ಫೆ.6 ಜಿಲ್ಲಾ ಕಾಂಗ್ರೆಸ್‍ನಿಂದ ಪೌರತ್ವ ಸಂರಕ್ಷಣಾ ಕಾರ್ಯಾಗಾರ
ಕೇಂದ್ರ ಸರಕಾರದ ಸಂವಿಧಾನ ವಿರೋಧಿ ಪೌರತ್ವ ಕಾಯ್ದೆಗಳ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಾಹಿತಿ ನೀಡುವ ನಿಟ್ಟಿನಲ್ಲಿ ಸಂವಿಧಾನ ಬದ್ಧವಾದ ಪೌರತ್ವ ಸಂರಕ್ಷಣಾ ಕಾರ್ಯಾಗಾರ ಒಂದನ್ನು ಇದೇ ಬರುವ ಫೆಬ್ರವರಿ 6 ನೇ ತಾರೀಕಿನಂದು ಕುಲಶೇಖರ ಕೋರ್ಡೆಲ್ ಚರ್ಚ್ ಹಾಲ್‍ನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್‍ರವರು ಹೇಳಿದರು.
ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಇಂದು ಏರ್ಪಡಿಸಲಾದ ವಿಶೇಷ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ದೇಶದಾದ್ಯಂತ ಮೋದಿ ಸರಕಾರದ ಪೌರತ್ವ ಕಾಯ್ದೆಯ ವಿರುದ್ಧ ಪ್ರತಿಭಟನೆಗಳು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು ಜನರು ಈ ಕಾಯ್ದೆಯಿಂದಾಗಿ ಆತಂಕಕ್ಕೀಡಾಗಿದ್ದಾರೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿದ್ದು, ನಾಗರಿಕರಿಗೆ ಗ್ರಾಮ ಮಟ್ಟದಲ್ಲಿ ಈ ಕಾಯ್ದೆಯ ದುಷ್ಪರಿಣಾಮವನ್ನು ಪ್ರಚುರಪಡಿಸುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಭಾಪತಿ ಬಿ.ಎಲ್ ಶಂಕರ್, ಸಾಮಾಜಿಕ ಹೋರಾಟಗಾರ್ತಿ ಭವ್ಯ ನರಸಿಂಹಮೂರ್ತಿ ಇವರುಗಳು ಮಾಹಿತಿ ನೀಡಲಿದ್ದು, ಸಾವಿರಕ್ಕೂ ಮಿಕ್ಕಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರುಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ವೇದಿಕೆಯಲ್ಲಿ ಮಾಜಿ ಶಾಸರುಗಳಾದ ಶ್ರೀಮತಿ ಶಕುಂತಲಾ ಶೆಟ್ಟಿ, ಜೆ.ಆರ್ ಲೋಬೋ, ಕಾಂಗ್ರೆಸ್ ಮುಖಂಡರುಗಳಾದ ಇಬ್ರಾಹಿಂ ಕೋಡಿಜಾಲ್, ಶಶಿಧರ್ ಹೆಗ್ಡೆ, ಮಹಮ್ಮದ್ ಮೋನು, ಕವಿತಾ ಸನಿಲ್, ಶಾಲೆಟ್ ಪಿಂಟೋ, ಸದಾಶಿವ ಉಳ್ಳಾಲ್, ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಮುಂಚೂಣಿ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಮ.ನ.ಪಾ ಸದಸ್ಯರುಗಳು, ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಸದಸ್ಯರುಗಳು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.