ಫೆ.19: ಎಫ್ಐಆರ್ ಖಂಡಿಸಿ ಪೊಲೀಸ್ ಠಾಣೆ ಮುಂದೆ ಜೈ ಶ್ರೀರಾಮ್ ಘೋಷಣೆಗಳೊಂದಿಗೆ ಹರತಾಳಕ್ಕೆ ವಿ.ಹೆಚ್.ಪಿ ಕರೆ
ಮಂಗಳೂರು: ಸಂತ ಜೆರೋಸಾ ಶಾಲೆಯ ಶಿಕ್ಷಕಿ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ನಾಯಕರ ವಿರುದ್ಧ ಎಫ್ಐಅರ್ ಖಂಡಿಸಿ ಫೆಬ್ರವರಿ 19 ರಂದು ಮಂಗಳೂರು ನಗರದ ಎಲ್ಲಾ ಠಾಣೆಗಳ ಮುಂದೆ ಜೈ ಶ್ರೀರಾಮ್ ಘೋಷಣೆಗಳೊಂದಿಗೆ ಹರತಾಳಕ್ಕೆ ವಿಹೆಚ್ಪಿ ಕರೆ ನೀಡಿದೆ. ಈ ಬಗ್ಗೆ ಮಾತನಾಡಿದ ವಿಹೆಚ್ಪಿ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಘಟನೆಯಿಂದ ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಆಗಿದೆ ಎಂದರು.
ಎಫ್ಐಆರ್ ದಾಖಲಿಸಿರುವುದನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ. ಜೈ ಶ್ರೀರಾಮ್ ಹೇಳಿದಕ್ಕೆ ಹಿಂದೂ ವಿರೋಧಿ ಸರ್ಕಾರ ಕೇಸ್ ಹಾಕಿದೆ. ಮಂಗಳೂರು ನಗರ ವ್ಯಾಪ್ತಿಯ ಪೊಲೀಸ್ ಠಾಣೆಗಳ ಎದುರು ಜೈಶ್ರೀರಾಮ್ ಘೋಷಣೆಯೊಂದಿಗೆ ಹರತಾಳ ಮಾಡುತ್ತೇವೆ. ಹಿಂದೂ ಸಮಾಜದ ಬಂಧುಗಳು ಪೊಲೀಸ್ ಠಾಣೆಗಳ ಮುಂದೆ ಜೈ ಶ್ರೀರಾಮ್ ಘೋಷಣೆಯ ಜೊತೆ ಧರಣಿ ಮಾಡುತ್ತೇವೆ. ವಿಶೇಷವಾಗಿ ಪಾಂಡೇಶ್ವರ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸುತ್ತೇವೆ ಎಂದರು.
ಶಿಕ್ಷಕಿ ಪ್ರಭಾ ಅವರು ರಾಮ ದೇವರು, ನಾಗದೇವರು, ಕೊರಗಜ್ಜನ ಬಗ್ಗೆ ಅವಹೇಳನ ಮಾಡಿದ್ದಾರೆ. ಇದರ ವಿರುದ್ಧ ಪೋಷಕರು ಪೊಲೀಸ್ ದೂರು ನೀಡಿದರೂ ಇನ್ನು ಪ್ರಕರಣ ದಾಖಲಿಸಿಲ್ಲ. ಶರಣ್ ಪಂಪುವೆಲ್ ವಿರುದ್ಧ ಸುಳ್ಳು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಬಗ್ಗೆ ಪ್ರಶ್ನಿಸಿದರೆ ಮೇಲಿನಿಂದ ಒತ್ತಡ ಇದೆ ಎಂದು ಪೊಲೀಸರು ಹೇಳುತ್ತಿರುವುದಾಗಿ ತಿಳಿಸಿದರು. ಅಲ್ಲದೆ, ನಮ್ಮ ನಾಯಕರ ಮೇಲೆ ಹಾಕಿರುವ ಕೇಸು ವಾಪಾಸು ಪಡೆಯಬೇಕು. ಶಿಕ್ಷಕಿ ಪ್ರಭಾ ಮೇಲೆ ಕೇಸು ದಾಖಲಿಸಿ ಬಂಧಿಸಬೇಕು ಎಂದು ಶಿವಾನಂದ ಮೆಂಡನ್ ಆಗ್ರಹಿಸಿದ್ದಾರೆ.
ವಿ.ಹೆಚ್.ಪಿ ಜಿಲ್ಲಾ ಕಾರ್ಯದರ್ಶಿ ಶಿವಾನಂ ಮೆಂಡನ್, ಭುಜಂಗ ಕುಲಾಲ್, ಮನೋಹರ ಸುವರ್ಣ, ಸಂದೀಪ್ ಸರಿಪಲ್ಲ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.