ಫುಟ್ ಬೋರ್ಡಿನಲ್ಲಿ ನೇತಾಡಿಕೊಂಡು ಪ್ರಯಾಣ; ಕ್ರಮದ ಕುರಿತು ಎಸ್ಪಿ ಸಂಜೀವ್ ಪಾಟೀಲ್ ಎಚ್ಚರಿಕೆ
ಉಡುಪಿ: ಬಸ್ಸುಗಳ ಫುಟ್ ಬೋರ್ಡಿನಲ್ಲಿ ಕಾಲೇಜು ವಿದ್ಯಾರ್ಥಿಗಳು ನೇತಾಡಿಕೊಂಡು ಹೋಗುವ ಕುರಿತು ಉಡುಪಿ ಜಿಲ್ಲಾ ಎಸ್ಪಿ ಡಾ. ಸಂಜೀವ್ ಪಾಟೀಲ್ ಅವರು ಆಯೋಜಿಸಿರು ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ದೂರಿದ್ದು ನಾಳೆಯಿಂದನೇ ಈ ಕುರಿತು ಪೋಲಿಸ್ ಇಲಾಖೆ ಸೂಕ್ತ ತಪಾಸಣೆ ಆರಂಭಿಸಲಿದೆ ಎಂದು ಪಾಟೀಲ್ ಆಶ್ವಾಸನೆ ನೀಡಿದ್ದಾರೆ.
ಅಗಸ್ಟ್ 26 ರಂದು ಅವರು ಜಿಲ್ಲಾ ಪೋಲಿಸ್ ಕಚೇರಿಯಲ್ಲಿ ತಮ್ಮ ಎರಡನೇ ವಾರದ ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕರೆಗೆ ಪ್ರತಿಕ್ರಿಯಿಸಿದರು. ಉಡುಪಿ-ಬ್ರಹ್ಮಾವರ- ಕೊಕ್ಕರ್ಣೆ ಪ್ರದೇಶದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಫುಟ್ ಬೋರ್ಡಿನಲ್ಲಿ ಅಪಾಯಕಾರಿಯಾಗಿ ನೇತಾಡಿಕೊಂಡು ಪ್ರಯಾಣ ಮಾಡುತ್ತಿದ್ದ ಕುರಿತು ಬಂದ ಕರೆಗೆ ಪ್ರತಿಕ್ರಿಯಿಸಿದ ಅವರು ಸಪ್ಟೆಂಬರ್ 1 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆರ್ ಟಿ ಎ ಸಭೆ ನಡೆಯಲಿದ್ದು, ಇದರಲ್ಲೂ ಕೂಡ ತಾನು ಪ್ರಸ್ತಾಪ ಮಾಡುವುದರ ಜೊತೆಗೆ ಬಸ್ಸುಗಳು ಕಡ್ಡಾಯವಾಗಿ ಬಾಗಿಲು ಹಾಕಿಕೊಂಡು ಸಂಚರಿಸುವ ಕುರಿತು ಸೂಕ್ತ ನಿರ್ದೇಶನ ನೀಡುವ ಕುರಿತು ಚಿಂತಿಸಲಾಗುವುದು ಅಲ್ಲದೆ ನಾಳೆಯಿಂದನೇ ಈ ಕುರಿತು ತಪಾಸಣೆ ಕೂಡ ಮಾಡಲಾಗುವುದು ಎಂದರು.
ಕಾರ್ಕಳ ನಗರದಲ್ಲಿ ರಿಕ್ಷಾಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿದ್ದು ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಸಂಚರಿಸುವುದು ಕಷ್ಟವಾಗುತ್ತಿರುವ ಕುರಿತು ಬಂದ ಕರೆಗೆ ಪ್ರತಿಕ್ರಿಯಿಸಿದ ಪಾಟೀಲ್ ಅವರು ಸಂಜೆಯ ಒಳಗೆ ಸಮಸ್ಯೆಯನ್ನು ಪರಿಹಾರ ಮಾಡಲಾಗುವುದು ಎಂದರು.
ಕುಂದಾಪುರದಲ್ಲಿ ದಿನಗೂಲಿ ನೌಕರರಿಗೆ ಸರಿಯಾಗಿ ವೇತನ ಪಾವತಿ ಮಾಡದ ಕುರಿತು, ಪಿಎಫ್ ಸೌಲಭ್ಯ ನೀಡದ ಕುರಿತು, ಕೋಟದಲ್ಲಿ ವಿಪರೀತವಾಗಿ ಬಡ್ಡಿ ವ್ಯವಹಾರ ನಡೆಯುತ್ತಿರುವ ಕುರಿತು ಬಂದ ಕರೆಗಳಿಗೆ ಪ್ರತಿಕ್ರಿಯಿಸಿದ ಪಾಟೀಲ್ ಅವರು ಈ ಕುರಿತು ತೊಂದರೆಗೊಳಗಾದವರು ಸೂಕ್ತ ದೂರನ್ನು ನೀಡಿದ್ದಲ್ಲಿ ಸಂಬಂಧಪಟ್ಟ ಇಲಾಖೆಯೊಂದಿಗೆ ಸೇರಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇಂದು ಕೇವಲ 6 ಕರೆಗಳು ಮಾತ್ರ ಬಂದಿದ್ದು, ಸೂಕ್ತ ಪ್ರಚಾರ ಇಲ್ಲದೆ ಹಾಗೂ ಹಬ್ಬದ ಮೂಡಿನಲ್ಲಿ ಜನರು ಇರುವುದರಿಂದ ಹೀಗೆ ಆಗಿರಬಹುದು. ಬಂದ ಕರೆಗಳ ಕುರಿತು ಪೋಲಿಸ್ ಇಲಾಖೆ ಕ್ರಮ ಕೈಗೊಳ್ಳಲಿದೆ. ಹಿಂದಿನ ವಾರದ ಕರೆಗಳ ಕುರಿತು ಆಯಾ ಠಾಣಾ ವ್ಯಾಪ್ತಿಯ ಪೋಲಿಸ್ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿದ್ದು ಇದರಿಂದ ಉತ್ತಮ ಫಲಿತಾಂಶ ಬರುವ ಲಕ್ಷಗಳು ಇವೆ. ಹಿಂದಿನ ವಾರದ ಫೋನ್ ಇನ್ ಕಾರ್ಯಕ್ರಮದ ಬಳಿಕ ಜಿಲ್ಲೆಯಲ್ಲಿ ಒಟ್ಟು 31 ಮಟ್ಕಾ, 5 ಜುಗಾರಿ ಹಾಗೂ ಇಸ್ಪೀಟ್ ಕೇಸು ದಾಖಲಿಸಿದ್ದು, 265 ಕರ್ಕಶ ಹಾರ್ನ್ ವಿರುದ್ದ, ಕುಡಿದು ವಾಹನ ಚಲಾವಣೆ ಯ ಬಗ್ಗೆ 52 ಕೇಸು ಹಾಗೂ 865 ಹೆಲ್ಮೇಟ್ ರಹಿತ ವಾಹನ ಚಲಾವಣೆಯ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದು ನಿರಂತರವಾಗಿ ನಡೆಯಲಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬರಲಿವೆ ಎಂದರು.
ಗಾಂಜಾ ಸೇವನೆ ಹಾಗೂ ಮಾರಾಟ ಕುರಿತು ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಚಿಂತಿಸಿದ್ದು ಸಾರ್ವಜನಿಕರು ಎಲ್ಲಿ ಗಾಂಜಾ ಮಾರಾಟ ಆಗುತ್ತಿದೆ ಎಂಬ ಮಾಹಿತಿ ಇದ್ದಲ್ಲಿ ಇಲಾಖೆ ಅಥವಾ ತಮಗೆ ವೈಯುಕ್ತಿಕವಾಗಿ ಮಾಹಿತಿ ನೀಡಿದ್ದಲ್ಲಿ ಅಂತಹವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅಲ್ಲದೆ ಮಣಿಪಾಲ ವಿವಿ ಜೊತೆ ಈಗಾಗಲೇ ತಾನು ಮಾತುಕತೆ ನಡೆಸಿದ್ದು ಮಣಿಪಾಲ ಪರಿಸರದಲ್ಲಿ ವಿದ್ಯಾರ್ಥಿಗಳು ಇಂತಹ ಪ್ರಕರಣದಲ್ಲಿ ಸಿಕ್ಕಿ ಬಿದ್ದರೆ ಕಠಿಣ ಕ್ರಮದೊಂದಿಗೆ ಕೇಸು ಕೂಡ ದಾಖಲಿಸುವ ಎಚ್ಚರಿಕೆಯನ್ನು ನೀಡಿದರು.
ಜಿಲ್ಲೆಯಲ್ಲಿನ ಅಕ್ರಮ ತಡೆಯಲು ಹಾಗೂ ಗೋಕಳ್ಳತನ, ಅಕ್ರಮ ಮರಳು ಸಾಗಾಟ ತಡೆಯುವ ನಿಟ್ಟಿನಲ್ಲಿ ಪೋಲಿಸ್ ತಂಡ ಗೌಪ್ಯವಾಗಿ ಕಾರ್ಯಾಚರಣೆ ನಡೆಸಲು ಆರಂಭಿಸಿದೆ. ಸಿಆರ್ ಝಡ್ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಜಿಲ್ಲಾಡಳಿತ ಅವಕಾಶ ನೀಡಿದ್ದು ಗಡಿಭಾಗದಲ್ಲಿ ತಪಾಸಣೆಯನ್ನು ಚುರುಕುಗೊಳಿಸಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ವತಿಯಿಂದ ಗ್ರಾಮೀಣ ಪ್ರದೇಶದಲ್ಲಿನ ಅಕ್ರಮ ಚಟುವಟಿಕೆ ತಡೆಯುವ ನಿಟ್ಟಿನಲ್ಲಿ ಸಿಸಿಟಿವಿ ಪ್ರಾಯೋಜಕತ್ವ ನೀಡಲು ಮುಂದೆ ಬಂದಿದ್ದು ಠಾಣಾ ವ್ಯಾಪ್ತಿಯಲ್ಲಿ ಅಗತ್ಯವಿರುವ ಸಿಸಿಟಿವಿ ಕ್ಯಾಮಾರಗಳ ಸಂಖ್ಯೆಯನ್ನು ಮುಂದಿನ ಸಭೆಯ ಒಳಗೆ ನೀಡಲಾಗುವುದು ಎಂದರು.