ಫೆ.14: ಕಂದಾಯ ಸಚಿವ ಕಾಗೋಡು ತಿಮ್ಮಪ್ಪರಿಂದ ಕಾಪು ತಾಲೂಕಿಗೆ ಚಾಲನೆ; ವಿನಯ್ ಕುಮಾರ್ ಸೊರಕೆ
ಉಡುಪಿ: ನೂತನವಾಗಿ ಘೋಷಣೆಯಾದ ಕಾಪು ತಾಲೂಕು ಕೆಂದ್ರಕ್ಕೆ ಫೆಬ್ರವರಿ 14ರಂದು ಸಂಜೆ 3 ಗಂಟೆಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಚಾಲನೆ ನೀಡಿಲಿದ್ದು ಫೆಬ್ರವರಿ 15 ರಿಂದಲೇ ಕಾಪು ತಾಲೂಕು ಪೂರ್ಣ ಪ್ರಮಾಣದಲ್ಲಿ ಕಾರ್ಯರಂಭ ಮಾಡಲಿದೆ ಎಂದು ಕಾಪು ಶಾಸಕ ಹಾಗೂ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಅವರು ಮಂಗಳವಾರ ಕಾಪು ಪ್ರೆಸ್ ಕ್ಲಬ್ಬಿನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನೂತನ ತಾಲೂಕಿಗೆ ಶೀಘ್ರವೇ ತಹಶೀಲ್ದಾರರ ನೇಮಕ ಆಗಲಿದ್ದು ಅಲ್ಲಿಯವರೆಗೆ ಉಡುಪಿಯ ತಾಲೂಕು ತಹಶೀಲ್ದಾರ್ ಪ್ರದೀಪ್ ಕುರುಡೆಕರ್ ಪ್ರಭಾರವಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕಾಪು ಕ್ಷೇತ್ರದಲ್ಲಿ ಗ್ರಾಮ ಕರಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರನ್ನು ತಾಲೂಕು ಕಚೇರಿ ಕರ್ತವ್ಯಕ್ಕೆ ನಿಯೋಜಿಸಲಾಗುವುದು ಎಂದರು.
ಕಾಪು ವಿಧಾನಸಭಾ ಕ್ಷೇತ್ರದ 30 ಗ್ರಾಮಪಂಚಾಯತಿಗಳನ್ನು ಒಳಗೊಂಡಿರುವ ಕಾಪು ತಾಲೂಕಿಗೆ ಕೇವಲ ಮೂಡುಬೆಳ್ಳೆ ಗ್ರಾಮದ ತಕರಾರು ಇತ್ತು. ತಾಲೂಕಾದ ಪರಿಣಾಂ ಪಡುಬಿದ್ರಿ ಹಾಗೂ ಶಿರ್ವದಲ್ಲಿ ನಾಡಕಚೇರಿ ಆರಂಬಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೂಡುಬೆಳ್ಳೆ ಗ್ರಾಮದ ಜನ ಹಿಂದೆಯೂ ನಾಡಕಚೇರಿ ಕೆಲಸಗಳಿಗೆ ಕಾಪುವಿಗೆ ಬರುತ್ತಿದ್ದರು. ಶಿರ್ವದಲ್ಲಿ ನಾಡ ಕಚೇರಿ ಆರಂಭವಾದರೆ ಮೂಡುಬೆಳ್ಳೆಯ ಜನರಿಗೆ ಅನೂಕೂಲವಾಗಲಿದೆ ಎಂದರು.
ಕಾಪು ಕ್ಷೇತ್ರದ ಗ್ರಾಮದ ಕೆಲ ಭಾಗಗಳನ್ನು ಉಡುಪಿ ಹಾಗೂ ಬ್ರಹ್ಮಾವರಕ್ಕೆ ಸೇರ್ಪಡೆ ಮಾಡಲಾಗಿದ್ದು, ಹಿರಿಯಡ್ಕದಲ್ಲಿಯೂ ನಾಡಕಚೇರಿ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರೂ 10 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸಮಗ್ರ ಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಂದಾಯ ಸಚಿವರು ಅದಕ್ಕೆ ಅಂಕಿತ ಹಾಕಿದ್ದು, ಸಂಪುಟ ಅನುಮೋದನೆ ಬಳಿಕ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗುವುದು. ತಾಲೂಕು ಪಂಚಾಯತ್, ತಾಲೂಕು ನ್ಯಾಯಾಲಯ, ಪಶು ಇಲಾಖೆ ಸಹಿತ ಸರ್ವಾಂಗೀಣ ಸರಕಾರಿ ಕಚೇರಿ ಸಂಕೀರ್ಣಗಳು ಬಂಗ್ಲೆ ಪ್ರದೇಶದಲ್ಲಿ ತಲೆ ಎತ್ತಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷ ಕೆ ಎಚ್ ಉಸ್ಮಾನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಿವಾಕರ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.