ಪ್ಲಾಸ್ಟಿಕ್ ಬಳಕೆ ನಿರ್ಮೂಲನೆ ಸರಕಾರಿ ಕಚೇರಿಗಳಿಂದಲೇ ಆರಂಭವಾಗಬೇಕು: ದಿನಕರ ಬಾಬು

Spread the love

ಪ್ಲಾಸ್ಟಿಕ್ ಬಳಕೆ ನಿರ್ಮೂಲನೆ ಸರಕಾರಿ ಕಚೇರಿಗಳಿಂದಲೇ ಆರಂಭವಾಗಬೇಕು: ದಿನಕರ ಬಾಬು

ಉಡುಪಿ: ಸರಕಾರವೇ ರೂಪಿಸಿದ ಕಾನೂನುಗಳನ್ನು ಸರಕಾರದ ಅಧಿಕಾರಿಗಳೇ ಪಾಲಿಸದಿದ್ದರೆ ಕಾನೂನಿಗೆ ಬೆಲೆ ಇರುವುದಿಲ್ಲ. ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ಮತ್ತು ಸರಕಾರಿ ಕಾರ್ಯಕ್ರಮಗಳಲ್ಲಿ ಅಚಾತುರ್ಯದಿಂದ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡುಬರುತ್ತಿದ್ದು, ಪ್ಲಾಸ್ಟಿಕ್ ನಿರ್ಮೂಲನೆ ಕ್ರಮಗಳು ಸರಕಾರಿ ಕಚೇರಿಗಳಿಂದಲೇ ಆರಂಭವಾಗಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

ಅವರು ಗುರುವಾರ ಜಿಲ್ಲಾ ಪಂಚಾಯತ್ ಆವರಣದಲ್ಲಿ ನಡೆದ ‘ಸ್ವಚ್ಛತಾ ಹೀ ಸೇವಾ’ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾದ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಆಂದೋಲನ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂತಹ ನಡವಳಿಕೆಗಳನ್ನು ತಿದ್ದಿಕೊಂಡು ಕಾನೂನನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕೆಂದು

 ಸರಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ನಿಂದ ಸುತ್ತಿರುವ ಹೂಗುಚ್ಚಗಳನ್ನು ನೀಡುವುದಕ್ಕೆ ಕಡಿವಾಣ ಹಾಕುವ ಮೂಲಕ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಬೇಕು, ಜಿಲ್ಲೆಯಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಮತ್ತು ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸಲು ಗ್ರಾಮೀಣ ಮಟ್ಟದಲ್ಲಿ 15 ದಿನಗಳ ಕಾಲ 30 ಗ್ರಾಮಗಳಲ್ಲಿ ಜಾಥಾ ಕಾರ್ಯಕ್ರಮ ನಡೆಯಲಿದ್ದು,  ಜಾಥಾವು ಹಳ್ಳಿಹಳ್ಳಿಗಳಿಗೆ ತೆರಳಿ ಬೀದಿ ನಾಟಕದ ಮೂಲಕ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದರು. ಇಲಾಖೆಗಳ ಅಧಿಕಾರಿಗಳು, ಶಿಕ್ಷಣ ಸಂಸ್ಥೆಗಳು, ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಚ ಸರ್ವೇಕ್ಷಣ್ ಆಪ್ ನಲ್ಲಿ ಕಡ್ಡಾಯವಾಗಿ ಭಾಗವಹಿಸಿ ಜಿಲ್ಲೆ ಪ್ರಥಮ ಶ್ರೇಣಿಯಲ್ಲಿ ಬರುವಂತಾಗಬೇಕು ಎಂದು ಆಶಿಸಿದರು.

 ಸ್ವಚ್ಛತಾ ಆಂದೋಲನದ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿ ಜಿ ಜಗದೀಶ್, ದೇಶದಲ್ಲೇ ಮೊತ್ತ ಮೊದಲ ಬಾರಿಗೆ ಪ್ಲಾಸ್ಟಿಕ್ ಬ್ಯಾನ್ ನಿರ್ಧಾರವನ್ನು ಕೈಗೊಂಡ ರಾಜ್ಯ ಕರ್ನಾಟಕ. ಆದರೂ ಪ್ಲಾಸ್ಟಿಕ್ ಬಳಕೆಯ ನಿಬರ್ಂಧವನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ವಿಫಲತೆಯನ್ನು ಅನುಭವಿಸುತ್ತಿದ್ದೇವೆ. ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅರಿವಿರುವವರೇ ಕಾನೂನನ್ನು ಪಾಲಿಸದಿದ್ದಲ್ಲಿ ಸಾರ್ವಜನಿಕರಿಗೆ ಹೇಳುವ ನೈತಿಕತೆ ಇರುವುದಿಲ್ಲ. ಪ್ಲಾಸ್ಟಿಕ್ ಬಳಕೆ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕಾನೂನಿನಲ್ಲಿ ದಂಡದ ವ್ಯವಸ್ಥೆ ಇದ್ದರೂ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂದರು. ಸರಕಾರದ ಆದೇಶವನ್ನು ಅಧಿಕಾರಿಗಳು ಸರಿಯಾಗಿ ಪಾಲಿಸಬೇಕು. ಕಾನೂನನ್ನು ಉಲ್ಲಂಘಿಸಿ ಪ್ಲಾಸ್ಟಿಕ್ನ್ನು ಬಳಕೆ ಮಾಡುವವರಿಗೆ ಮತ್ತು ಕಂಡಕಂಡಲ್ಲಿ ಎಸೆಯುವವರಿಗೆ ಒಂದು ತಿಂಗಳಿನ ಗಡುವಿನ ಎಚ್ಚರಿಕೆಯನ್ನು ನೀಡಿ, ಒಂದು ವೇಳೆ ಗಡುವಿನೊಳಗೆ ಕಾನೂನು ಅನುಷ್ಠಾನಗೊಳಿಸದಿದ್ದಲ್ಲಿ ಅಂಥವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಭಾರೀ ದಂಡ ವಿಧಿಸಬೇಕು ಎಂದರು.

 ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ. ಕೆ. ಶೆಟ್ಟಿ ಮಾತನಾಡಿ, ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ ಎಂದು ಪ್ರತಿಜ್ಞೆ ತೆಗೆದುಕೊಳ್ಳಬೇಕು. ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸದವರ ಮೇಲೆ ಶಾಸನ ಬದ್ದವಾಗಿ ದಂಡ ವಿಧಿಸಬೇಕು ಎಂದರು. ಎಲ್ಲಾ ಗ್ರಾಮ ಪಂಚಾಯತ್ಗಳು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಹಾಗೂ ಸಾಧ್ಯವಿದ್ದಲ್ಲಿ ಅಧಿಕಾರಿಗಳು ಗ್ರಾಮಗಳನ್ನು ದತ್ತು ತೆಗೆದುಕೊಂಡು ಉಡುಪಿಯನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸಬೇಕು ಎಂದರು.

 ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಕಂತ್ ಪಡುಬಿದ್ರಿ, ಜಿ.ಪಂ. ಸದಸ್ಯ ರೇಷ್ಮಾ ಉದಯ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಉಪಸ್ಥಿತರಿದ್ದರು.

 ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಸ್ವಾಗತಿಸಿ ವಂದಿಸಿದರು.

 ಕಾರ್ಯಕ್ರಮದಲ್ಲಿ ಗಣೇಶಪುರ ಸಿದ್ದಿ ವಿನಾಯಕ ಯಕ್ಷಗಾನ ಮಂಡಳಿಯ ಕಲಾವಿದರಿಂದ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಬೀದಿನಾಟಕ ಪ್ರದರ್ಶನ ನಡೆಯಿತು.


Spread the love