ಪ್ಲಾಸ್ಟರ್ ಆಫ್ ಪ್ಯಾರೀಸ್‍ನಿಂದ ತಯಾರಿಸಿದ ಗೌರಿ ಗಣೇಶ ಮೂರ್ತಿಗಳ ಬಳಕೆ ನಿಷೇಧ

Spread the love

ಪ್ಲಾಸ್ಟರ್ ಆಫ್ ಪ್ಯಾರೀಸ್‍ನಿಂದ ತಯಾರಿಸಿದ ಗೌರಿ ಗಣೇಶ ಮೂರ್ತಿಗಳ ಬಳಕೆ ನಿಷೇಧ

ಮಂಗಳೂರು :  ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನಲ್ಲಿಯೂ ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬ ಆಚರಣೆ ಮಾಡುವ ಸಂಬಂಧ ಪ್ಲಾಸ್ಟರ್ ಆಫ್ ಪ್ಯಾರೀಸ್ ಹಾಗೂ ವಿಷಕಾರಿ ರಸಾಯನಿಕ ಬಣ್ಣ ಬಳಸಿ ತಯಾರಿಸಿರುವ ಗೌರಿ ಗಣೇಶ ಮೂರ್ತಿಗಳ ಬಳಕೆಯನ್ನು ನಿಲ್ಲಿಸುವಲ್ಲಿ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

ವಿಷಕಾರಿ ರಸಾಯನಿಕ ಲೇಪಿತ ಪ್ಲಾಸ್ಟರ್ ಆಫ್ ಪ್ಯಾರೀಸ್‍ನಿಂದ ತಯಾರಿಸಲ್ಪಟ್ಟ ಗಣೇಶನ ಮೂರ್ತಿ/ವಿಗ್ರಹದ ಬಳಕೆ ಮಾಡಬಾರದೆಂದು ಹಾಗೂ ಮಣ್ಣಿನಿಂದ ಮಾಡಲಾಗಿರುವ ಗೌರಿ/ಗಣೇಶ ವಿಗ್ರಹವನ್ನು ಸ್ಥಾಪಿಸಲು ಸೂಚಿಸಲಾಗಿದೆ. ಎಲೆ, ಹೂವುಗಳಿಂದ ಮಾಡಿದ ನೈಸರ್ಗಿಕ ಬಣ್ಣ ಹಚ್ಚಿದ ಗೌರಿ ಗಣಪನನ್ನೇ ಪೂಜಿಸಬೇಕು. ಸಾಮೂಹಿಕವಾಗಿ ನಡೆಸುವ ಗಣೇಶನ ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಲು, ಎಲ್ಲೂ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡಬಾರದು.

ಬಾವಿ, ಕೆರೆ, ಹೊಳೆಗಳಲ್ಲಿ ಗಣಪತಿ ವಿಸರ್ಜನೆ ಮಾಡಬಾರದೆಂದು, ಹಾಗೆ ಮಾಡಿದ್ದಲ್ಲಿ, ಅಂತರ್ಜಲ, ಕುಡಿಯುವ ನೀರಿನ ಸೆಲೆ-ಎಲ್ಲವೂ ಮಲಿನಗೊಳ್ಳುತ್ತದೆಂದು ಈ ಮೂಲಕ ತಿಳಿಸುತ್ತಾ, ಬದಲಿಗೆ ಬಕೆಟ್‍ನಲ್ಲಿ, ಸಂಚಾರಿ ವಿಸರ್ಜನಾ ವಾಹನದಲ್ಲಿ ವಿಸರ್ಜಿಸಿ, ಸೂಚಿತ ಕೆರೆಗಳಲ್ಲಿ ವಿಸರ್ಜಿಸುವ ಮುನ್ನ ಹೂವು, ವಸ್ತ್ರ, ಪ್ಲಾಸ್ಟಿಕ್ ಹಾರ ಇತ್ಯಾದಿ ಅಲಂಕಾರಗಳನ್ನು ಕಡ್ಡಾಯವಾಗಿ ತೆಗೆಯಬೇಕು. ಗಣಪತಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳ ಬಳಕೆ ಮಾಡಬಾರದು. ಗಣೇಶ ಹಬ್ಬದಲ್ಲಿ ರಸ್ತೆ, ಚರಂಡಿಯಲ್ಲಿ ಹೂವಿನ ಹಾರ, ತಟ್ಟೆ, ಲೋಟ, ಎಲೆ ಎಸೆಯದೇ ಕಸದ ವಾಹನಗಳನ್ನೇ ಬಳಸಬೇಕು.

ಗಣೇಶ ಮತ್ತು ಗೌರಿ ಮೂರ್ತಿಗಳನ್ನು ಸಿದ್ದಪಡಿಸುವವರು / ತಯಾರಿಸುವವರು / ಮಾರಾಟ ಮಾಡುವವರು ವಿಷಪೂರಿತ, ರಸಾಯನಿಕವುಳ್ಳ ಬಣ್ಣ ಮತ್ತು ಪ್ಲಾಸ್ಟರ್ ಆಫ್ ಪ್ಯಾರೀಸ್‍ಅನ್ನು ಮೂರ್ತಿಗಳ ತಯಾರಿಕೆಗೆ ಉಪಯೋಗಿಸಬಾರದು. ಒಂದು ವೇಳೆ ಈ ರೀತಿಯ ಮೂರ್ತಿಗಳನ್ನು ತಯಾರಿಸುವುದಾಗಲೀ / ಮಾರಾಟ ಮಾಡುವುದಾಗಲಿ / ಉಪಯೋಗಿಸುವುದಾಗಲಿ ಕಂಡು ಬಂದರೆ ಅಂತಹ ಮೂರ್ತಿಗಳನ್ನು ಮಂಗಳೂರು ಮಹಾನಗರಪಾಲಿಕೆ ವತಿಯಿಂದ ವಶಪಡಿಸಿಕೊಳ್ಳಲಾಗುತ್ತದೆ ಹಾಗೂ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ.

ಈ ಸೂಚನೆಗಳನ್ನು ಪಾಲಿಸದಿದ್ದಲ್ಲಿ ಸೂಕ್ತ ಕಾನೂನು ಹಾಗೂ ನಿಯಮಗಳಡಿ ಕ್ರಮ ಜರುಗಿಸಲಾಗುವುದು ಹಾಗೂ ದಂಡ ವಿಧಿಸಲಾಗುವುದು ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.


Spread the love