ಬಂಟ್ವಾಳ: ಕೋವಿಡ್ ನಿಯಮ ಉಲ್ಲಂಘಿಸಿ ಮೆಹಂದಿಯಲ್ಲಿ ಪಾರ್ಟಿ, ಡಿಜೆ ಡ್ಯಾನ್ಸ್ – ತಂದೆ ಮಗನ ವಿರುದ್ದ ಪ್ರಕರಣ ದಾಖಲು
ಬಂಟ್ವಾಳ: ಕೋವಿಡ್-19 ಸೋಂಕು ತಡೆಯಲು ಜನರು ಗುಂಪುಗೂಡಬಾರದು, ಮಾಸ್ಕ್ ಧರಿಸಬೇಕು, ಹೆಚ್ಚು ಜನರು ಒಂದೆಡೆ ಸೇರಬಾರದು ಮುಂತಾದ ನಿಯಮಗಳಿದ್ದರೂ, ಅದನ್ನೆಲ್ಲಾ ಗಾಳಿಗೆ ತೂರಿ ಮೆಹಂದಿ ಕಾರ್ಯಕ್ರಮ ನಡೆಸಿ, ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಅಮ್ಮುಂಜೆಯಲ್ಲಿ ನಡೆದಿದ್ದು, ಲಾಕ್ ಡೌನ್ ನಿಯಮ ಉಲ್ಲಂಘನೆ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಇಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದುವೆ ಸಮಾರಂಭದ ನಿಮಿತ್ತ ನಡೆದ ಕಾರ್ಯಕ್ರಮವೊಂದರಲ್ಲಿ ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿ ಗುಂಪು ಸೇರಿಸಿ ಧ್ವನಿ ವರ್ಧಕಗಳನ್ನು ಬಳಸಿ ನೃತ್ಯ ಮಾಡುತ್ತಿರುವುದು ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು ತನಿಖೆ ನಡೆಸಿದ್ದು, ಸದರಿ ಕಾರ್ಯಕ್ರಮವು ದಿನಾಂಕ 01.07.2020ರಂದು ಜುಲೈ 1 ರಂದು ಬಂಟ್ವಾಳ ಅಮ್ಮುಂಜೆ ಗ್ರಾಮದ ಶಿವಪ್ಪ ಪೂಜಾರಿ ಎಂಬವರ ಮನೆಯಲ್ಲಿ ಸದರಿಯವರ ಮಗ ತಿಲಕ್ ರಾಜ್ ಎಂಬಾತನ ಮದುವೆ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮವಾಗಿದ್ದು, ಇಲ್ಲಿ ಲಾಕ್ಡೌನ್ ನಿಯಮಗಳ ಉಲ್ಲಂಘನೆಯಾಗಿರುವುದು ದೃಢಪಟ್ಟಿರುತ್ತದೆ.
ಈ ಹಿನ್ನೆಲೆಯಲ್ಲಿ ಜುಲೈ 5 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ಶಿವಪ್ಪ ಪೂಜಾರಿ ಮತ್ತು ಅವರ ಮಗ ತಿಲಕ್ ರಾಜ್ ಮತ್ತು ಇತರರ ವಿರುದ್ಧ ಪ್ರಕರಣ ಕಲಂ 269,270,ಐಪಿಸಿ ಮತ್ತು ಕಲಂ 5(1) ಕರ್ನಾಟಕ ಎಪಿಡೆಮಿಕ್ ಡಿಸೀಸ್ ಆರ್ಡಿನೆನ್ಸ್ ಕಾಯ್ದೆ 2020 ಯಂತೆ ಪ್ರಕರಣ ದಾಖಲಾಗಿರುತ್ತದೆ..