ಬಂಪರ್ ಕೊಡುಗೆ! 5 ಪ್ಯಾಕ್ ಗಾಂಜಾ ಕೊಂಡರೆ 1 ಉಚಿತ; ಗಾಂಜಾ ಮಾರಾಟ ಮಾಡುತಿದ್ದ ವಿದ್ಯಾರ್ಥಿಗಳ ಬಂಧನ
ಮಂಗಳೂರು: ನಗರದ ಶ್ರೀನಿವಾಸ ಕಾಲೇಜು ಹಾಗೂ ಬಲ್ಮಠದ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುವಾದ ಗಾಂಜಾ ಮಾರಾಟ ಮಾಡುತಿದ್ದವರನ್ನು ದಸ್ತಗಿರಿ ಮಾಡುವಲ್ಲಿ ರೌಡಿ ನಿಗ್ರಹದ ದಳದ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಬಂಧಿತರನ್ನು ಶ್ರೀನಿವಾಸ ಕಾಲೇಜಿನ, 3ನೇ ವರ್ಷದ ಇಂಟೀರಿಯರ್ ಡಿಸಾಯಿನಿಂಗ್ ವಿದ್ಯಾರ್ಥಿಗಳಾದ ಕೇರಳ ರಾಜ್ಯ ಶಹೀನ್ ಕೆ. ಆಯೂಬ್ (21), ಶೆಹನ್ ಬಶೀರ್ (20) ಮತ್ತು ಸಚಿನ್ ಪ್ರದೀಪನ್ (20) ಎಂದು ಗುರುತಿಸಲಾಗಿದೆ.
ಅಕ್ಟೋಬರ್ 23 ರಂದು ಸಂಜೆ ಸಮಯ, ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದ ದಳದ ಸಹಾಯಕ ಪೊಲೀಸ್ ಆಯುಕ್ತರಿಗೆ ಮಂಗಳೂರು ನಗರದ ಬಲ್ಮಠ ಆರ್ಯ ಸಮಾಜ ರಸ್ತೆಯಲ್ಲಿರುವ ಶ್ರೀ ಬೆಲ್ವನ್ ಎಂಬವರ ಕಟ್ಟಡದ 4ನೇ ಮಹಡಿಯಲ್ಲಿ ಬಾಡಿಗೆ ವಾಸವಾಗಿರುವ ಪಾಂಡೇಶ್ವರ ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನಿಷೇಧಿತ ಗಾಂಜಾವನ್ನು ಹೊಂದಿ ವ್ಯಾಪಾರ ವ್ಯವಹಾರ ಮಾಡುತ್ತಿದ್ದಾರೆಂದು ಖಚಿತ ವರ್ತಮಾನ ದೊರೆತಿದ್ದು ಧಾಳಿ ಮಾಡಿ ಸದ್ರಿ ರೂಮಿನಲ್ಲಿ ಮೂವರು ಆರೋಪಿಗಳನ್ನು ತಪಾಸಣೆ ಮಾಡಲಾಗಿ, ಸದ್ರಿ ಕೋಣೆ/ಮನೆಯ ಹಾಲಿನ ಕಪಾಟಿನಲ್ಲಿದ್ದ ಸ್ಕೂಲ್ ಬ್ಯಾಗಿನಲ್ಲಿ ಪ್ಯಾಕೇಟು ಮಾಡಿ ಮಾರಾಟ ಮಾಡಲು ಸಿದ್ದ ಮಾಡಿ ಇಟ್ಟಿದ್ದ 12 ಗಾಂಜಾ ಪ್ಯಾಕೇಟುಗಳು ಮತ್ತು ಬಿಡಿ(ಲೂಸ್) ಒಟ್ಟು 400 ಗ್ರಾಂ ಗಾಂಜಾ ಪತ್ತೆಯಾಗಿರುತ್ತದೆ. ಇದರ ಬೆಲೆ ಸುಮಾರು ರೂ 10,000/-ವಾಗಿದ್ದು, ವಿಚಾರಿಸಿದಾಗ, ಆರೋಪಿಗಳು ಸುಮಾರು 1 ವರ್ಷದಿಂದ ಕೇರಳದಿಂದ ಗಾಂಜಾವನ್ನು ತಂದು, ಪ್ಯಾಕೇಟ್ ಮಾಡಿ, ಅದನ್ನು ಖರೀದಿಸಲು ಬರುವವರಿಗೆ ಮತ್ತು ಶ್ರೀನಿವಾಸ ಕಾಲೇಜಿನ ಬಳೀಯಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವುದಾಗಿಯೂ, ಈಶ್ವರನ್ ಎಂಬವನು ಸದ್ರಿಯವರಿಗೆ ಗಾಂಜಾ ಸಪ್ಲಾಯಿ ಮಾಡುತ್ತಾನೆಂದೂ ತಿಳಿದು ಬಂದಿದ್ದು, ಗಾಂಜಾವನ್ನು, ಹಾಗೂ ಗಾಂಜಾ ಮಾರಾಟ ವ್ಯವಹಾರದಲ್ಲಿ ಉಪಯೋಗಿಸಿದ್ದ ಸದ್ರಿಯವರ ವಶದಲ್ಲಿದ್ದ ಒಟ್ಟು 4 ಮೊಬೈಲ್ ಫೋನ್ ಗಳನ್ನು ಕೂಡಾ ಪಡಿಸಿಕೊಳ್ಳಲಾಗಿರುತ್ತದೆ. ಸ್ವಾಧೀನ ಪಡಿಸಿಕೊಂಡಿರುವ ಸೊತ್ತುಗಳ ಒಟ್ಟು ಬೆಲೆ ರೂ 32.300/- ಆಗಿರುತ್ತದೆ. ಆರೋಪಿಗಳನ್ನು ಮತ್ತು ಸೊತ್ತನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ .
ಸದ್ರಿ ಗಾಂಜಾ ವನ್ನು ಪೊರೈಕೆ ಮಾಡುವ ಈಶ್ವರನು ಈ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಲು ಆಫರ್ ವ್ಯವಸ್ಥೆಯನ್ನು ನೀಡಿರುತ್ತಾನೆ.ತಲಾ 50 ಗ್ರಾಂ ತೂಕದ ಗಾಂಜಾ 5 ಪಾಕೆಟ್ ಖರೀದಿಸಿದರೆ ಒಂದು ಪಾಕೆಟನ್ನು ಉಚಿತವಾಗಿ ನೀಡುವಂತಹ ವ್ಯವಸ್ಥೆಯನ್ನು ಮಾಡಿ ಮಾರಾಟ ಮಾಡಲು ಉತ್ತೇಜನ ನೀಡುತ್ತಿದ್ದನು ಎನ್ನಲಾಗಿದೆ.
ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಟಿ.ಆರ್.ಸುರೇಶ್, ಐ.ಪಿ.ಎಸ್. ರವರ ನಿರ್ದೇಶನದಂತೆ, ಮಾನ್ಯರಾದ ಹನುಮಂತರಾಯ (ಐಪಿಎಸ್) ಡಿ.ಸಿ.ಪಿ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಉಮಾ ಪ್ರಶಾಂತ್, ಡಿ.ಸಿ.ಪಿ (ಅಪರಾಧ ಮತ್ತು ಸಂಚಾರ ವಿಭಾಗ) ರವರ ಮಾರ್ಗದರ್ಶನದಲ್ಲಿ ಮಂಗಳೂರು ರೌಡಿ ನಿಗ್ರಹ ದಳದ ಎ.ಸಿ.ಪಿ. ಕೆ.ರಾಮರಾವ್ ಮತ್ತು ಸಿಬ್ಬಂದಿಯವರು ಪತ್ತೆ ಕಾರ್ಯದಲ್ಲಿ ಬಾಗವಹಿಸಿದ್ದಾರೆ.
Legalize it?