ಕರಾವಳಿಯ ಮೂಲಗೇಣಿದಾರರಿಗೆ ಮಾಹಿತಿ ಕಾರ್ಯಕ್ರಮ
ಉಡುಪಿ: ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆ ಮಂಗಳೂರು ಹಾಗೂ ಉಡುಪಿ ಇವರ ಆಶ್ರಯದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ ಏಳು ತಾಲೂಕುಗಳಲ್ಲಿರುವ ಸುಮಾರು ಒಂದು ಲಕ್ಷದಷ್ಟು ಮೂಲಗೇಣಿದಾರರಿಗೆ ಸರಕಾರ ಹಾಗೂ ನ್ಯಾಯಾಂಗ ಪ್ರಕ್ರಿಯೆಯಲ್ಲಿ ನಡೆದ ಬೆಳವಣಿಗೆ ಕುರಿತು ವಿಶೇಷ ಮಾಹಿತಿ ನೀಡಲು ಇದೇ ಫೆ.9ರಂದು ಉಡುಪಿಯಲ್ಲಿ ವಿಶೇಷ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ಎಂ.ಕೆ.ಯಶೋಧರ ತಿಳಿಸಿದ್ದಾರೆ.
ಉಡುಪಿಯ ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಕರಾವಳಿಯಲ್ಲಿ ಮಾತ್ರ ಕಂಡುಬರುವ ಮೂಲಗೇಣಿ ಸಮಸ್ಯೆಯ ಕುರಿತು ಇತ್ತೀಚಿನ ಬೆಳವಣಿಗೆ ಕುರಿತು ಎಲ್ಲರಿಗೂ ಮಾಹಿತಿ ನೀಡುವುದು ಹಾಗೂ ವೇದಿಕೆಯ ಸದಸ್ಯರ ಸಂಖ್ಯೆಯನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ ಎಂದರು.
ಈ ಮಾಹಿತಿ ಸಭೆಯು ಫೆ.9ರ ಬೆಳಗ್ಗೆ 10ಕ್ಕೆ ಸರಿಯಾಗಿ ಉಡುಪಿ ನಾರ್ತ್ ಶಾಲೆಯ ಆವರಣದಲ್ಲಿರುವ ಬಳಕೆದಾರರ ವೇದಿಕೆಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಯಶೋಧರ ತಿಳಿಸಿದರು.
ಕರಾವಳಿಯ ಮೂಲಗೇಣಿದಾರರ ಸಮಸ್ಯೆಯ ಕುರಿತು ವಿವರಿಸಿದ ಜಿಲ್ಲೆಯ ಸಕ್ರಿಯ ಕಾರ್ಯಕರ್ತ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಇದು ದೇಶದಲ್ಲಾಗಲೀ, ರಾಜ್ಯದ ಉಳಿದೆಡೆಗಳಲ್ಲಾಗಲೀ ಕಂಡುಬರದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಾದ ವಿಶಿಷ್ಟ ಭೂಸಮಸ್ಯೆ ಎಂದರು.
ಸಮಸ್ಯೆಯ ಆಳವನ್ನು ವಿವರಿಸಿದ ಅವರು ಮಂಗಳೂರು ಮತ್ತು ಉಡುಪಿ ಜಿಲ್ಲೆಗಳು ಹಿಂದಿನ ಮದರಾಸು ಪ್ರಾಂತ್ಯಕ್ಕೊಳ ಪಡುವುದಕ್ಕಿಂತ ಮೊದಲೇ ವಿಜಯನಗರ ಸಾಮ್ರಾಜ್ಯದ ಆಡಳಿತದ ಅವಧಿಯಿಂದಲೂ ವ್ಯವಸಾಯ ಭೂಮಿಯ ಅನು ಭೋಗಸ್ಥರು ಸರಕಾರಕ್ಕೆ ಭೂಕಂದಾಯ ತೆರುತಿದ್ದ ಪದ್ಧತಿ ಜಾರಿಯಲ್ಲಿತ್ತು ಎಂದು ವಿವರಿಸಿದರು.
ಇದರಲ್ಲಿ ಎರಡು ವಿಧಗಳಿದ್ದು ಮೂಲಗೇಣಿ ಹಾಗೂ ಚಾಲಗೇಣಿ ಪದ್ಧತಿ, ಕರ್ನಾಟಕದಲ್ಲಿ ಭೂಸುಧಾರಣಾ ಕಾಯ್ದೆ ಜಾರಿಯಾಗುವಾಗ ಮೂಲಗೇಣಿದಾರರ ಬಗ್ಗೆ ಯಾವುದೇ ನಿಶ್ಚಿತ ಬದಲಾವಣೆ ಮಾಡದೇ ಇರುವುದರಿಂದ ಈ ಸಮಸ್ಯೆ ಉದ್ಭವಿಸಿದೆ. ಈಗ ಕೆಲವು ಮಧ್ಯವರ್ತಿಗಳು ಮೂಲಿದಾರರಿಂದ ಮೂಲಿ ಹಕ್ಕನ್ನು ಕ್ರಯಕ್ಕೆ ಪಡೆದು ನೂರಾರು ವರ್ಷ ಗಳಿಂದ ಅನುಭವಿಸಿಕೊಂಡು ಬರುತಿದ್ದ ಮೂಲಗೇಣಿ ಒಕ್ಕಲುಗಳಿಗೆ ಜಾಗ ಬಿಡುವಂತೆ ಒತ್ತಡ ಹೇರುತ್ತಿರುವುದು ಸಮಸ್ಯೆಯಾಗಿದೆ ಎಂದರು.
ಹಿಂದೆಲ್ಲಾ ಮೂಲಗೇಣಿದಾರರು, ಮೂಲಿದಾರರಿಗೆ ಸಂದಾಯಿಸಬೇಕಾದ ಗೇಣಿ ಅತಿ ಅಲ್ಪ. ಹೆಚ್ಚಿನ ಮೂಲಗೇಣಿ ಒಕ್ಕಲು ಗಳಿಗೆ ತಮ್ಮ ಆಸ್ತಿಯ ಮೂಲಿದಾರರು ಯಾರೆಂಬುದೇ ತಿಳಿಯುತ್ತಿರಲಿಲ್ಲ. ಈ ಪದ್ಧತಿಯನ್ನು ನಿರ್ಮೂಲನೆಯ ನಿಟ್ಟಿನಲ್ಲಿ ದಿ.ಡಾ.ವಿ.ಎಸ್.ಆಚಾರ್ಯ ಗೃಹ ಸಚಿವರಾಗಿದ್ದಾಗ ಮೂಲಿದಾರರಿಗೆ 500ವರ್ಷದ ಹಾಗೂ ಒಂದು ಸಾವಿರ ವರ್ಷದ ಗೇಣಿಯನ್ನು ಪರಿಹಾರ ರೂಪದಲ್ಲಿ ನೀಡುವ ವಿಧೇಯಕವೊಂದನ್ನು ರಚಿಸಿ 2011ರಲ್ಲಿ ಕಾನೂನಾಗಿ 2012ರಲ್ಲಿ ಜಾರಿಗೆ ಬರುವಂತೆ ಗಜೆಟ್ ನೋಟಿಫಿಕೇಷನ್ ಹೊರಡಿಸಲಾಗಿತ್ತು.
ಆದರೆ ಕೆಲವು ಸ್ಥಾಪಿತ ಹಿತಾಸಕ್ತಿಯ ಮೂಲಿದಾರರು ತಮಗೆ ನೀಡುವ ಪರಿಹಾರ ಅತ್ಯಲ್ಪ ಎಂದು ಹೈಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದಿದ್ದರು. ಅದರಲ್ಲೂ ನ್ಯಾಯಾಲಯ ಒಕ್ಕಲುಗಳ, ಸರಕಾರದ ಪರವಾಗಿ ತೀರ್ಪು ನೀಡಿತ್ತು. ಈ ತೀರ್ಪನ್ನು ಸಹ ಮೂಲಿದಾರರು ಪ್ರಶ್ನಿಸಿದ್ದರಿಂದ ಇದೀಗ ನ್ಯಾಯಾಲಯದ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಸುರೇಂದ್ರನಾಥ ಶೆಟ್ಟಿ ತಿಳಿಸಿದರು.
ಹೀಗಾಗಿ ಈ ಕುರಿತು ಮೂಲಗೇಣಿದಾರರಿಗೆ ಸಂಪೂರ್ಣ ಮಾಹಿತಿ ನೀಡಲು ಫೆ.9ರ ಸಭೆಯನ್ನು ಕರೆಯಲಾಗಿದೆ. ಮುಂದಿನ ಹೋರಾಟದ ರೂಪುರೇಷೆಗಳನ್ನು ಇಲ್ಲಿ ಚರ್ಚಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಕಾರ್ಯದರ್ಶಿ ಸಂದೇಶ ಪ್ರಭು, ಖಜಾಂಚಿ ಶಂಕರ್ ಪ್ರಭು, ಉಡುಪಿ ಜಿಲ್ಲಾ ಪ್ರತಿನಿಧಿ ಎಸ್.ಎಸ್.ಶೇಟ್, ಕಾರ್ಯಕಾರಿ ಸದಸ್ಯ ರೊನಾಲ್ಡ್ ಡಿಸಿಲ್ವ ಉಪಸ್ಥಿತರಿದ್ದರು.