ಫಾಝಿಲ್ ಕೊಲೆ ಪ್ರಕರಣ: ಪ್ರಮುಖ ಮೂವರು ಆರೋಪಿಗಳಿಗೆ ಜಾಮೀನು
ಸುರತ್ಕಲ್ : ಇಲ್ಲಿನ ಮಂಗಳಪೇಟೆ ನಿವಾಸಿ ಮುಹಮ್ಮದ್ ಫಾಝಿಲ್ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಪ್ರಮುಖ ಮೂರು ಆರೋಪಿಗಳಿಗೆ ರಾಜ್ಯ ಉಚ್ಛ ನ್ಯಾಯಾಲಯ ಶರತ್ತುಬದ್ಧ ಜಾಮೀನು ನೀಡಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಕವ್ವಳಮಡೂರು ಗ್ರಾಮ, ಬಂಟ್ವಾಳ ತಾಲೂಕು ನಿವಾಸಿ ಸುಹಾಸ್ ಶೆಟ್ಟಿ ಯಾನೆ ಸುಭಾಶ್, ಕಾಟಿಪಳ್ಳ 3ನೇ ಬ್ಲಾಕ್ ನಿವಾಸಿ ಅಭಿಫೇಕ್ ಯಾನೆ ಅಭಿ, ಕುಳಾಯಿ ನಿವಾಸಿ ಮೋಹನ್ ಸಿಂಗ್ ಯಾನೆ ನೇಪಾಲಿ ಮೋಹನ್ ಗೆ ಹೈಕೋರ್ಟ್ ಜಾಮೀನು ನೀಡಿ ಆದೇಶಿಸಿದೆ.
ಫಾಝಿಲ್ ಕೊಲೆ ಸಂಬಂಧ ಸುರತ್ಕಲ್ ಪೊಲೀಸರು ಈ ಮೂವರನ್ನು A1, A2, ಮತ್ತು A3 ಆರೋಪಿಗಳೆಂದು ಗುರುತಿಸಿ ಮಂಗಳೂರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ಜಾಮಿನು ಕೋರಿ ಆರೋಪಿಗಳ ಪರ ವಕೀಲರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಮೂವರಿಗೆ ನ್ಯಾಯಾಲಯವು ಆರೋಪಿಗಳು ತಲಾ ಒಂದು ಲಕ್ಷ ರೂ. ಬಾಂಡ್ ನ್ಯಾಯಾಲಯಕ್ಕೆ ಕಟ್ಟಬೇಕು. ಪ್ರಕರಣ ಸಂಬಂಧ ಕೆಳ ನ್ಯಾಯಾಲಯದ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಬೇಕು. ಸಾಕ್ಷಿಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಬೆದರಿಕೆ ಹಾಕಬಾರದು ಅಥವಾ ಹಾಳು ಮಾಡಬಾರದು, ಭವಿಷ್ಯದಲ್ಲಿ ಇದೇ ರೀತಿಯ ಅಪರಾಧಗಳಲ್ಲಿ ಭಾಗಿಯಾಗಬಾರದು, ಮೊಕದ್ದಮೆ ವಿಲೇವಾರಿಯಾಗದೆ ನ್ಯಾಯಾಲಯದ ಅನುಮತಿಯಿಲ್ಲದೆ ಊರು ಬಿಡುವಂತಿಲ್ಲ. ಎಲ್ಲಾ ಮೂವರು ಪ್ರತಿ ರವಿವಾರ ಸುರತ್ಕಲ್ ಪೊಲೀಸ್ ಠಾಣೆಗೆ ಹಾಜರಾಗಿ ಹಾಜರಾತಿ ಸಲ್ಲಿಸಬೇಕು ಎಂಬ ಷರತ್ತುಗಳನ್ನು ವಿಧಿಸಿ ಆದೇಶದಲ್ಲಿ ಸೂಚಿಸಿದೆ.
ಸುರತ್ಕಲ್ ಪೇಟೆಯಲ್ಲಿದ್ದ ತನ್ನ ಸ್ನೇಹಿತನ ಅಂಗಡಿಗೆ ತೆರಳಿದ್ದ ಮಂಗಳಪೇಟೆ ನಿವಾಸಿ ಮುಹಮ್ಮದ್ ಫಾಝಿಲ್ ನನ್ನು ದುಷ್ಕರ್ಮಿಗಳು 2022ರ ಜುಲೈ 28ರಂದು ರಾತ್ರಿ 8 ಗಂಟೆಯ ಸುಮಾರಿಗೆ ತಲವಾರುಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು.
ಪ್ರಕರಣ ಸಂಬಂಧ ಸುರತ್ಕಲ್ ಪೊಲೀಸರು ಒಟ್ಟು 8 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಈ ಪೈಕಿ 5 ಮಂದಿ ಈಗಾಗಲೇ ಜಾಮೀನು ಪಡೆದುಕೊಂಡಿದ್ದಾರೆ.