ಫೇಸ್ ಬುಕ್ ನಲ್ಲಿ ಕೊರಗಜ್ಜ ಭಕ್ತರಿಂದ ದೇಣಿಗೆ ಸಂಗ್ರಹ; ಕುತ್ತಾರು ಆಡಳಿತ ಮಂಡಳಿಯಿಂದ ದೂರು ದಾಖಲು
ಕುತ್ತಾರು ಶ್ರೀ ಕೊರಗಜ್ಜ ದೈವದ ಆದಿ ಸ್ಥಳಗಳ ಆಡಳಿತ ಮಂಡಳಿಯ ಸುಪರ್ದಿಯಲ್ಲಿ ನಡೆಯುವಂತಹ ಎಲ್ಲ ಕಾರ್ಯಕ್ರಮಗಳು ಭಕ್ತಾದಿಗಳ ಸಮ್ಮುಖದಲ್ಲಿ ಕ್ರಮಬದ್ಧವಾಗಿ ನಡೆಯುತ್ತಿದ್ದು ಇದರ ವಿರುದ್ಧ “ಡಿವೋಟಿಸ್ ಆಫ್ ಕುತ್ತಾರು ಕೊರಗಜ್ಜ” ಎಂಬ ಶಿರೋನಾಮೆಯಲ್ಲಿ ಖಾತೆ ತೆರೆದು ಸಾರ್ವಜನಿಕರಿಂದ ದೇಣಿಗೆಯನ್ನು ಸಂಗ್ರಹಿಸುತ್ತಿರುವ ಕುರಿತು ಈ ಸಂಸ್ಥೆಯ ವಿರುದ್ಧ ದೂರು ದಾಖಲಿಸಲಾಗಿದೆ.
ಕುತ್ತಾರು ಆದಿಸ್ಥಳದ ಕೊರಗಜ್ಜನ ಆಡಳಿತ ಮಂಡಳಿಯು ಯಾವುದೇ ಉದ್ದೇಶಕ್ಕಾಗಿ ಆನ್ ಲೈನ್ ಮುಖಾಂತರ ಸಾರ್ವಜನಿಕರಿಂದ ದೇಣಿಗೆಯನ್ನು ಸಂಗ್ರಹಿಸುವುದಿಲ್ಲ. ಕೊರಗಜ್ಜ ದೈವದ ಮೇಲೆ ಸಾರ್ವಜನಿಕರಿಗೆ ಇರುವ ಭಕ್ತಿಯನ್ನೇ ಪ್ರಧಾನವಾಗಿರಿಸಿಕೊಂಡು “ಡಿವೋಟಿಸ್ ಆಫ್ ಕುತ್ತಾರು ಕೊರಗಜ್ಜ” ಎಂಬ ಫೇಸ್ಬುಕ್ ಖಾತೆಯಲ್ಲಿ ಸಾರ್ವಜನಿಕರಿಂದ ದೇಣಿಗೆಯನ್ನು ಸಂಗ್ರಹಿಸಿ ಸಾರ್ವಜನಿಕರಿಗೆ ತಪ್ಪು ಮಾಹಿತಿಯನ್ನು ನೀಡುತ್ತಿರುವುದು ಬಹಳ ವಿಷಾದನೀಯ ಸಂಗತಿ.
ಶ್ರೀ ಕ್ಷೇತ್ರದಲ್ಲಿ ಯಾವುದೇ ಆನ್ಲೈನ್ ಸೇವೆಯಾಗಲಿ ಆನ್ಲೈನ್ ಮುಖಾಂತರ ದೇಣಿಗಿಯಾಗಲಿ ಸಂಗ್ರಹಿಸುವುದಿಲ್ಲ. ಶ್ರೀ ಕ್ಷೇತ್ರದಲ್ಲಿ ಆಡಳಿತ ಮಂಡಳಿಯ ಶಿರೋನಾಮೆಯ ಅಡಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ರೀತಿಯಾದಂತಹ ಪ್ರಕಟನೆಗಳು ಬಂದಲ್ಲಿ ಇಂತಹ ಮನವಿಗೆ ಸ್ಪಂದಿಸಬಾರದಾಗಿ ಭಕ್ತರಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ. ತಪ್ಪು ಮಾಹಿತಿ ನೀಡಿ ಸಾರ್ವಜನಿಕರ ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿರುವುದರಿಂದ ಶ್ರೀ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ಉಂಟು ಮಾಡಿದಂತಾಗಿದೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಶ್ರೀ ಕ್ಷೇತ್ರದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುವುದು ಕೂಡ ಕಾನೂನು ಬಾಹಿರವಾಗಿರುತ್ತದೆ. ಶ್ರೀ ಕ್ಷೇತ್ರದಲ್ಲಿ ನಡೆಯುವಂತಹ ಎಲ್ಲ ರೀತಿಯ ಸೇವೆಗೆ ಭಕ್ತರಿಗೆ ಆಡಳಿತ ಮಂಡಳಿಯಿಂದ ಕಡ್ಡಾಯವಾಗಿ ರಶೀದಿಯನ್ನು ನೀಡಲಾಗುತ್ತಿದೆ. ಆದುದರಿಂದ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಸುಳ್ಳು ಮಾಹಿತಿಯನ್ನು ಸಾರ್ವಜನಿಕರು ಹಾಗೂ ಭಕ್ತರು ನಂಬಬಾರದಾಗಿ ಕ್ಷೇತ್ರ ಆಡಳಿತ ಮಂಡಳಿ ವಿನಂತಿಸಿದೆ.