ಬಜೆಟಿನಲ್ಲಿ ಕರಾವಳಿ ಭಾಗದ ನಿರ್ಲಕ್ಷ್ಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ದ್ರೋಹ ; ಯಶ್ಪಾಲ್ ಸುವರ್ಣ
ಉಡುಪಿ: ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ಕರ್ನಾಟಕದ ಬಜೆಟ್ ಆಗಿರದೆ ಕೇವಲ ಹಾಸನ ಮಂಡ್ಯ ಮತ್ತು ರಾಮನಗರ ಜಿಲ್ಲೆಗಳ ಬಜೆಟ್ ಆಗಿದೆ. ಹಾಗಾಗಿ ಉಳಿದ ಜಿಲ್ಲೆಗಳಿಗೆ ಕುಮಾರಸ್ವಾಮಿಯವರು ಪ್ರತ್ಯೇಕ ಬಜೆಟ್ ಮಂಡಿಸಬೇಕು ಎಂದು ಮೀನುಗಾರ ಮುಖಂಡ ಯಶ್ಪಾಲ್ ಸುವರ್ಣ ಅವರು ಆಗ್ರಹಿಸಿದ್ದಾರೆ.
ಕುಮಾರಸ್ವಾಮಿ ಮಂಡಿಸಿದ ಬಜೆಟ್ನಲ್ಲಿ ಕರಾವಳಿ ಭಾಗವನ್ನು ಸಂಪೂರ್ಣ ಕೈಬಿಡಲಾಗಿದ್ದು ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅತೀ ದೊಡ್ಡ ದ್ರೋಹವಾಗಿದೆ. ಕಳೆದ ಚುನಾವಣೆಯಲ್ಲಿ ಕರಾವಳಿಯ ಜನರು ಕುಮಾರ ಸ್ವಾಮಿ ಅವರ ಪಕ್ಷಕ್ಕೆ ಠೇವಣಿಯೂ ಸಿಗದಂತೆ ಮಾಡಿದ್ದರು ಇದರ ಸೇಡನ್ನು ಕುಮಾರಸ್ವಾಮಿ ಈಗ ತೀರಿಸುತ್ತಿದ್ದಾರೆ. ಈ ರೀತಿ ಮತದಾರರ ಮೇಲೆ ದ್ವೇಷ ಸಾಧಿಸುವ ಮೂಲಕ ಕುಮಾರ ಸ್ವಾಮಿ ತನ್ನ ಕೀಳು ಮನಸ್ಥಿತಿಯನ್ನು ಪ್ರದರ್ಷಿಸಿದ್ದು ಈ ಬಜೆಟ್ ಜೆಡಿಎಸ್ ಮತ್ತು ಅದರ ಸಂಗಾತಿಯಾಗಿರುವ ಕಾಂಗ್ರಸ್ ಪಕ್ಷಕ್ಕೆ ಕರಾವಳಿಯ ಬಾಗಿಲು ಶಾಶ್ವತವಾಗಿ ಮುಚ್ಚಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರಾವಳಿಯ ಪ್ರಮುಖ ಉದ್ದಿಮೆಯಾಗಿರುವ ಮೀನುಗಾರಿಕೆ ನಷ್ಟದಲ್ಲಿದೆ. ಇದನ್ನೇ ನಂಬಿಕೊಂಡಿರುವ ಸಾವಿರಾರು ಕುಟುಂಬಗಳ ಸಂಕಷ್ಟಕ್ಕೆ ಸ್ಪಂದಿಸ ಬೇಕು ಎಂದು ಇತ್ತೀಚೆಗೆ ಕರಾವಳಿ ಜಿಲ್ಲೆಯ ಶಾಸಕರು ಸೇರಿ ಮುಖ್ಯಮಂತ್ರಿಗೆ ಮನವಿಯನ್ನೂ ನೀಡಿದ್ದೆವು. ರಾಜ್ಯದ ಬೊಕ್ಕಸಕ್ಕೆ ಕರಾವಳಿಗರು ಕೂಡ ತೆರಿಗೆ ಕಟ್ಟುತ್ತಿದ್ದು ನಾವು ಕುಮಾರಸ್ವಾಮಿಯ ಬಳಿ ಬಿಕ್ಷೆ ಎತ್ತಲು ಹೋಗಿದ್ದಲ್ಲ. ನಾವು ನಮ್ಮ ಹಕ್ಕಿನ ಪಾಲನ್ನು ಕೇಳಿದ್ದೆವು. ಆದರೆ ಈ ಮನವಿಯನ್ನು ಕಸದ ಬುಟ್ಟಿಗೆ ಹಾಕಿ ಕೇವಲ ತನ್ನ ಪಕ್ಷದ ಪ್ರಾಬಲ್ಯವಿರುವ ಜಿಲ್ಲೆಗಳಿಗೆ ಮಾತ್ರ ಬಜೆಟ್ನಲ್ಲಿ ಮಣೆ ಹಾಕಿದ್ದಾರೆ. ಕುಮಾರ ಸ್ವಾಮಿ ಇಡೀ ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ಕೇವಲ ಹಾಸನ ರಾಮನಗರ ಮತ್ತು ಮಂಡ್ಯ ಜಿಲ್ಲೆಗಳಿಗೆ ಮಾತ್ರ ಮುಖ್ಯಮಂತ್ರಿಯೋ ಎಂಬ ಸಂಶಯ ನಮ್ಮನ್ನು ಕಾಡುತ್ತಿದೆ.
ರೈತರ ಸಾಲಮನ್ನಾ ಮಾಡಲು ಕುಮಾರ ಸ್ವಾಮಿಯವರು ರಾಜ್ಯದ ಬೊಕ್ಕಸಕ್ಕೆ ಕೈ ಹಾಕುವ ಬದಲು ಮದ್ಯಮ ವರ್ಗದ ಜನರ ಜೇಬಿಗೆ ಕೈ ಹಾಕಿದ್ದಾರೆ. ಪೆಟ್ರೋಲ್ ಮತ್ತು ಡಿಸೇಲ್ಗಳಿಗೆ ಹೆಚ್ಚುವರಿ ತೆರಿಗೆ ವಿಧಿಸಿದ್ದು ಇದು ಕುಮಾರ ಸ್ವಾಮಿ ಸರಕಾರದ ಜನವಿರೋಧಿ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ. ಈ ಹಿಂದೆ ಪೆಟ್ರೋಲ್ ಬೆಲೆ ಹೆಚ್ಚಾಯಿತು ಎಂದು ಮೋದಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದ ಕಾಂಗ್ರೆಸಿಗರು ಈಗ ಯಾಕೆ ಸುಮ್ಮನಿದ್ದಾರೆ ಎಂದು ಅವರು ಯಶ್ಪಾಲ್ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಹಿಂದೆಂದೂ ಕಾಣದ ಪ್ರಾದೇಶಿಕ ಭಿನ್ನಮತವನ್ನು ಕುಮಾರ ಸ್ವಾಮಿ ಹುಟ್ಟಿ ಹಾಕಿದ್ದು, ಒಂದೇ ತಾಯ ಮಕ್ಕಳಂತೆ ಇದ್ದ ಕರ್ನಾಟಕದ ಜನರನ್ನು ಒಡೆದು ಆಳುವ ದೂರ್ತ ಕೆಲಸಕ್ಕೆ ಕುಮಾರಸ್ವಾಮಿ ಮುಂದಾಗಿದ್ದಾರೆ. ಕರಾವಳಿ ,ಮಲೆನಾಡು ಮತ್ತು ಉತ್ತರ ಕನ್ನಡ ಜಿಲ್ಲೆಯ ಜನರು ಮುಂದಿನ ದಿನಗಳಲ್ಲಿ ಈ ಅನ್ಯಾಯಕ್ಕೆ ಸೂಕ್ತ ಉತ್ತರವನ್ನು ನೀಡಲಿದ್ದು ಈ ಪಾಪಕಾರ್ಯದಲ್ಲಿ ಕೈ ಜೋಡಿಸಿದ ಕರ್ಮಕ್ಕೆ ಕಾಂಗ್ರೆಸ್ ಕೂಡ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.