ಫೇಸ್ ಬುಕ್ಕಿನಲ್ಲಿ ಸದ್ದು ಮಾಡುತ್ತಿರುವ ಕುಂದಗನ್ನಡದ ಕೆ.ಟಿ. ರೇಡಿಯೋಗೆ 100ರ ಸಂಚಿಕೆ ಸಂಭ್ರಮ
ಉಡುಪಿ: ಹಿಂದೆ ರೇಡಿಯೋ ಜನರಿಗೆ ಪ್ರಮುಖ ಸಂಪರ್ಕ ಮಾಧ್ಯಮವಾಗಿತ್ತು. ಪ್ರತಿ ಮನೆಯಲ್ಲಿ ಬೆಳಿಗ್ಗೆ ಎದ್ದು ಕೂಡಲೇ ರೇಡಿಯೋ ಯಾವಾಗ ಕಾರ್ಯಕ್ರಮ ಆರಂಭಿಸುತ್ತದೆ ಎಂದು ಕಾಯುತ್ತಿದ್ದರು. ಆ ಕಾಲದಲ್ಲಿ ರೇಡಿಯೋ ಅಷ್ಟೊಂದು ಜನರ ಮನದಲ್ಲಿ ಬೇರೂರಿದ್ದವು. ಆದರೆ ಆಧುನಿಕತೆ ಬೆಳೆದಂತೆ ಎಫ್.ಎಂ. ಮಾದರಿಯ ರೇಡಿಯೋಗಳು ಜನರಿಗೆ ಹತ್ತಿರವಾಗತೊಡಗಿತು. ಜತೆಗೆ ಹೆಚ್ಚು ಹೆಚ್ಚು ಮನೋರಂಜನೆ ನೀಡಲು ಪ್ರಾರಂಭಿಸಿತು. ಈ ಹಿನ್ನೆಯಲ್ಲಿ ರೇಡಿಯೋ ನಿಧನವಾಗಿ ಜನರಿಂದ ದೂರವಾಗಿತೊಡಗಿತು.
ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್‍ನಲ್ಲಿ ಕುಂದಗನ್ನಡದ ವಿಶೇಷತೆಯನ್ನು ಒಳಗೊಂಡ ಕೆ.ಟಿ.ರೇಡಿಯೋ ಎನ್ನವ ರೇಡಿಯೋ ಜನರಿಗೆ ಮನೋರಂಜನೆ ನೀಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕುಂದಗನ್ನಡದ ಮೊದಲ ಎಫ್.ಎಂ. ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.100ನೇ ಸಂಚಿಕೆಯನ್ನು ಯಶಸ್ವೀಯಾಗಿ ಪೂರೈಸಿ ಮುನ್ನೆಡೆಯುತ್ತಿದೆ.
ಕೆ.ಟಿ. ರೆಡಿಯೋ-ಬರೀ ರೆಡಿಯೋ ಅಲ್ಲ,ಕುಂದಾಪುರದ ಆಸ್ತಿ
ಪೇಸ್ಬುಕ್‍ನಲ್ಲಿ ಹಲವಾರು ಪ್ರಾದೇಶಿಕ ಗುಂಪುಗಳಿದೆ.ಅದೇ ರೀತಿ ಬೆಂಗಳೂರಿನಲ್ಲಿ ನೆಲೆಸಿರುವ ಕುಂದಾಪುರ ಭಾಗದ 7 ಮಂದಿ ಗೆಳೆಯರು ಜತೆಯಾಗಿ ಕುಂದಾಪುರ ಟ್ರೋಲ್ಸ್ ಎಂಬ ಗುಂಪನ್ನು ತೆರೆದು ಕುಂದಗನ್ನಡದ ವಿಶೇಷತೆಗಳನ್ನು ಸಾರುವ ಕೆಲಸ ಮಾಡುತ್ತಿದ್ದಾರೆ. ಜತೆಗೆ ಇನ್ನು ಒಂದು ಹೆಜ್ಜೆ ಮುಂದೆ ಸಾಗಿ ಕುಂದಾಪುರ ಕನ್ನಡದ ಕೆ.ಟಿ.ರೇಡಿಯೋ ಎನ್ನುವ ಚಾನೆಲ್‍ವೊಂದನ್ನು ತೆರೆದಿದ್ದಾರೆ. ಇದರ ಮೂಲಕ ಕುಂದಾಪುರ ಕನ್ನಡಕ್ಕೆ ಸಂಬಂಧಿಸಿದ ವಿಚಾರದ ಕುರಿತು ಕುಂದಾಪುರ ಕನ್ನಡದಲ್ಲಿ ದಿನದ ಒಂದು ಗಂಟೆ ಕಾರ್ಯಕ್ರಮ ಪ್ರಸಾರ ಮಾಡುತ್ತಾರೆ. ನೀವು ಫೇಸ್ಬುಕ್‍ನಲ್ಲಿ ಕುಂದಾಪುರ ಟ್ರೋಲ್ ಎನ್ನುವ ಗ್ರೂಫ್ ತೆರೆದರೆ ಈ ರೇಡಿಯೋ ಕೇಳಬಹುದು.ನೀವು ಗ್ರೂಫ್‍ನ್ನು ಲೈಕ್ ಮಾಡಿ, ಸಬ್‍ಕ್ರೈಬ್ ಮಾಡಿದರೆ ಕಾರ್ಯಕ್ರಮ ಆರಂಭಕ್ಕೆ ಮುನ್ನ ನಿಮಗೆ ಸಂದೇಶ ಬರುತ್ತದೆ.
ಹೆಚ್ಚಿದ ಜನಪ್ರಿಯತೆ
ಕೆ.ಟಿ.ರೇಡಿಯೋ ಇದೀಗ ಬಾರಿ ಜನಪ್ರಿಯತೆಗೊಂಡಿದೆ.ಪ್ರತಿದಿನ ಸಂಜೆ 7.30ರಿಂದ 8.30ರ ವರೆಗೆ ಕಾರ್ಯಕ್ರಮ ನೀಡುತ್ತಿದೆ. ಆರ್.ಜೆ. ಕರ್ಣ ಎನ್ನುವ ಜಾಕಿ ಯಾವುದೇ ಎಫ್.ಎಂ. ಚಾನೆಲ್‍ಗಳ ಜಾಕಿಗಳಿಗೆ ಕಡಿಮೆ ಇಲ್ಲದಂತೆ ಇದರಲ್ಲಿ ಕಾರ್ಯಕ್ರಮ ನಿರೂಪಿಸುತ್ತಾರೆ. ಜತೆಗೆ ಆರ್.ಜೆ. ಮೈನಾ ಎನ್ನುವಾಕೆ ಕಥಿ ಹೈಲ್ ಆಯ್ತ್ ಎನ್ನುವ ಕಾರ್ಯಕ್ರಮದ ಮೂಲಕ ಜನರ ಕಾಳೆಲೆಯುತ್ತಾಳೆ. ಕಾರ್ಯಕ್ರಮದ ನಡುವೆ ಕೇಳುಗರು ಕಮೆಂಟ್ ಮೂಲಕ ಸಂಭಾಷಣೆ ನಡೆಸಬಹುದಾಗಿದೆ. ಚಾನೆಲ್‍ನ ಧ್ವನಿ ಹಾಗೂ ನಿರೂಪಣೆ ಅತ್ಯಂತ ಸ್ಪಷ್ಟವಾಗಿದ್ದು, ಸಾವಿರಾರು ಮಂದಿಯನ್ನು ಕೆ.ಟಿ. ರೇಡಿಯೋ ಇದೀಗ ತಲುಪಿದೆ.ಪ್ರತಿದಿನ 45 ರಿಂದ 50 ಮಂದಿ 1ಗಂಟೆ ಬಿಡುವು ಮಾಡಿಕೊಂಡು ಕೆ.ಟಿ.ರೇಡಿಯೋ ಕೇಳುತ್ತಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಕುಂದಗನ್ನಡಿಗರು ದೊಡ್ಡ ಸಂಖ್ಯೆಯಲ್ಲಿ ಕೆ.ಟಿ.ರೇಡಿಯೋ ಅಭಿಮಾನಗಳಾಗಿದ್ದಾರೆ. ಇಲ್ಲಿ ಕೆಲಸ ಮಾಡುವ ಯುವಕರಿಗೆ ಯಾವುದೇ ಪ್ರಚಾರದ ಗೀಳಿಲ್ಲ. ಹೀಗಾಗಿ ತಮ್ಮ ಹೆಸರನ್ನು ಬೇರೆ-ಬೇರೆ ರೀತಿಯಲ್ಲಿ ಬದಲಾಯಿಸಿಕೊಂಡು ಪರಿಚಯಿಸಿಕೊಳ್ಳುತ್ತಾರೆ.ಈ ರೇಡಿಯೋವನ್ನು ಎಫ್.ಎಂ.ಗೆ ಸರಿಸಮನವಾಗಿ ಬೆಳೆಸುವ ಹಾಗೂ ಪ್ರಸಾರ ಅವಧಿಯನ್ನು ಹೆಚ್ಚಿಸುವ ಕನಸು ತಂಡಕ್ಕಿದೆ.
ಮನೋರಂಜನೆಯ ಉದ್ದೇಶಕ್ಕೆ ಹುಟ್ಟಿಕೊಂಡ ಕೆ.ಟಿ. ರೇಡಿಯೋ ಇದೀಗ ಕುಂದಾಪುರ ಭಾಗದ ವಿಶೇಷತೆಗಳು ಹಾಗೂ ಸಾಧಕರನ್ನು ಪರಿಚಯಿಸುವಲ್ಲಿ ಕುಂದಗನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಯಶಸ್ವಿಯಾಗುತ್ತಿದೆ.
ಕೆ.ಟಿ.ರೇಡಿಯೋ ವಾರದ ವಿಶೇಷ
ಸೋಮವಾರದಿಂದ ಗುರುವಾರದ ತನಕ ಪ್ರತಿದಿನದ ಬೆಳವಣಿಗೆ ವಿಶೇಷವನ್ನು ಜನರಿಗೆ ತಿಳಿಯಪಡಿಸಿದರೆ,ಪ್ರತಿ ಶುಕ್ರವಾರ ಕಥಾಸಂಗಮದ ಮೂಲಕ ನೀತಿಕಥೆಗಳನ್ನು ಜನರಿಗೆ ತಿಳಿಸುತ್ತಿದ್ದಾರೆ.ಪ್ರತಿ ಶನಿವಾರ ಮಹಾಭಾರತದೊಳಗಿನ ಮಹಾಪ್ರಯಾಣದ ಮೂಲಕ ಮಹಾಭಾರತದ ಕಥೆಯನ್ನು ಜನರಿಗೆ ತಿಳಿಸುತ್ತಿದ್ದಾರೆ.
ಬೆಳ್ಳಿತೆರೆಯ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸಂಗೀತ ನಿರ್ದೇಶಿಸಿದ ಎಲ್ಲಾ ಕುಂದಗನ್ನಡದ ಹಾಡು ಕೆ.ಟಿ. ರೇಡಿಯೋ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಕೆ.ಟಿ. ರೇಡಿಯೋ ಮಾಡುತ್ತಿದೆ.ಜತೆಗೆ ರವಿ ಬಸ್ರೂರು ಅವರ ಪ್ರತಿಭಾನ್ವೇಷಣೆ-2ರಲ್ಲಿ ಮೂಡಿ ಬಂದ ಎಲ್ಲಾ ಕುಂದಗನ್ನಡದ ಹಾಡು ಕೆ.ಟಿ. ರೇಡಿಯೋನಲ್ಲಿ ಪ್ರಸಾರಮಾಡಲಾಗುತ್ತಿದೆ.
ನಮ್ಮ ಪ್ರಾದೇಶಿಕ ಭಾಷೆಯಾದ ಕುಂದಗನ್ನಡದ ವಿಶೇಷತೆಗಳನ್ನು ಜನರಿಗೆಪರಿಚಯಿಸುವುದರ ಜತೆಗೆ ನಮ್ಮ ಕಲೆ, ಸಂಸ್ಕøತಿ, ಹಬ್ಬ, ಸಾಧಕರನ್ನು ಯುವಪೀಳಿಗೆಗೆ ನೆನಪಿಸಬೇಕು ಎನ್ನುವ ಉದ್ದೇಶದಿಂದ ಕುಂದಾಪುರ ಭಾಗದ ಏಳು ಮಂದಿ ಸ್ನೇಹಿತರು ಜತೆಯಾಗಿ ಕುಂದಾಪುರ ಟ್ರೋಲ್ಸ್ ಎಂಬ ಗ್ರೂಫ್‍ವೊಂದನ್ನು ತೆರೆದು ಅದರಲ್ಲಿ ಕೆ.ಟಿ.ರೇಡಿಯೋ ಆರಂಭಿಸಿದ್ದೇವೆ. ಇದಕ್ಕೆ ನಮ್ಮ ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸು ಆರಂಭದಲ್ಲಿ ಸಿಕ್ಕಿದೆ. ಮುಂದೆ ಎಲ್ಲರ ಸಹಕಾರ ಸಿಕ್ಕಲ್ಲಿ ಫೇಸ್ಬುಕ್ ಮೂಲಕ ಎಫ್.ಎಂ.ಗೆ ಸರಿಸಮನಾಗಿ ಇದನ್ನು ಬೆಳೆಸಬೇಕು ಎನ್ನುವ ಆಸೆ ಇದೆ.ಕೆ.ಟಿ.ರೇಡಿಯೋ ಇದೀಗ 100ನೇ ಸಂಚಿಕೆಯನ್ನು ಯಶಸ್ವೀಯಾಗಿ ಪೂರೈಸಿಕೊಂಡಿದೆ.ಕೆ.ಟಿ. ರೆಡಿಯೋ-ಬರೀ ರೆಡಿಯೋ ಅಲ್ಲ, ಕುಂದಾಪುರದ ಆಸ್ತಿ ಎನ್ನುತ್ತಾರೆ ಕೆ.ಟಿ. ರೇಡಿಯೋ ಜಾಕಿ ಆರ್. ಜೆ. ಕರ್ಣ.