ಬಂಜಾರ ಸಮುದಾಯದ ಮಹಿಳೆಯನ್ನು ಅವಮಾನಿಸಿದ ಪ್ರಮೋದ್ ಮಧ್ವರಾಜರನ್ನು ಕೂಡಲೇ ಬಂಧಿಸಿ – ಗಿರೀಶ್ ಡಿ ಆರ್
ಉಡುಪಿ: ಮಲ್ಪೆಯಲ್ಲಿ ನಡೆದ ಮೀನುಗಾರಿಕಾ ಸಂಘದ ಸಭೆಯಲ್ಲಿ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು “ತಪ್ಪು ಮಾಡಿದ ಮಹಿಳೆಯನ್ನು ಹೊಡೆದರೆ ತಪ್ಪೇನು?ಆಕೆಯನ್ನು ಮರಕ್ಕೆ ಕಟ್ಟಿ ಹಾಕಿದ್ದು ಸರಿ, ಕಟ್ಟಿ ಹಾಕಲೇಬೇಕು” ಎಂದು ಕೃತ್ಯವನ್ನು ಸಮರ್ಥನೆ ಮಾಡಿ ಮಹಿಳೆಯನ್ನು ನಿಂದಿಸುವ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಸದರಿ ಹೇಳಿಕೆಗೆ ಸಂಬಂಧಿಸಿದಂತೆ ಪ್ರಮೋದ್ ಮಧ್ವರಾಜ್ ಅವರು ಕೂಡಲೇ ಕ್ಷಮೆಯಾಚಿಸಬೇಕು ಮತ್ತು ಅವರನ್ನು ಕೂಡಲೇ ಬಂಧಿಸುವಂತೆ ಕರ್ನಾಟಕ ಬಂಜಾರ ಯುವಕ & ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಿರೀಶ್ ಡಿ ಆರ್ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆ ಪಾರಂಪರಿಕವಾಗಿ ಮೀನುಗಾರಿಕೆಗೆ ಹೆಸರುವಾಸಿಯಾಗಿದೆ. ಉಡುಪಿ ಬಳಿ ಇರುವ ಮಲ್ಪೆ ರಾಜ್ಯದ ಅತಿ ದೊಡ್ಡ ಮೀನುಗಾರಿಕಾ ಕೇಂದ್ರ ಎಂಬ ಹೆಗ್ಗಳಿಕೆಯನ್ನು ಪಡೆದಿರುವುದು ಅತ್ಯಂತ ಗಮನಾರ್ಹ. ಮೀನುಗಾರಿಕೆಯ ಜೊತೆಗೆ ಧರ್ಮಶ್ರದ್ಧೆ ವ್ಯಾಪಕವಾಗಿರುವ ಸುಸಂಸ್ಕೃತ ನಾಡು ಎಂದು ಖ್ಯಾತಿಯನ್ನು ಪಡೆದಿದೆ.
ರಾಜ್ಯದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಪರಿಶಿಷ್ಟ ವರ್ಗದ ವಲಸಿಗರು ತುಳುನಾಡಿಗೆ ಜೀವನೋಪಾಯಕ್ಕಾಗಿ ಹಾಗೂ ಹೊಟ್ಟೆಪಾಡಿಗಾಗಿ ಸುಮಾರು ವರ್ಷಗಳಿಂದ ಉದ್ಯೋಗವನ್ನು ಅರಸಿ ಬಂದಿರುವುದು ವಾಡಿಕೆಯಾಗಿದೆ.
ಮಾರ್ಚ್ 18 ರಂದು ಪರಿಶಿಷ್ಟ ಜಾತಿಯ ಬಂಜಾರ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಮೀನು ಕದ್ದ ಆರೋಪದ ಮೇರೆಗೆ ಸಾರ್ವಜನಿಕವಾಗಿ ಮರಕ್ಕೆ ಕಟ್ಟಿ ಥಳಿಸಿ, ಹೀನಮಾನವಾಗಿ ನಿಂದಿಸಿದ ಕೃತ್ಯ ಸಮಸ್ತ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದ್ದು, ಸದರಿ ಕೃತ್ಯಕ್ಕೆ ನಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿದ್ದೇವೆ
ವಿಜಯನಗರ ಜಿಲ್ಲೆ ಹೂವಿನಹಡಗಲಿ ಮೂಲದ ಪರಿಶಿಷ್ಟ ಜಾತಿಯ ಬಂಜಾರ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಮೀನು ಕದ್ದ ಆರೋಪದಡಿಯಲ್ಲಿ ಸಾರ್ವಜನಿಕವಾಗಿ ಮರಕ್ಕೆ ಕಟ್ಟಿ ಹಾಕಿ ಥಳಿಸಿ, ಜಾತಿನಿಂದನೆ ಮಾಡಿದ ಪ್ರಕರಣದಲ್ಲಿ ಪೊಲೀಸರು ಇವರಿಗೆ ಐದು ಜನರಿಗೆ ಮಾತ್ರ ಬಂಧಿಸಿದ್ದು, ಇನ್ನು ಸಾಕಷ್ಟು ಜನರು ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ಪೋಲಿಸ್ ಇಲಾಖೆ ಮತ್ತೊಮ್ಮೆ ಪಾರದರ್ಶಕ ತನಿಖೆ ಮಾಡಿ ಕೃತ್ಯದಲ್ಲಿ ಭಾಗಿಯಾದವರನ್ನು ಕೂಡಲೆ ಬಂಧಿಸಿ ಕಾನೂನು ಶಿಕ್ಷೆ ವಿಧಿಸಬೇಕು.
ಪ್ರಕರಣದ ಸತ್ಯಾಸತ್ಯತೆಯ ವಿಡಿಯೋ ರಾಜ್ಯದಲ್ಲೆಡೆ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಉಡುಪಿಯ ಮಾಜಿ ಶಾಸಕರಾದ ರಘುಪತಿ ಭಟ್ ಅವರು ಕೃತ್ಯಕ್ಕೆ ಸಂಬಂಧಿಸಿದಂತೆ ಮಾತನಾಡಿ ‘ಈ ಪ್ರಕರಣದಲ್ಲಿ ಪರಿಶಿಷ್ಟ ಜಾತಿ ನಿಂದನೆ ಕೇಸ್ ‘ ಅನ್ವಯವಾಗುವುದಿಲ್ಲ ಎಂದು ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದು,ಅವರ ಹೇಳಿಕೆ ಕಾನೂನು ವಿರೋಧಿಯಾಗಿದ್ದು, ಕೂಡಲೇ ಬೇಷರತ್ ಕ್ಷಮೆಯಾಚಿಸಬೇಕು.
ಸಾರ್ವಜನಿಕವಾಗಿ ಥಳಿತ, ನಿಂದನೆ ಹಾಗು ಅಪಮಾನಕ್ಕೆ ಒಳಗಾದ ಸಂತ್ರಸ್ತ ಮಹಿಳೆಗೆ ‘ಪರಿಶಿಷ್ಟ ಜಾತಿ ಹಾಗೂ ಪಂಗಡ ದೌರ್ಜನ್ಯ ತಡೆ ಕಾಯ್ದೆ 1989″ ಅಡಿ ನೀಡಲಾಗುವ ಪರಿಹಾರವನ್ನು ಕೂಡಲೇ ಒದಗಿಸಬೇಕು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯ ವಿರುದ್ಧವಾಗಿ ರಾಜಕೀಯ ಪ್ರೇರಿತವಾಗಿ ಮನಸೋ ಇಚ್ಛೆ ಹೇಳಿಕೆ ನೀಡುವರ ವಿರುದ್ಧ ಪೋಲಿಸ್ ಇಲಾಖೆ ಸುಮೋಟೋ ಕೇಸ್ ದಾಖಲಿಸಬೇಕು.
ಪ್ರಕರಣದ ತೀವ್ರತೆಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತ ಕೃತ್ಯ ನಡೆದ ಸ್ಥಳದಲ್ಲಿ ಕೂಡಲೇ “ಶಾಂತಿ ಸಭೆ” ಆಯೋಜಿಸಿ ಎಲ್ಲರ ಮಧ್ಯೆ ಸೌಹಾರ್ದತೆಯನ್ನು ತರುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು.
ನಾಗರೀಕ ಸಮುದಾಯ ತಲೆತಗ್ಗಿಸುವನಂತಹ ಅಮಾನವೀಯ ಕೃತ್ಯಗಳು ಜರುಗದಂತೆ ಪೊಲೀಸ್ ಇಲಾಖೆ ಕ್ರಮ ವಹಿಸಬೇಕು ಹಾಗೂ ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿರುವ ಹೊರ ಊರಿನ ಪರಿಶಿಷ್ಟರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಮುಖಂಡರಾದ ಪುಷ್ಪ ಬಾಯಿ, ಮಂಜುನಾಯ್ಕ, ಮಂಜುನಾಥ, ಸುನೀಲ್ ನಾಯ್ಕ ಉಪಸ್ಥಿತರಿದ್ದರು.