ಫೋಮ್ ಶೀಟ್ ನಲ್ಲಿ ಮೂಡಿ ಬಂತು ‘ಐರಾವತ, ವೇಗದೂತ!
- ಇದು ಹೆಮ್ಮಾಡಿಯ ಪ್ರಶಾಂತ್ ಆಚಾರ್ ಕೈಚಳಕ
- ಕಲಾತ್ಮಕ ವಸ್ತುಗಳನ್ನು ರೆಡಿ ಮಾಡೋದ್ರಲ್ಲಿ ನಿಪುಣ ಪ್ರಶಾಂತ್ ಆಚಾರ್
- ಪ್ರಶಾಂತ್ ಆಚಾರ್ ಕಲ್ಪನೆಯಲ್ಲಿ ಸಿದ್ದಗೊಳ್ಳುತ್ತಿದೆ ಹೈಟೆಕ್ ಸರಕಾರಿ ಬಸ್ ನಿಲ್ದಾಣ.
- ಸಾರಿಗೆ ಸಚಿವರಿಗಾಗಿ ತಯಾರಾಗುತ್ತಿದೆ ಸೋಲಾರ್ ಚಾಲಿತ ಮಲ್ಟಿ ಸ್ಪೆಶಾಲಿಟಿ ಬಸ್!
ಕುಂದಾಪುರ: ಕಳೆದೊಂದು ವಾರದಿಂದ ಹೆಮ್ಮಾಡಿ ಭಾಗದಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ಐರಾವತ ಹಾಗೂ ವೇಗದೂತ ಬಸ್ ಭಾರೀ ಸುದ್ದಿಯಲ್ಲಿದೆ. ಈ ಎರಡೂ ಬಸ್ಗಳು ಕೂಡ ಹೆಮ್ಮಾಡಿಯಲ್ಲಿ ಸಂಚಾರ ಆರಂಭಿಸಿವೆ. ಬಸ್ ಸಂಚಾರದಿಂದ ಖುಷಿಪಟ್ಟ ಈ ಭಾಗದ ಜನರು ಬಸ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅರೇ.. ಇದೇನಪ್ಪಾ.. ಗ್ರಾಮೀಣ ಭಾಗದಲ್ಲಿ ಅದೂ ಕೂಡ ಐರಾವತ ಸಂಚಾರ ಎಂದು ಆಶ್ಚರ್ಯಪಡುತ್ತಿದ್ದೀರಾ? ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.
ಟಯರ್, ಸ್ಟೇರಿಂಗ್, ಗೇರ್, ಹೆಡ್ಲೈಟ್, ಲಾಕ್ಗಳುಳ್ಳ ಬಾಗಿಲು, ಕಿಟಕಿ, ತುರ್ತು ನಿರ್ಗಮನ ಕಿಟಕಿ, ಮಿರರ್ ಸೇರಿದಂತೆ ಎಲ್ಲವೂ ಇವೆ. ಆದರೆ ಈ ಬಸ್ನಲ್ಲಿ ಪ್ರಯಾಣಿಸುವುದು ಮಾತ್ರ ಅಸಾಧ್ಯ. ಯಾಕೆಂದರೆ ಇದು ಸಣ್ಣ ಗಾತ್ರದ ಆಟಿಕೆಯ ಬಸ್. ಕೇವಲ ಫೋಮ್ ಶೀಟ್ ಅನ್ನು ಬಳಸಿ ಥೇಟು ಕರ್ನಾಟಕ ಸಾರಿಗೆ ಸಂಸ್ಥೆಯ ಐರಾವತ ಹಾಗೂ ವೇಗದೂತ ವಿನ್ಯಾಸದಲ್ಲಿ ತದ್ರೂಪಿ ಬಸ್ ನಿರ್ಮಿಸಿದ ಯುವಕನ ಹೆಸರೇ ಪ್ರಶಾಂತ್ ಆಚಾರ್. ಹೆಮ್ಮಾಡಿ ಸಮೀಪದ ಡೈರಿ ಸರ್ಕಲ್ನಲ್ಲಿ ಅಣ್ಣ ನಾಗರಾಜ್ ಅವರೊಂದಿಗೆ ಓಂಕಾರ್ ಶೀಟ್ ಮೆಟಲ್ ವಕ್ರ್ಸ್ ಶಾಪ್ನಲ್ಲಿ ಕೆಲಸ ನಿರ್ವಹಿಸುತ್ತಿರುವ ಈ ಪ್ರಶಾಂತ್ ಆಚಾರ್ ಕಲಾತ್ಮಕ ವಸ್ತುಗಳನ್ನು ತಯಾರಿಸುವುದರಲ್ಲಿ ನಿಸ್ಸೀಮರು.
ಪ್ರಶಾಂತ್ ಆಚಾರ್ ತಯಾರಿಸಿದ ಎರಡೂ ಬಸ್ಗಳನ್ನು ಜೊತೆಗಿಟ್ಟು ಫೋಟೋ ತೆಗೆದರೆ ಯಾರೂ ಕೂಡ ಅದು ಆಟಿಕೆಯ ಬಸ್ಸೆಂದು ಹೇಳಲಾರರು. ಅಷ್ಟರಮಟ್ಟಿಗೆ ಪರ್ಫೆಕ್ಟ್ ಆಗಿ ಎರಡೂ ಬಸ್ಗಳನ್ನು ತಯಾರಿಸಿದ್ದಾರೆ. ಬಸ್ನ ಪ್ರತಿಯೊಂದು ಭಾಗಗಳನ್ನು ಭಾರೀ ನಾಜೂಕು ಹಾಗೂ ತಾಳ್ಮೆಯಿಂದ ತಯಾರಿಸಿ ಆ ಭಾಗಗಗಳು ಎಲ್ಲಿ ಎಂದು ಯಾರೂ ಕೂಡ ಪ್ರಶ್ನಿಸದಷ್ಟು ಪರಿಪೂರ್ಣವಾಗಿ ಬಸ್ ತಯಾರಿಸಿ ಸರ್ವರ ಮನಗೆದ್ದಿದ್ದಾರೆ ಪ್ರಶಾಂತ್ ಆಚಾರ್. ಬಹುಬೇಡಿಕೆಯ ಕಲಾವಿದರಾಗಿರುವ ಪ್ರಶಾಂತ್ ಆಚಾರ್ಗೆ ಸಾಕಷ್ಟು ಬೇಡಿಕೆ ಇದೆ. ಇವರ ಕೈಯ್ಯಲ್ಲೆ ಕೆಲಸಗಳನ್ನು ಮಾಡಿಸಬೇಕೆಂಬ ಇವರ ಅಭಿಮಾನಿ ಬಳಗವೂ ಬಹುದೊಡ್ಡದು. ಹೀಗಾಗಿಯೇ ಒಂದಿನಿತು ಬಿಡುವಿಲ್ಲದೆ ಒತ್ತಡದಲ್ಲೇ ಕೆಲಸ ನಿರ್ವಹಿಸುವ ಪ್ರಶಾಂತ್ಗೆ ಬಿಡುವು ಸಿಕ್ಕಿದ್ದು ಮಾತ್ರ ಲಾಕ್ಡೌನ್ ಅವಧಿಯಲ್ಲಿ. ಲಾಕ್ಡೌನ್ ಅವಧಿಯಲ್ಲಿ ಮನೆಯಲ್ಲೇ ಇರುತ್ತಿದ್ದ ಪ್ರಶಾಂತ್ಗೆ ಹೊಸತರ ಐಡಿಯಾ ಹೊಳೆದಾಗ ರೂಪುಗೊಂಡಿದ್ದು ಈ ಬಸ್ಗಳು. ಫೋಮ್ ಶೀಟ್ ತಂದು ಅದರಲ್ಲಿ ಬಸ್ನ ಬಾಡಿ ವಿನ್ಯಾಸ ತಯಾರಿಸಿ ತಮ್ಮ ಇನ್ನೋರ್ವ ಸಹೋದರ ಓಂಕಾರ್ ಕಾರ್ ಗ್ಯಾರೇಜ್ನ ಪ್ರಕಾಶ್ ಆಚಾರ್ ಅವರ ಗ್ಯಾರೇಜ್ನಲ್ಲಿ ಬಸ್ಗೆ ಪೇಟಿಂಗ್ ಮಾಡಿ ಥೇಟು ಐರಾವತ ಬಸ್ನಂತೆ ತಯಾರಿಸಿದ್ದಾರೆ. ಪ್ರಶಾಂತ್ ಆಚಾರ್ ಈ ಸಾಹಸದಲ್ಲಿ ಅವರ ಈರ್ವರೂ ಸಹೋದರರು ಬೆನ್ನೆಲುಬಾಗಿ ತಮ್ಮನ ಕಲೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಪ್ರಶಾಂತ್ ಆಚಾರ್ ಅವರ ಮೊದಲ ಪ್ರಯತ್ನವಾದ ಐರಾವತ ಬಸ್ ಹೊರಗಿನ “ಮಗುವಿನಂತೆ ನಿದ್ರಿಸಿ” ಚಿತ್ರ ಹಾಗೂ ಚಾಲಕ – ನಿರ್ವಾಹಕರ ಸೀಟು, ಹೆಡ್ಲೈಟ್, ಇಂಡಿಕೇಟರ್, ಎಮರ್ಜೆನ್ಸಿ ಎಕ್ಸಿಟ್ ಎಲ್ಲವನ್ನೂ ಭಾರೀ ಅಂದವಾಗಿ ತೋರಿಸಿದ್ದಾರೆ. ಕಿಟಕಿಗೆ ಪರದೆ ಹಾಕಿದ್ದರಿಂದಾಗಿ ಬಸ್ ಒಳಗಿನ ಚಿತ್ರಣ ಅಷ್ಟೇನು ತೋರಿಸಲು ಸಾಧ್ಯವಾಗಿಲ್ಲ. ಆದರೆ ಇವರ ಎರಡನೇ ಪ್ರಯತ್ನ ವೇಗದೂತ ಬಸ್ಗೆ ನೋಡುಗರು ಫುಲ್ ಫಿದಾ ಆಗಿದ್ದಾರೆ. ಬಸ್ ಒಳಗೆ ಅತೀ ಕಡಿಮೆ ಜಾಗದಲ್ಲಿ ಏನೆಲ್ಲಾ ತೋರಿಸಬೇಕೊ ಎಲ್ಲವನ್ನೂ ಪ್ರಶಾಂತ್ ತುಂಬಾ ನಾಜೂಕಾಗಿ ತೋರಿಸಿದ್ದಾರೆ. ಬಸ್ಸಿನ ಬಣ್ಣ, ಫೂಟ್ ಬೋರ್ಡ್, ಗಾಜಿನ ಕಿಟಕಿ, ಒಳಗಿನ ಹಳದಿ ಬಣ್ಣದ ಕಂಬ, ಕಿಟಕಿಗೆ ಅಡ್ಡಲಾಕಿ ಬರುವ ಕಬ್ಬಿಣದ ರಾಡ್, ಮಾರ್ಗಸೂಚಿ ಫಲಕ, ಚಾಲಕ ಹಾಗೂ ಪ್ರಯಾಣಿಕರ ಸೀಟು, ಲಾಕ್ಗಳುಳ್ಳ ಬಾಗಿಲು ಎಲ್ಲವೂ ಒಂದಕ್ಕಿಂತ ಇನ್ನೊಂದು ವಿಭಿನ್ನವಾಗಿ ತೋರಿಸಿಕೊಟ್ಟಿದ್ದಾರೆ. ಇನ್ನು ಬಸ್ನೊಳಗೆ ಲೈಟ್, ಹೆಡ್ಲೈಟ್, ಬ್ರೇಕ್ ಲೈಟ್ ಎಲ್ಲವೂ ಇದ್ದು ರಾತ್ರಿಯ ಹೊತ್ತು ಈ ಎಲ್ಲಾ ವ್ಯವಸ್ಥೆಗಳು ಇನ್ನಷ್ಟು ಅಂದವನ್ನು ಹೆಚ್ಚಿಸುತ್ತಿದೆ. ಒಂದು ಬಸ್ ತಯಾರಿಕೆಗೆ ಬರೋಬ್ಬರಿ ಎಂಟು ಸಾವಿರದಿಂದ ಹತ್ತು ಸಾವಿರದ ತನಕವೂ ತಗಲುತ್ತಿದೆ. ಪ್ರಶಾಂತ್ಗೆ ಮೊದಲಿಂದಲೂ ಸರ್ಕಾರಿ ಬಸ್ ಮೇಲೆ ತುಂಬಾ ಅಭಿಮಾನ. ಇದೇ ಕಾರಣಕ್ಕಾಗಿ ಅವರು ಸರ್ಕಾರಿ ಬಸ್ಗಳನ್ನು ತಯಾರಿಸುತ್ತಿದ್ದಾರೆ. ಮೊದಲ ಐರಾವತ ಹಾಗೂ ಎರಡನೇಯ ವೇಗದೂತದ ಬಳಿಕ ಇದೀಗ ಇನ್ನೆರಡು ಬಸ್ಗಳನ್ನು ಯಾರಿಸಲು ಮುಂದಾಗಿದ್ದಾರೆ. ಇದಕ್ಕಾಗಿಯೇ ಇದೀಗ ದಿನಕ್ಕೆ ಸ್ವಲ್ಪ ಹೊತ್ತು ಬಿಡುವು ಮಾಡಿಕೊಳ್ಳುತ್ತಿರುವ ಪ್ರಶಾಂತ್ ಆಚಾರ್ ವಾಯುವ್ಯ ಕರ್ನಾಟಕ ಸಾರಿಗೆ ಹಾಗೂ ಈಶಾನ್ಯ ಕರ್ನಾಟಕ ಸಾರಿಗೆ ಈ ಎರಡು ಮಾದರಿಯ ಬಸ್ಗಳನ್ನು ತಯಾರಿಸುವ ತಯಾರಿಯಲ್ಲಿ ನಿರತರಾಗಿದ್ದಾರೆ. ಈ ಎಲ್ಲಾ ಬಸ್ಗಳನ್ನು ಸಂಗ್ರಹಿಸಿ ತಮ್ಮ ಕನಸಿನ ಕುಂದಾಪುರದ ಹೈಟೆಕ್ ಸರ್ಕಾರಿ ಬಸ್ ನಿಲ್ದಾಣವನ್ನು ರಚಿಸುವ ತಯಾರಿಯಲ್ಲಿದ್ದು, ಇನ್ನೊಂದು ವರ್ಷದೊಳಗೆ ತಮ್ಮ ಕನಸಿನ ಕುಂದಾಪುರ ಬಸ್ ನಿಲ್ದಾಣವನ್ನು ತಮ್ಮದೇ ಕಲ್ಪನೆಯಲ್ಲಿ ತೋರಿಸಲಿದ್ದಾರೆ.
ಇನ್ನು ಪ್ರಶಾಂತ್ ಆಚಾರ್ ರಾಜ್ಯ ಸಾರಿಗೆ ಸಚಿವರಿಗಾಗಿಯೇ ವಿಶೇಷ ಬಸ್ವೊಂದನ್ನು ತಯಾರಿಸುತ್ತಿದ್ದಾರೆ. ಬಸ್ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸಿ ಚಲನೆಯೊಂದನ್ನು ಬಿಟ್ಟು ಉಳಿದೆಲ್ಲಾ ಲೈಟ್ ವ್ಯವಸ್ಥೆಗಳು ಸೋಲಾರ್ನಿಂದಲೇ ಉರಿಯುವಂತೆ ಮಾಡು ಯೋಚನೆ ಇದೆಯಂತೆ. ಈ ಬಸ್ ತಯಾರಿಕೆ ಈಗಾಗಲೇ ಆರಂಭಗೊಂಡಿದೆ. ಸಾರಿಗೆ ಸಚಿವರು ಸಮಯ ನೀಡಿದರೆ ಅವರನ್ನೇ ನೇರವಾಗಿ ಭೇಟಿಯಾಗಿ ಆ ಬಸ್ ಅನ್ನು ಉಡುಗೊರೆಯಾಗಿ ಕೊಡಲು ಪ್ರಶಾಂತ್ ಆಚಾರ್ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಪ್ರಶಾಂತ್ಗೆ ಮೊದಲ ‘ಐರಾವತ’ ಪ್ರಯತ್ನ ಯಶ ಸಿಕ್ಕಿದ್ದರಿಂದಾಗಿ ಇನ್ನೊಂದು ‘ವೇಗದೂತ’ ಬಸ್ ತಯಾರಿಸಲು ಧೈರ್ಯ ಇವರಿಗೆ ಧೈರ್ಯ ಬಂದಿದೆ. ಒಂದೊಂದು ಬಸ್ ತಯಾರಿಸಿದಾಗಲೂ ವಿಭಿನ್ನ ಹೊಸ ಹೊಸ ಆಲೋಚನೆಗಳು ಪ್ರಶಾಂತ್ ತಲೇ ಏರಿದ್ದರಿಂದ ವೇಗದೂತ ಇನ್ನಷ್ಟು ಅಂದವಾಗಿ ಬರಲು ಸಾಧ್ಯವಾಗಿದೆ. ಈಗಾಗಲೇ ಪ್ರಶಾಂತ್ ತಯಾರಿಸಿದ ಬಸ್ ಅನ್ನು ಸಾಕಷ್ಟು ಮಂದಿ ಹಣ ಕೊಟ್ಟು ಖರೀದಿಸಲು ಮುಂದೆ ಬಂದಿದ್ದಾರೆ. ಪ್ರಶಾಂತ್ ಆಚಾರ್ ಅವರ ಈ ವಿಭಿನ್ನ ಕಲೆಗೆ ನಾವೆಲ್ಲರೂ ಸೆಲ್ಯೂಟ್ ಹೇಳಲೇಬೇಕಿದೆ.