದಾಳಿ ಮಾಡಿದ ವಿಚಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು.
ನಾನು ಚುನಾವಣೆಗೆ ಯಾರ ಫಂಡ್ ತೆಗೆದುಕೊಂಡಿಲ್ಲ. ಕಳುಹಿಸಿದ ಫಂಡನ್ನು ಹಿಂದೆ ಕಳುಹಿಸಿದ್ದೆ. ಚುನಾವಣೆಗೆ ಫಂಡಿಂಗ್ ಮಾಡುವವರೇ ನನಗೆ ಅಗತ್ಯವಿಲ್ಲ. ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತೇನೆ- ದೇಶದ ಕಾನೂನಿನಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು. ಮತ್ಸೋದ್ಯಮಿಗಳ ಐಟಿ ಟಾರ್ಗೆಟ್ ವಿಚಾರಕ್ಕೆ ನಾನು ಪ್ರತಿಕ್ರಿಯೆ ಕೊಡಲ್ಲ. ಪ್ರತಿಕ್ರಿಯೆ ಕೊಡದಿರುವುದಕ್ಕೂ ನಾನು ಕಾರಣ ಕೊಡಲ್ಲ ಅಂತ ಹೇಳಿದ್ರು.
ನಾನು ಬಿಜೆಪಿ ಸೇರುತ್ತೇನೆ ಅಂತ ಎಲ್ಲೂ ಹೇಳಿಲ್ಲ. ಕಾಂಗ್ರೆಸ್ ನ ಕಾರ್ಯಕರ್ತರೂ ಹೇಳಿಲ್ಲ. ಇದು ಪತ್ರಕರ್ತರ ಸದಾ ಫೇವರೇಟ್ ಪ್ರಶ್ನೆ. ನಿಮಗೆ ಪ್ರಶ್ನೆ ಕೇಳುವ ಮತ್ತು ವಿಮರ್ಶಿಸುವ ಅಧಿಕಾರ ಇದೆ. ನೀವು ಪ್ರಶ್ನೆ ಮಾಡಬಹುದು. ಆದ್ರೆ ನನಗ್ಯಾರೂ ಆಫರ್ ಕೊಟ್ಟಿಲ್ಲ. ನಾನೂ ಬಿಜೆಪಿ ಸೇರುತ್ತೇನೆ ಎಂದು ಹೇಳಿಲ್ಲ ಅಂದ್ರು.
ಹಾರ್ಡ್ ಹಿಂದುತ್ವ ಅಂದ್ರೆ ಏನು? ಸಾಫ್ಟ್ ಹಿಂದುತ್ವ ಅಂದ್ರೆ ಏನು? ಕೊಲೆ ಮಾಡಿ ಪ್ರತಿಭಟನೆ ಮಾಡಿ ರಾಜಕೀಯ ಮಾಡುವುದು ಹಾರ್ಡ್ ಹಿಂದುತ್ವನಾ? ಕಾಂಗ್ರೆಸ್ಸಿಗರು ದೇವಸ್ಥಾನಕ್ಕೆ ಹೋಗ್ಬಾರ್ದಾ- ನಾವೇನು ಅಸ್ಪೃಶ್ಯರಾ? ಕಾಂಗ್ರೆಸ್ ನವರು ಹಿಂದೂಗಳಲ್ವಾ? ಕೇವಲ ಬಿಜೆಪಿಯವರು ಮಾತ್ರ ದೇವಸ್ಥಾನಗಳಿಗೆ ಹೋಗ್ಬೇಕಾ ಅಂತ ಪ್ರಮೋದ್ ಮಧ್ವರಾಜ್ ಪ್ರಶ್ನೆ ಮಾಡಿದರು. ಈ ಮೂಲಕ ರಾಹುಲ್ ಗಾಂಧಿ ಟೆಂಪಲ್ ರನ್ ಸಮರ್ಥಿಸಿಕೊಂಡರು.
ಐಪಿಎಸ್ ಅಂದ್ರೆ ಪಕೋಡ ಸರ್ವಿಸ್ ಅಂತ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದು ವಿವಾದವಾಗಿದೆ. ರಾಹುಲ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಪ್ರಮೋದ್ ಮಧ್ವರಾಜ್, ಶಾರ್ಟ್ ಫಾರ್ಮ್ ಗೆ ಹಲವಾರು ಅರ್ಥಗಳನ್ನು ಕಲ್ಪಿಸಬಹುದು. ಐಟಿ ಅನ್ನೋ ಶಬ್ದಕ್ಕೆ ಹಲವಾರು ಅರ್ಥ ಕಲ್ಪಿಸಬಹುದು. ಹಾಗಾಗಿ ಐಪಿಎಸ್ಗಳು ಈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ಹೇಳಿದರು.