ಫೆಬ್ರವರಿ 19: ಮಲ್ಪೆಯಲ್ಲಿ ಮೀನುಗಾರರ ಸಮ್ಮೇಳನ ಉದ್ಘಾಟನೆಗೆ ಅಮಿತ್ ಶಾ
ಉಡುಪಿ:- ಫೆಬ್ರವರಿ 19 ರಂದು ಸಂಜೆ 3 ಗಂಟೆಗೆ ಉಡುಪಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಮಲ್ಪೆ ಕಡಲ ಕಿನಾರೆಯಲ್ಲಿ ಮೂರು ಜಿಲ್ಲೆಯ ಕರಾವಳಿ ತೀರದ ಮೀನುಗಾರರ ಬೃಹತ್ ಸಮ್ಮೇಳನವನ್ನು ಬಿ.ಜೆ.ಪಿಯ ವತಿಯಿಂದ ಆಯೋಜಿಸಲಾಗಿದ್ದು ಈ ಸಮ್ಮೇಳನದ ಉದ್ಘಾಟಣೆಯನ್ನು ಬಿ.ಜೆ.ಪಿಯ ರಾಷ್ರ್ಟೀಯ ಅಧ್ಯಕ್ಷರಾದ ಅಮಿತ್ ಶಾ ಅವರು ಮಾಡಲಿದ್ದಾರೆ ಎಂದು ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷರಾಗಿರುವ ಮಟ್ಟಾರ್ ರತ್ನಾಕರ ಹೆಗ್ಡೆಯವರು ಹೇಳಿದರು.
ಅವರು ಗುರುವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪರು, ಕೇಂದ್ರದ ಸಚಿವರುಗಳು, ಮಂಗಳೂರು ಮತ್ತು ಉಡುಪಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಮತ್ತು ಶೋಭಾ ಕರಂದ್ಲಾಜೆ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರು ಫೆಬ್ರವರಿ 19 ರ ಮಧ್ಯಾಹ್ನದಿಂದ ಫೆಬ್ರವರಿ 20 ರ ಮಧ್ಯಾಹ್ನದವರೆಗೆ ಉಡುಪಿ ಜಿಲ್ಲೆಯಲ್ಲಿದ್ದು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಫೆಬ್ರವರಿ 20 ರಂದು 10.00 ಗಂಟೆಗೆ ಸಾಮಾಜಿಕ ಜಾಲಾತಾಣ ಪ್ರಮುಖರ ಸಮಾವೇಶ 11.00 ರಿಂದ 1.00 ಗಂಟೆಯವರೆಗೆ ಬಿ.ಜೆ.ಪಿ ಎರಡು ವಿಭಾಗಗಳ (ಆರು ಜಿಲ್ಲೆ) ಶಕ್ತಿ ಕೇಂದ್ರಗಳ ಪ್ರಮುಖರ ಸಭೆಯನ್ನು ತೆಗೆದು ಕೊಳ್ಳುವವರಿದ್ದಾರೆ ಎಂದರು.
ಮೀನುಗಾರರ ಸಮ್ಮೇಳನ ಸಂಚಾಲಕರಾಗಿ ಯಶ್‍ಪಾಲ್ ಸುವರ್ಣ
ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯಲ್ಲಿ ನಡೆಯಲಿರುವ ಮೀನುಗಾರರ ಬೃಹತ್ ಸಮ್ಮೇಳನಕ್ಕೆ ಸಂಚಾಲಕರನ್ನಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನುಗಾರಿಕಾ ಫೇಡರೇಶನ್‍ನ ಅಧ್ಯಕ್ಷರಾದ ಯಶ್‍ಪಾಲ್ ಸುವರ್ಣ ಇವರನ್ನು ನೇಮಿಸಲಾಗಿದ್ದು ಉಳಿದಂತೆ ಸಹ ಸಂಚಾಲಕರನ್ನಾಗಿ ಮಾಜಿ ಶಾಸಕರಾದ ಲಾಲಾಜಿ ಆರ್. ಮೆಂಡನ್, ಸದಾನಂದ ಬಳ್ಕೂರು, ಶಶಿಕಾಂತ್ ಪಡುಬಿದ್ರಿ, ನರೇಶ್ ಕೊಡೇರಿ, ಪಾಂಡುರಂಗ ಮಲ್ಪೆ, ಮಂಜು ಬಿಲ್ಲವ ನೇಮಿಸಲಾಗಿದೆ.
ಅವರೊಂದಿಗೆ ವಿಧಾನ ಪರಿಷತ್ ಸದಸ್ಯರು ಮತ್ತು ಮಾಜಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ, ವಿಧಾನ ಸಭೆಯ ವಿಪಕ್ಷದ ಮುಖ್ಯ ಸಚೇತಕರು ಮತ್ತು ಕಾರ್ಕಳದ ಶಾಸಕರಾದ ಸುನಿಲ್ ಕುಮಾರ್, ಮಾಜಿ ಸಚಿವರಾದ ಮತ್ತು ಮಾಜಿ ಸಂಸದರಾದ ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಮಾಜಿ ಶಾಸಕರಾದ ಕೆ. ರಘುಪತಿ ಭಟ್, ಸುಕುಮಾರ್ ಶೆಟ್ಟಿ ಬೈಂದೂರು, ಕಿರಣ್ ಕೊಡ್ಗಿ ಕುಂದಾಪುರ, ಗುರ್ಮೆ ಸುರೇಶ್ ಶೆಟ್ಟಿ ಕಾಪು ಜಿಲ್ಲೆಯ ಪ್ರಮುಖರನ್ನು ಸೇರಿಸಿ ಸಮಿತಿಯನ್ನು ರಚಿಸಲಾಗಿದೆ. ಸಮ್ಮೇಳನದ ಪೂರ್ವಭಾವಿ ಕೆಲಸಗಳು ಈಗಾಗಲೇ ಆರಂಭವಾಗಿದ್ದು ಸುಮಾರು 50 ಸಾವಿರ ಜನರ ನಿರೀಕ್ಷೆಯನ್ನು ಮಾಡಲಾಗಿದೆ ಎಂದರು