ಬಂಟ್ವಾಳ: ತಂಡದಿಂದ ಹಲ್ಲೆ ಪರಸ್ಪರ ದೂರು
ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿ ಲೊರೆಟ್ಟೊ ಎಂಬಲ್ಲಿ ತಂಡವೊಂದು ಬಂದು ಕೈ ಮತ್ತು ರಾಡ್ ನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಗಾಯಾಳುವನ್ನು ಸ್ಥಳೀಯ ನಿವಾಸಿ ಚೇತನ್ ಪೂಜಾರಿ ಎಂದು ಗುರುತಿಸಲಾಗಿದ್ದು, ಇವರು ತುಂಬೆ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‘ಸ್ನೇಹಿತ ರಾಕೇಶ ಎಂಬುವರ ಜೊತೆ ಅಂಗಡಿ ಎದುರು ಮಾತನಾಡುತ್ತಿದ್ದ ವೇಳೆ ನಿತಿನ್ ಕುಮಾರ್ ಎಂಬಾತನು ಪುರಸಭಾ ಸದಸ್ಯ ವಾಸು ಪೂಜಾರಿ ಜೊತೆಗೆ ಸೇರಿಕೊಂಡು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾನೆ’ ಎಂದು ಇವರು ಆರೋಪಿಸಿದ್ದಾರೆ.
‘ನಿತಿನ್ ಕುಮಾರ್ ಗುರುವಾರ ರಾತ್ರಿ ಪೆದಮಲೆ ಕಡೆಯಿಂದ ಬಂಟ್ವಾಳ ಕಡೆಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ ಆರೋಪಿ ಚೇತನ್ ಪೂಜಾರಿ ಮತ್ತು ರಾಕೇಶ ಎಂಬವರು ಹಿಂಬಾಲಿಸಿಕೊಂಡು ಬಂದು ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ಪುರಸಭಾ ಸದಸ್ಯ ವಾಸು ಪೂಜಾರಿ ಅವರಿಗೆ ರಾಕೇಶ್ ಗದರಿಸಿದ್ದಾನೆ’ ಎಂದು ಆರೋಪಿಸಲಾಗಿದ್ದು, ಗಾಯಾಳು ನಿತಿನ್ ಕುಮಾರ್ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.