ಪ.ಪಂಗಡದ ಸ್ವ ಸಹಾಯ ಸಂಘ ರಚಿಸಿ ತೋಟಗಾರಿಕಾ ಚಟುವಟಿಕೆ : ಡಿಸಿ ಹೆಪ್ಸಿಬಾ ರಾಣಿ ಕೊರ್ಲಪಾಟಿ
ಉಡುಪಿ: ಜಿಲ್ಲೆಯಲ್ಲಿ ಪ.ಪಂಗಡದ ಜನತೆಯನ್ನು ಒಳಗೊಂಡ ಸ್ವ ಸಹಾಯ ಸಂಘಗಳನ್ನು ರಚಿಸಿ, ಈ ಸಂಘದ ಮೂಲಕ ತೋಟಗಾರಿಕಾ ಚಟುವಟಿಕೆ ಏರ್ಪಡಿಸುವ ಕುರಿತಂತೆ ಪೈಲಟ್ ಯೋಜನೆಯನ್ನು ರೂಪಿಸುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಅವರು ಗುರುವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ನಡೆದ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ.ವರ್ಗದ ಜನರ ಆರ್ಥಿಕ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪಂಗಡದ ಸದಸ್ಯರನ್ನು ಒಳಗೊಂಡ ಸ್ವ ಸಹಾಯ ಸಂಘ ರಚಿಸಿ, ಆ ಸಂಘಕ್ಕೆ ತೋಟಗಾರಿಕಾ ಇಲಾಖೆಯಿಂದ ಲಭ್ಯವಿರುವ ಎಲ್ಲಾ ಯೋಜನೆಯ ಸೌಲಭ್ಯಗಳನ್ನು ಒದಗಿಸಿ, ತೋಟಗಾರಿಕಾ ಚಟುವಟಿಕೆ ಕೈಗೊಳ್ಳುವ ಮೂಲಕ ಆರ್ಥಿಕ ಮಟ್ಟವನ್ನು ಸುಧಾರಣೆ ಮಾಡುವ ಕುರಿತಂತೆ ಯೋಜನೆ ರೂಪಿಸಿ, ಜಿಲ್ಲೆಯಲ್ಲಿ ಪೈಲಟ್ ಯೋಜನೆಯಾಗಿ ಒಂದು ಗ್ರಾಮದಲ್ಲಿ ಆರಂಭಿಸಿ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಎಲ್ಲಾ ಇಲಾಖೆಗಳು ತಮಗೆ ನೀಡಿರುವ ಗುರಿಯನ್ನು ವರ್ಷಾಂತ್ಯದೊಳಗೆ ಪೂರ್ಣಗೊಳಿಸಿ, ಸಂಪೂರ್ಣ ಗುರಿ ಸಾಧಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಮುಂದಿನ ವರ್ಷದಲ್ಲಿ, ಶೀಘ್ರದಲ್ಲಿ ಕ್ರಿಯಾ ಯೋಜನೆಗಳನ್ನು ರೂಪಿಸಿ ಬೇಗನೆ ಕಾರ್ಯಕ್ರಮಗಳನ್ನು ಆಯೋಜಿಸಿ, ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಭುಜಬಲಿ ಹಾಗೂ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.