ಬಂಧನ ಭೀತಿ : ಮುಖ್ಯಮಂತ್ರಿ ಪದಕ ಪಡೆಯಬೇಕಿದ್ದ ಇನ್ಸ್‌ಪೆಕ್ಟರ್ ಪರಾರಿ
ಬೆಂಗಳೂರು: ಲೋಕಾಯುಕ್ತ ಬಂಧನ ಭೀತಿಯಿಂದ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆಯಬೇಕಿದ್ದ ಇನ್ಸ್‌ಪೆಕ್ಟರ್‌ವೊಬ್ಬರು ಪರಾರಿಯಾಗಿರುವಂತಹ ಘಟನೆ ನಡೆದಿದೆ.
ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಬೆಂಗಳೂರು ನಗರದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕುಮಾರ್ ಆಯ್ಕೆಯಾಗಿದ್ದರು. ಅವರು ಇಂದು(ಎ.2) ಮುಖ್ಯಮಂತ್ರಿಗಳಿಂದ ಪದಕ ಪಡೆಯಬೇಕಿತ್ತು. ಆದರೆ ಮಂಗಳವಾರ ರಾತ್ರಿಯೇ ಅವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಮನೆ ಮಾರಾಟಕ್ಕೆ ಒತ್ತಡ ಆರೋಪ :
ಗುತ್ತಿಗೆದಾರ ಚನ್ನೇಗೌಡ ಎಂಬವರ ಪತ್ನಿ ಅನುಷಾ ಎಂಬುವವರಿಗೆ ಅನ್ನಪೂರ್ಣೇಶ್ವರಿ ನಗರ ಠಾಣೆ ಇನ್ಸ್‌ಪೆಕ್ಟರ್ ಕುಮಾರ್ನಿಂದ ಕಿರುಕುಳ ಆರೋಪ ಕೇಳಿಬಂದಿದೆ. ಸುಳ್ಳು ಪ್ರಕರಣ ದಾಖಲಿಸಿ ಚನ್ನೇಗೌಡಗೆ ಸೇರಿದ 4 ಕೋಟಿ ರೂ ಮೌಲ್ಯದ ಮನೆ ಮಾರಾಟಕ್ಕೆ ಒತ್ತಡ ಹಾಕಿದ್ದು, ಕಡಿಮೆ ಮೊತ್ತಕ್ಕೆ ನೋಂದಣಿ ಮಾಡಿಕೊಡುವಂತೆ ಇನ್ಸ್‌ಪೆಕ್ಟರ್ ಕುಮಾರ್ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಿನ್ನೆ ಸಂಜೆ ಅಗ್ರಿಮೆಂಟ್ಗೆ ಸಹಿ ಹಾಕಿಸಲು ನಾಗರಬಾವಿಯ ಖಾಸಗಿ ಹೋಟೆಲ್ಗೆ ಚನ್ನೇಗೌಡ ಅವರ ಪತ್ನಿ ಅನುಷಾರನ್ನು ಕರೆಸಿದ್ದರು. ಈ ವೇಳೆ ಲೋಕಾಯುಕ್ತ ದಾಳಿ ವಿಚಾರ ತಿಳಿಯುತ್ತಿದ್ದಂತೆ ಕುಮಾರ್ ಪರಾರಿ ಆಗಿದ್ದಾರೆ. ಆದರೆ, ಇಬ್ಬರು ಕಾನ್ಸ್ಟೇಬಲ್ಗಳು ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.