ಪ್ರೇಕ್ಷಕರ ಮನಸೂರೆಗೊಂಡ “ಅಷ್ಟಭುಜೆ ಆದಿಮಾಯೆ”ಯಕ್ಷಗಾನ ತಾಳಮದ್ದಳೆ
ದುಬೈಯ ಸಮಾನ ಯಕ್ಷಮನಸ್ಕರ ಒಗ್ಗೂಡುವಿಕೆಯಿಂದ ಶೇಖರ್ ಡಿ ಶೆಟ್ಟಿಗಾರ್ ಮಾರ್ಗದರ್ಶನದಲ್ಲಿ ನಡೆದ ಸ್ಥಳೀಯ ಯಕ್ಷಗಾನ ಕಲಾವಿದರು ಒಂದಾಗಿ ‘ಅಷ್ಟಭುಜೆ ಆದಿಮಾಯೆ ‘ ಎಂಬ ಆಖ್ಯಾನವನ್ನು ತಾಳಮದ್ದಳೆ ರೂಪದಲ್ಲಿ ನಡೆಸಿಕೊಟ್ಟರು. ಯಕ್ಷಗಾನಾಚಾರ್ಯ ದಿ। ನಿಡ್ಲೆ ನರಸಿಂಹಜ್ಜ ವೇದಿಕೆಯಲ್ಲಿಜರುಗಿದ ಕಾರ್ಯಕ್ರಮದ ಸಾಂಪ್ರದಾಯಿಕ ಚೌಕಿ ಪೂಜೆಯನ್ನು ವೆಂಕಟೇಶ್ ಶಾಸ್ತ್ರೀ ಪುತ್ತಿಗೆಯವರು ನೆರವೇರಿಸಿದರು.
ಸುಮಂಗಳೆಯರೊಡನೆ ದೀಪಬೆಳಗಿಸಿ, ಭಾಗ್ಯದ ಲಕ್ಷ್ಮಿ ಬಾರಮ್ಮ ಸ್ತುತಿಯೊಂದಿಗೆ ಕಾರ್ಯಕ್ರಮವನ್ನು ಉಧ್ಘಾಟಿಸಿದ ಮುಖ್ಯ ಅತಿಥಿ ಖ್ಯಾತ ಭರತನಾಟ್ಯ ಕಲಾವಿದೆ ಗುರು ವಿದುಷಿ ಸಪ್ನಾ ಕಿರಣ್ “ ಯಕ್ಷಗಾನದ ಮತ್ತೊಂದು ಆಯಾಮವಾದ ತಾಳಮದ್ದಳೆಯ ಯಕ್ಷಗಾನದಂತೆ ಅಂಗಿಕ , ವಾಚಿಕ, ಸಾತ್ವಿಕ ,ಆಹಾರ್ಯಗಳನ್ನು ಕಾಣದೆ ತಮ್ಮ ವಾಚಿಕಾಭಿನಯನದಿಂದ ಪಾತ್ರವನ್ನು ಸೃಷ್ಟಿಸಿ ಪ್ರೇಕ್ಷಕರನ್ನು ಹಿಡಿದಿರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಾವಿರ ಮೈಲು ದೂರವಿರುವ ಈ ಮರಳುಗಾಡಿನಲ್ಲಿ ಇದಕ್ಕೆ ಮುಂಗೈ ವಹಿಸಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸುಲಭ ಮಾತಲ್ಲ . ಈ ನಿಟ್ಟಿನಲ್ಲಿ ಸ್ಥಳೀಯ ಯಕ್ಷಗಾನ ಪ್ರೇಮಿಗಳ ಪ್ರಯತ್ನ ನಿಜಕ್ಕೂ ಶ್ಲಾಘನೀಯ ” ಎಂದು ತಿಳಿಸಿದರು. ಕಿಶೋರ್ ಗಟ್ಟಿ ಉಚ್ಚಿಲ,ಭವಾನಿ ಶಂಕರ್ ಶರ್ಮ,ವೆಂಕಟೇಶ್ ಶಾಸ್ತ್ರೀ ಪುತ್ತಿಗೆ ಹಾಗು ಇತರರು ಉಪಸ್ಥಿತರಿದ್ದರು.
ನಂತರ ಯಕ್ಷಗಾನಾಚಾರ್ಯ ದಿ। ನಿಡ್ಲೆ ನರಸಿಂಹಜ್ಜ ವೇದಿಕೆಯಲ್ಲಿ ನಡೆದ ಅಷ್ಟಭುಜೆ ಆದಿಮಾಯೆ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಸಂಪನ್ನಗೊಂಡಿತು. ಮೂಲತಃ ಉಕ್ಷ ಬ್ರಹ್ಮ ಬಿರುದಾಂಕಿತ ಅಗರಿ ಶ್ರೀನಿವಾಸ ಭಾಗವತರ “ಶ್ರೀದೇವಿ ಮಹಾತ್ಮೆ” ಪ್ರಸಂಗವನ್ನು ತಾಂತ್ರಿಕ ಕಾರಣಗಳಿಂದ ಬದಲಾವಣೆ ಮಾಡಿಕೊಳ್ಳಲಾಗಿತ್ತು.
ಉದರ ನಿಮಿತ್ತ ವಿದೇಶದಲ್ಲಿ ನೆಲೆಸಿ, ಈ ತಾಳಮದ್ದಳೆಯಲ್ಲಿ ಪಾಲ್ಗೊಂಡ ಹೆಚ್ಚಿನವರು ಹೊಸ ಕಲಾವಿದರು. ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಈ ತಾಳಮದ್ದಳೆ ಸಾಕ್ಷಿಯಾಯಿತು . ಈ ಕಾರ್ಯಕ್ರಮಕ್ಕೆ ಪೂರ್ವಾಭ್ಯಾಸ ತಯಾರಿ, ತರಬೇತಿಗಳು ಇಲ್ಲದೆಯೂ ಕಲಾವಿದರು ಹೆಚ್ಚಿನ ಆತ್ಮವಿಶ್ವಾಸದಿಂದ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸಿದರು.
ಹಿಮ್ಮೇಳದಲ್ಲಿ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಶರತ್ , ಕುಮಾರ್ , ಕೃಷ್ಣ ಪ್ರಸಾದ್ ರಾವ್ ಸುರತ್ಕಲ್, ಭವಾನಿ ಶಂಕರ್ ಶರ್ಮ, ವೆಂಕಟೇಶ್ ಶಾಸ್ತ್ರೀ ಪುತ್ತಿಗೆ,ಗಿರೀಶ್ ನಾರಾಯಣ್ ಕಾಟಿಪಳ್ಳ, ವಿಕ್ರಂ ಶೆಟ್ಟಿ ಕಡಂದಲೆ ಚಕ್ರತಾಳದಲ್ಲಿ ಆದಿತ್ಯ ದಿನೇಶ್ ಕೊಟ್ಟಿಂಜ ಪಾಲ್ಗೊಂಡಿದ್ದರು .
ಮುಮ್ಮೇಳದಲ್ಲಿ ಸ್ವಾತಿ ಸಂತೋಷ್ ಕಟೀಲು, ಕೃಷ್ಣಪ್ರಸಾದ್ ರಾವ್ ಸುರತ್ಕಲ್, ಕಿಶೋರ್ ಗಟ್ಟಿ ಉಚ್ಚಿಲ, ಲತಾ ಸುರೇಶ ಹೆಗ್ಡೆ ,ಗಿರೀಶ್ ನಾರಾಯಣ್ ಕಾಟಿಪಳ್ಳ ,ರವಿ ಕೋಟ್ಯಾನ್, ಸಮಂತಾ ಗಿರೀಶ್,ರಜನಿ ಭಟ್ ಕಲ್ಮಡ್ಕ, ಸ್ವಾತಿ ಶರತ್ ಸರಳಾಯ, ಭವಾನಿ ಶಂಕರ್ ಶರ್ಮ , ಸತೀಶ್ ಶೆಟ್ಟಿಗಾರ್ ವಿಟ್ಲ,ಅಶೋಕ್ ಶೆಟ್ಟಿ ಕಾರ್ಕಳ, ಶೇಖರ್ ಡಿ ಶೆಟ್ಟಿಗಾರ್ ಕಿನ್ನಿಗೋಳಿ, ಶರತ್ ಕುಮಾರ್, ಬಾಲಕೃಷ್ಣ ಡಿ ಶೆಟ್ಟಿಗಾರ್ ಕಿನ್ನಿಗೋಳಿ ಭಾಗವಹಿಸಿದ್ದರು.
ಫೋರ್ಚುನ್ ಗ್ರೂಪ್ ಹೋಟೆಲ್ ನ ಮಾಲೀಕರಾದ ಪ್ರವೀಣ್ ಶೆಟ್ಟಿಯವರು ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತ ” ನುರಿತ ಕಲಾವಿದರಂತೆ ಅರ್ಥವತ್ತಾಗಿ ತಾಳಮದ್ದಳೆ ಮೂಡಿಬಂತು. ಭಾಗವಹಿಸಿದ ಹವ್ಯಾಸಿ ಕಲಾವಿಧವರಿಗೆ ಅಭಿನಂದನೆಗಳು . ಇದೊಂದು ಹೊಸ ಪ್ರಯೋಗ, ಹೊಸ ಪ್ರಯತ್ನ ಹಾಗು ಯಶಸ್ವಿಯಾದ ಕಾರ್ಯಕ್ರಮ” ಎಂದು ಹೇಳಿದರು. ವೇದಿಕೆಯಲ್ಲಿದ್ದ ಇತರ ಗಣ್ಯರಾದ ರವಿ ಶೆಟ್ಟಿಗಾರ್ ಕಾರ್ಕಳ, ಪದ್ಯಾಣ ರಾಮಚಂದ್ರ , ವಿಶ್ವನಾಥ್ ಶೆಟ್ಟಿ, ವಾಸು ಕುಮಾರ್ ಶೆಟ್ಟಿ ಉತ್ತಮವಾಗಿ ಮೂಡಿಬಂದ ತಾಳಮದ್ದಳೆ ಕಾರ್ಯಕ್ರವನ್ನು ಶ್ಲಾಘಿಸಿದರು.
ದಿನೇಶ್ ಶೆಟ್ಟಿ ಕೊಟ್ಟಿಂಜ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಸಂಯೋಜಿಸಿ, ಸ್ವಾಗತಿಸಿ,ವಂದನಾರ್ಪಣೆ ಗೈದು ನಿರೂಪಿಸಿ ನಿರ್ವಹಿಸಿದರು.
ಕಟೀಲಮ್ಮ್ಮನ ಆಶೀರ್ವಾದದಿಂದ ಮೂಡಿಬಂದ “ಅಷ್ಟಭುಜೆ ಆದಿಮಾಯೆ”ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮಕ್ಕೆ ದೇವಿಸ್ತುತಿಯೊಂದಿಗೆ ಮಂಗಳ ಹಾಡಲಾಯಿತು.