ಬಜೆಟಿನಲ್ಲಿ ಕರಾವಳಿಗೆ ಸಾಕಷ್ಟು ಕೊಡುಗೆ- ಸಚಿವ ಯು.ಟಿ. ಖಾದರ್
ಮಂಗಳೂರು : ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ಮಂಡಿಸಿರುವ ಬಜೆಟ್‍ನಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕಳೆದ ಫೆಬ್ರವರಿಯಲ್ಲಿ ಮಂಡಿಸಿರುವ ಬಜೆಟ್‍ನಲ್ಲಿ ನೀಡಿರುವ ಎಲ್ಲಾ ಯೋಜನೆಗಳು ಮುಂದುವರಿಯಲಿದ್ದು, ಇಂದು ಹೆಚ್ಚುವರಿಯಾಗಿ ಬಜೆಟ್‍ನಲ್ಲಿ ಯೋಜನೆಗಳನ್ನು ಘೋಷಿಸಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದ ಆರ್ಥಿಕ ಶಿಸ್ತು ಕಾಪಾಡಿಕೊಂಡು, ರೈತರ ಸಾಲಮನ್ನಾದಂತಹ ದಿಟ್ಟ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ. ರೈತರ ರೂ. 2 ಲಕ್ಷ ಸಾಲಮನ್ನಾ ಐತಿಹಾಸಿಕವಾಗಿದೆ. ಗರ್ಭಿಣಿ ಮಹಿಳೆಯರಿಗೆ ಮಾಸಿಕ ಧನ ರೂ 1000/- ನೆರವು ನೀಡುವ ಮುಖ್ಯಮಂತ್ರಿ ಮಾತೃಶ್ರೀ ಯೋಜನೆ, ಹಿರಿಯರಿಗೆ ಸಂಧ್ಯಾ ಸುರಕ್ಷಾ ಮಾಸಾಶನವನ್ನು ರೂ. 600 ರಿಂದ ರೂ.1000 ಕ್ಕೆ ಏರಿಕೆ, ವಿಕಲಚೇತನರಿಗೆ ಅರ್ಜಿ ಸಲ್ಲಿಸಿದ ತಕ್ಷಣವೇ ಮನೆ ನಿರ್ಮಾಣ, ಬಡವರಿಗೆ ಕಿಡ್ನಿ, ಲಿವರ್, ಹೃದಯ ಮತ್ತಿತರ ಅಂಗಾಂಗ ಕಸಿ ಚಿಕಿತ್ಸೆಗಳಿಗೆ ರೂ. 30 ಕೋಟಿ ಅನುದಾನ ಮತ್ತಿತರ ಸಾಮಾಜಿಕ ಕಾರ್ಯಕ್ರಮಗಳು ದುರ್ಬಲವರ್ಗದ ಹೇಳಿಗೆಗೆ ಪೂರಕವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಹಳೆ ಮೊಬೈಲ್ ಬಿಡಿ ಘಟಕಗಳ ಸ್ಥಾಪನೆ ಮೂಲಕ ನಿರುದ್ಯೋಗಿಗಳಿಗೆ ಆಶಾಕಿರಣವಾಗಿದೆ. ಸರಕಾರಿ ಶಾಲಾ ಕಟ್ಟಡಗಳ ದುರಸ್ಥಿಗೆ ರೂ. 150 ಕೋಟಿ ಅನುದಾನ, ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬಹುಮಹಡಿ ವಾಹನ ಸಂಕೀರ್ಣ ಮತ್ತಿತರ ಜನೋಪಯೋಗಿ ಯೋಜನೆಗಳು ನಾಡಿನ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.
ಹಿಂದಿನ ಬಜೆಟ್‍ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡಲಾಗಿತ್ತು. ಕರಾವಳಿಯ ಪ್ರವಾಸಿ ಸ್ಥಳಗಳಲ್ಲಿ ಬೋಟ್ ಹೌಸ್, ತೇಲುವ ಉಪಹಾರ ಗೃಹ, ಸುಮಾರು 85 ಕೋಟಿ ರೂ. ವೆಚ್ಚದಲ್ಲಿ ಅತ್ಯುನ್ನತ ಭದ್ರತಾ ವ್ಯವಸ್ಥೆಯ ಕಾರಾಗೃಹ, ಪಶ್ಚಿಮ ವಾಹಿನಿ ಯೋಜನೆಯಲ್ಲಿ ನೇತ್ರಾವತಿ ನದಿಯಲ್ಲಿ ಕುಡಿಯುವ ನೀರು ಹಾಗೂ ನೀರಾವರಿ ಸೌಲಭ್ಯ ಕಲ್ಪಿಸಲು ಮಂಗಳೂರು ತಾಲೂಕಿನ ಹರೇಕಳ ಮತ್ತು ಅಡ್ಯಾರು ಮಧ್ಯೆ ಸುಮಾರು ರೂ. 174 ಕೋಟಿ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಘೋಷಿಸಲಾಗಿತ್ತು. ಈ ಯೋಜನೆಗಳು ಯಥಾರೂಪದಲ್ಲಿಯೇ ಮುಂದುವರಿಯಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಪರಿಶಿಷ್ಟ ವರ್ಗದವರು, ಪರಿಶಿಷ್ಟ ಪಂಗಡದವರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ಹಿಂದಿನ ಬಜೆಟ್‍ನಲ್ಲಿ ನೀಡಲಾದ ಎಲ್ಲಾ ಕಾರ್ಯಕ್ರಮಗಳು ಮುಂದುವರಿಯಲಿವೆ. ಹೆಚ್ಚುವರಿ ಅನುದಾನಕ್ಕೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದ್ದು, ಮುಖ್ಯಮಂತ್ರಿಗಳು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.