Home Mangalorean News Kannada News ಪ್ಲಾಸ್ಟಿಕ್ ನಿಷೇಧ- ಕಾನೂನು ಉಲ್ಲಂಘಿಸಿದರೆ ಲೈಸನ್ಸ್ ರದ್ದು

ಪ್ಲಾಸ್ಟಿಕ್ ನಿಷೇಧ- ಕಾನೂನು ಉಲ್ಲಂಘಿಸಿದರೆ ಲೈಸನ್ಸ್ ರದ್ದು

Spread the love

ಪ್ಲಾಸ್ಟಿಕ್ ನಿಷೇಧ- ಕಾನೂನು ಉಲ್ಲಂಘಿಸಿದರೆ ಲೈಸನ್ಸ್ ರದ್ದು

ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಪರಿಸರಕ್ಕೆ ಹಾನಿ ಹಾಗೂ ಮಾನವ ಮತ್ತಿತರ ಪ್ರಾಣಿಗಳ ಆರೋಗ್ಯಕ್ಕೆ ಅಪಾಯ ಉಂಟು ಮಾಡುತ್ತಿರುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಪ್ಲೆಕ್ಸ್, ಬಾವುಟ, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚ, ಕ್ಲಿಂಗ್ ಫಿಲ್ಮ್ಸ್ ಮತ್ತು ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ ಹಾಗೂ ಥರ್ಮೊಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಬೀಡ್ಸ್‍ನಿಂದ ತಯಾರಾದಂತಹ ಮೇಲ್ಕಂಡ ವಸ್ತುಗಳ ತಯಾರಿಕೆ, ಸರಬರಾಜು ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಪಾಲಿಕೆಯಿಂದ ಆದೇಶ ಹೊರಡಿಸಲಾಗಿದೆ.

ಆದರೂ ಹಲವಾರು ಉದ್ದಿಮೆದಾರರು, ವ್ಯಾಪಾರಸ್ಥರು, ರಸ್ತೆ ಬದಿಯ ವ್ಯಾಪಾರಸ್ಥರು ನಿಷೇದಿಸಿರುವ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮಾಡುತ್ತಿರುವುದು ಹಾಗೂ ಗ್ರಾಹಕರಿಗೆ ಪ್ಲಾಸ್ಟಿಕ್ ಚೀಲದಲ್ಲಿ ಸಾಮಾಗ್ರಿಗಳನ್ನು ವಿತರಣೆ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅಂತಹ ವ್ಯಾಪಾರಸ್ಥರ ಉದ್ದಿಮೆಯ ಮೇಲೆ ದಾಳಿ ನಡೆಸಿ ನಿಷೇದಿಸಿದ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿ ದಂಡ ವಿಧಿಸಲಾಗಿದ್ದರೂ ಇನ್ನೂ ಅನೇಕ ಅಂಗಡಿ, ವ್ಯಾಪಾರ ಉದ್ದಿಮೆಗಳಲ್ಲಿ ಬಳಕೆ ಮತ್ತು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.

ಆದುದರಿಂದ ಇನ್ನು ಮುಂದಕ್ಕೆ ಇದಕ್ಕೆ ಆಸ್ಪದ ನೀಡದೆ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಸರಬರಾಜು ಮತ್ತು ಮಾರಾಟ ಮಾಡುವ ಉದ್ದಿಮೆದಾರರು ಸಪ್ಟೆಂಬರ್ 1 ರಿಂದ ಬಳಕೆ ಮತ್ತು ಮಾರಾಟ ಮಾಡುವುದು ಪರಿಶೀಲನೆ ಸಮಯದಲ್ಲಿ ಕಂಡು ಬಂದಲ್ಲಿ ಯಾವುದೇ ಮುನ್ಸೂಚನೆ ನೀಡದೆ, ಎಲ್ಲಾ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಂಡು, ರೂ 1000/ ರಿಂದ ರೂ 10,000/ ವರೆಗೆ ದಂಡ ವಿಧಿಸಲಾಗುವುದು. ಈ ನಿರ್ದೇಶವನ್ನು ಉಲ್ಲಂಘಿಸಿದ ಕಾರಣ ಅಪರಾಧದ ಸ್ವರೂಪಕ್ಕೆ ಅನುಗುಣವಾಗಿ ಪರಿಸರ (ಸಂರಕ್ಷಣೆ) ಕಾಯಿದೆ, 1986ರ ಸೆಕ್ಷನ್ 19ರ ಅನ್ವಯ ಪ್ರದತ್ತವಾಗಿರುವ ಅಧಿಕಾರದಂತೆ ಹಾಗೂ ಉದ್ದಿಮೆ ಪರವಾನಿಗೆ ರದ್ದುಗೊಳಿಸುವ ಕ್ರಮವನ್ನು ಕೂಡ ಕೈಗೊಳ್ಳಲಾಗುವುದು ಎಂದು ಆಯುಕ್ತರು ಮಹಾನಗರಪಾಲಿಕೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.


Spread the love

Exit mobile version