ಫೆ 2 ರಂದು ಪುತ್ತೂರಿನಲ್ಲಿ ರಾಜ್ಯ ಮಟ್ಟದ ಯುವಜನಮೇಳ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಯುವಜನಮೇಳವು ಫೆಬ್ರವರಿಯಲ್ಲಿ 3 ದಿನಗಳ ಕಾಲ ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ನಡೆಯಲಿರುವುದು ಎಂದು ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಅವರು ಇಂದು ಜಿಲ್ಲಾಧಿಕಾರಿ ಕೋರ್ಟ್ಹಾಲ್ನಲ್ಲಿ ನಡೆದ ಯುವಜನ ಮೇಳದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ಮೇಳದ ಆಯೋಜನೆಯನ್ನು ಮಾಡುತ್ತಿದ್ದು ಇದರಲ್ಲಿ 30 ಜಿಲ್ಲೆಗಳ ಸುಮಾರು 5000 ಯುವಜನತೆಯ ಭಾಗವಹಿಸುವಿಕೆಯನ್ನು ನಿರೀಕ್ಷಿಸಲಾಗಿದ್ದು ಕಾರ್ಯಕ್ರಮದ ಆಯೋಜನೆಗೆ ವಿವಿಧ ಸಮಿತಿಯನ್ನು ರಚಿಸಿ ಅಧಿಕಾರಿಯನ್ನು ನೇಮಿಸಲು ಸೂಚನೆ ನೀಡಿದರು
ಬೇರೆ ಜಿಲ್ಲೆಗಳಿಂದ ಆಗಮಿಸುವ ಸ್ಪರ್ಧಿಗಳಿಗೆ ವಸತಿ ವ್ಯವಸ್ಥೆಯ ಜೊತೆಗೆ ಊಟೋಪಚಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕೆಂದು ಅವರು ಸೂಚಿಸಿದರು. ಹಾಗೂ ಈ ಯುವಜನ ಮೇಳಕ್ಕೆ ಸರ್ಕಾರದಿಂದ 40 ಲಕ್ಷ ಅನುದಾನವನ್ನು ಹಾಗೂ ಯುವಜನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ 5 ಲಕ್ಷದ ಅನುದಾನವನ್ನು ನೀಡುತ್ತದೆ ಎಂದರು.
ಜಿಲ್ಲೆಯಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಯುವಜನಮೇಳವು ನಡೆಯಿತ್ತಿರುವುದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜ್, ಸರ್ಕಾರಿ ಪದವಿ ಪೂರ್ವ ಕಾಲೇಜ್, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ವಿವೇಕಾನಂದ ಪದವಿ ಪೂರ್ವ ಕಾಲೇಜ್, ಸ್ವಾಮಿ ಕಲಾ ಮಂದಿರ ಪುತ್ತುರು, ಹಾಗೂ ಒಕ್ಕಲಿಗ ಸಮುದಾಯ ಭವನ ಇಲ್ಲಿ ವಸತಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಇದರ ಜೊತೆಗೆ ಅನೇಕ ಸರ್ಕಾರೇತರ ಸಂಸ್ಥೆಗಳು ನಿರ್ವಹಣೆಯ ಜವಾಬ್ಧಾರಿಯನ್ನು ವಹಿಸಿಕೊಂಡಿದೆ.
ಸಭೆಯಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜಾ, ಕ್ರೀಡಾಧಿಕಾರಿ ಲಿಲ್ಲಿ ಪಾೈಸ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೈ ಶಿವರಾಮಯ್ಯ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.