Home Mangalorean News Kannada News ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ತ್ವರಿತಗೊಳಿಸಿ: ಸಂಸದ ಬ್ರಿಜೇಶ್ ಚೌಟ ಸೂಚನೆ

ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ತ್ವರಿತಗೊಳಿಸಿ: ಸಂಸದ ಬ್ರಿಜೇಶ್ ಚೌಟ ಸೂಚನೆ

Spread the love

ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ತ್ವರಿತಗೊಳಿಸಿ: ಸಂಸದ ಬ್ರಿಜೇಶ್ ಚೌಟ ಸೂಚನೆ

ಮಂಗಳೂರು: ಮಂಗಳೂರು ತಾಲೂಕಿನ ಗಂಜಿಮಠದಲ್ಲಿ ಸ್ಥಾಪಿಸಲು ಉದೇಶಿಸಿರುವ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ನಡೆಸುವಂತೆ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಬ್ರ್ರಿಜೇಶ್ ಚೌಟ ಅವರು ಸೂಚಿಸಿದ್ದಾರೆ.

ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಂದ್ರ ಸರಕಾರದ ಯೋಜನೆಗಳ ಅನುಷ್ಠಾನದ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 104 ಎಕರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಕಾಮಗಾರಿಯನ್ನು ಸಣ್ಣಪುಟ್ಟ ಸಮಸ್ಯೆಗಳಿಗಾಗಿ ಇಡೀ ಯೋಜನೆಯನ್ನು ಸ್ಥಗಿತಗೊಳಿಸಿರುವುದು ಸರಿಯಲ್ಲ. ಹಲವು ವರ್ಷಗಳ ಹಿಂದೆ ಕೇಂದ್ರ ರಾಸಾಯನಿಕ ಸಚಿವರಾಗಿದ್ದ ಅನಂತಕುಮಾರ್ ಅವರು ಜಿಲ್ಲೆಗೆ ಪ್ಲಾಸ್ಟಿಕ್ ಪಾರ್ಕ್ ಮಂಜೂರುಗೊಳಿಸಿದ್ದರು. ಪ್ರಸ್ತುತ 32 ಕೋಟಿ ರೂ. ಅನುದಾನ ಇದ್ದರೂ, ಕಾಮಗಾರಿ ಸ್ಥಗಿತಗೊಂಡಿರುವುದಕ್ಕೆ ಸಂಸದರು ಅತೃಪ್ತಿ ವ್ಯಕ್ತಪಡಿಸಿದರು.

ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಜಿಲ್ಲೆಯ ಅಭಿವೃದ್ಧಿಗೆ ಮಹತ್ವದ ಯೋಜನೆಯಾಗಿದ್ದು, ನಿರ್ಮಾಣಗೊಂಡರೆ ಸಾವಿರಾರು ಮಂದಿಗೆ ಉದ್ಯೋಗ ದೊರಕಲಿದೆ. ಈ ನಿಟ್ಟಿನಲ್ಲಿ ಕ್ರಿಯಾಯೋಜನೆ ರಚಿಸಿ ಕಾಮಗಾರಿ ಮುಂದುವರಿಸುವಂತೆ ಸಂಸದರು ಸೂಚಿಸಿದರು.

ಜಲಜೀವನ ಯೋಜನೆ: ಜಲಜೀವನ ಯೋಜನೆಯಡಿ ಮನೆ ಮನೆಗೆ ನೀರು ಸರಬರಾಜು ಮಾಡುವ ಯೋಜನೆಯ ಕಾಮಗಾರಿ ಪರಿಶೀಲಿಸಿದ ಅವರು, ಯೋಜನೆಯ ಅನುಷ್ಠಾನದಲ್ಲಿ ವಿಳಂಬ ಸಲ್ಲದು. ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡುವ ಈ ಯೋಜನೆಯನ್ನು ಸಮರ್ಪಕವಾಗಿ, ಅನುಷ್ಠಾನಗೊಳಿಸಬೇಕು. ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಿ, ಪ್ರಚಾರ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ತಿಳಿಸಿದರು.

ಪ್ರಧಾನಮಂತ್ರಿ ಉದ್ಯೋಗ ಖಾತರಿ ಯೋಜನೆಯಲ್ಲಿ(ಪಿಎಂಇಜಿಪಿ) ಬ್ಯಾಂಕ್ ಸಾಲವನ್ನು ಅರ್ಹರಿಗೆ ಮಾತ್ರ ದೊರಕುವುದನ್ನು ಖಾತ್ರಿ ಪಡಿಸಬೇಕು. ಬೇರೆ ಯೋಜನೆಯ ಸಾಲವನ್ನು ಪಿಎಂಇಜಿಪಿ ಯೋಜನೆಯಡಿ ಮಂಜೂರು ಮಾಡುವುದನ್ನು ಒಪ್ಪಲಾಗದು. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಸಂಸದ ಬೃಜೇಶ್ ಚೌಟ ಅವರು ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಎಲ್ಲ ಬ್ಯಾಂಕುಗಳು ತಮ್ಮ ಸಿ.ಎಸ್.ಆರ್. ಅನುದಾನವನ್ನು ಜಿಲ್ಲೆಗೆ ಸಮರ್ಪಕವಾಗಿ ಬಳಸಿ, ಸಾರ್ವಜನಿಕ ಉಪಯೋಗಿ ಕಾರ್ಯಗಳಿಗೆ ವೆಚ್ಚ ಮಾಡಬೇಕು. ಗ್ರಾಮೀಣ ಪ್ರದೇಶಗಳ ಬ್ಯಾಂಕ್ ಶಾಖೆಗಳಲ್ಲಿ ಕನ್ನಡ ಮಾತನಾಡಬಲ್ಲ ಅಧಿಕಾರಿ ಮತ್ತು ಸಿಬ್ಬಂಧಿಗಳನ್ನು ನೇಮಿಸಲು ಒತ್ತು ನೀಡಬೇಕು ಎಂದು ತಿಳಿಸಿದರು.


Spread the love

Exit mobile version