ಬಂಟರದ್ದು ಸಹನೆ, ತಾಳ್ಮೆ, ಧೈರ್ಯದ ವ್ಯಕ್ತಿತ್ವ – ಗೃಹ ಸಚಿವ ಡಾ. ಜಿ ಪರಮೇಶ್ವರ್
ಉಡುಪಿ: ನಾವು ವೇಗವಾಗಿ ಬೆಳೆಯಬೇಕಾಗಿದೆ. ಆ ವೇಗವನ್ನು ಪ್ರತಿಯೊಂದು ಕ್ಷೇತ್ರದಲ್ಲಿ ಕೆಲಸ ಮಾಡುವ ಬಂಟರಿಂದ ಮಾತ್ರ ತಲುಪಲು ಸಾಧ್ಯ. ಆಡು ಮುಟ್ಟದ ಸೊಪ್ಪಿಲ್ಲ, ಬಂಟರು ಮುಟ್ಟದ ಕ್ಷೇತ್ರ ಇಲ್ಲ. ಕೈಗಾರಿಕೆ, ಬ್ಯಾಂಕ್, ಕಲಾವಿದರು, ಚಿತ್ರನಟರು, ರಾಜಕೀಯ, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಸಹನಶೀಲತೆ, ತಾಳ್ಮೆ, ಧೈರ್ಯದ ವ್ಯಕ್ತಿತ್ವ ಬಂಟರದ್ದು. ಆರ್ಥಿಕ ವ್ಯವಸ್ಥೆಗೆ ದೊಡ್ಡ ಕಾಣಿಕೆ ನೀಡಿದ್ದಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾದ ವಿಶ್ವ ಬಂಟರ ಸಮ್ಮೇಳನದ ಪ್ರಯುಕ್ತ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದ ತೆರೆದ ಮೈದಾನದಲ್ಲಿ ರವಿವಾರ ಹಮ್ಮಿಕೊಳ್ಳಲಾದ ವಿಶ್ವ ಬಂಟರ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು- ಮಂಗಳೂರು ಮಧ್ಯೆ ಕಾರಿಡಾರ್ ನಿರ್ಮಿಸಬೇಕಾಗಿರುವುದು ಇಂದಿನ ಅಗತ್ಯ ವಾಗಿದೆ. ಈ ಕಾರ್ಯ ನಡೆಯುವ ವಿಶ್ವಾಸ ನನಗೆ ಇದೆ. ಈ ಯೋಜನೆ ಕಾರ್ಯಗತವಾದರೆ ಮಂಗಳೂರಿನಿಂದ ಬೆಂಗಳೂರಿಗೆ ಕೇವಲ ಮೂರುವರೆ ಗಂಟೆಯಲ್ಲಿ ತಲುಪ ಬಹುದು. ಮಂಗಳೂರಿನಲ್ಲಿ ಚಿನ್ನ ಸಂಸ್ಕರಣಾ (ಸೋಕ್) ಘಟಕವನ್ನು ಸ್ಥಾಪಿಸಲು ಅವಕಾಶ ಇದ್ದು, ಉದ್ಯಮಿಗಳು ಮುಂದೆ ಬಂದರೆ ಸರಕಾರ ಅದಕ್ಕೆ ಬೇಕಾದ ಜಾಗ ನೀಡಲಿದೆ. ಬಂಡವಾಳ ಹಾಕಿ ಸರಕಾರದ ಸಹಕಾರ ಬಳಸಿ ಕೊಂಡು ಚಿನ್ನ ಸಂಸ್ಕರಣಾ ಘಟಕವನ್ನು ಪ್ರಾರಂಭಿಸಬಹುದಾಗಿದೆ ಎಂದರು.
ಬಂಟರ ಅಭಿವೃದ್ಧಿ ನಿಗಮವನ್ನು ಮುಂದಿನ ಬಜೆಟ್ನಲ್ಲಿ ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿ ದ್ದಾರೆ. ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ. ಪ್ರಣಾಳಿಕೆಯಲ್ಲಿ ಹೇಳಿದ ಎಲ್ಲ ಭರವಸೆಗಳನ್ನು ಕೂಡ ಮುಂದಿನ ಐದು ವರ್ಷಗಳಲ್ಲಿ ಸಂಪೂರ್ಣವಾಗಿ ಅನುಷ್ಠಾನ ಮಾಡುತ್ತೇವೆ ಎಂದು ಅವರು ಹೇಳಿದರು.
ಮಾಜಿ ಸಚಿವ ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮುಂಬೈ ಹೇರಂಭ ಇಂಡಸ್ಟ್ರೀಸ್ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ, ಮುಂಬೈ ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಸಿಎಂಡಿ ತೋನ್ಸೆ ಆನಂದ ಎಂ.ಶೆಟ್ಟಿ, ಎಂಆರ್ಜಿ ಗ್ರೂಪ್ನ ಸಿಎಂಡಿ ಕೆ.ಪ್ರಕಾಶ್ ಶೆಟ್ಟಿ, ಮುಂಬೈಯ ಟ್ಸಾಕ್ಸ್ ಕನ್ಸಲ್ಟೆಂಟ್ಸ್ ಪ್ರವೀಣ್ ಭೋಜ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥನ್ ರೈ, ಚಲನಚಿತ್ರ ನಟ ರಿಷಬ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ಕಲಾವಿದ ಪಟ್ಲ ಸತೀಶ್ ಶೆಟ್ಟಿ, ಉದ್ಯಮಿಗಳಾದ ರಾಜೇಶ್ ಶೆಟ್ಟಿ, ಮುನಿಯಾಲ್ ಉದಯ ಕುಮಾರ್ ಶೆಟ್ಟಿ, ಧನರಾಜ್ ಶೆಟ್ಟಿ, ಸಂತೋಷ್ ಶೆಟ್ಟಿ ಪೂನಾ, ಪುರುಷೋತ್ತಮ ಶೆಟ್ಟಿ, ಎ.ಸದಾನಂದ ಶೆಟ್ಟಿ, ರವೀಂದ್ರನಾಥ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ರೈ ವಹಿಸಿದ್ದರು. ಇದೇ ಸಂದರ್ಭದಲ್ಲಿ ದಾನಿಗಳನ್ನು ಸನ್ಮಾನಿಸಲಾ ಯಿತು. ಒಕ್ಕೂಟದ ಪ್ರಧಾನ ಕಾರ್ಯ ದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಅಶೋಕ್ ಪಕ್ಕಳ ಕಾರ್ಯ ಕ್ರಮ ನಿರೂಪಿಸಿದರು.