ಬಂಟರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯಿಂದ ಪ್ರತಿಭಾ ಪುರಸ್ಕಾರ
ಮಂಗಳೂರು: ಐಪಿಎಸ್, ಐಎಎಸ್‍ನಂತಹ ಕೋರ್ಸ್‍ಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡರೆ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯವಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‍ಕುಮಾರ್ ರೈ ಮಾಲಾಡಿ ತಿಳಿಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್‍ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಿದ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳು ವಿದ್ಯಾವಂತರಾದರೆ ಸಮಾಜ ಉಳಿಯುತ್ತದೆ. ಇಂದು ವಿದ್ಯೆಯಲ್ಲಿ ಮಕ್ಕಳಿಗೆ ತಮಗೆ ಬೇಕಾದ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ವಿದ್ಯೆಯಿಂದ ಯಾವುದೇ ಮಕ್ಕಳು ವಂಚಿತರಾಗಬಾರದು ಎಂದರು. ಮಕ್ಕಳಿಗೆ ಅಥವಾ ನೆರವು ಯಾಚಿಸಿ ಬರುವ ಕುಟುಂಬಗಳಿಗೆ ಸಂಘ ಸಹಾಯ ನೀಡುತ್ತಾ ಬಂದಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಬಂಟರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ, ಕೋಶಾಧಿಕಾರಿ ರವೀಂದ್ರನಾಥ್ ಎಸ್. ಶೆಟ್ಟಿ, ಜತೆ ಕಾರ್ಯದರ್ಶಿ ಎ. ಹೇಮನಾಥ್ ಶೆಟ್ಟಿ ಉಪಸ್ಥಿತರಿದ್ದರು. ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ಎಸ್. ಜಯರಾಮ ಸಾಂತ ಸ್ವಾಗತಿಸಿದರು. ಸಹ ಸಂಚಾಲಕ ಕೆ. ಉಮೇಶ್ ರೈ ವಂದಿಸಿದರು.