ಬಜೆಟಿನಲ್ಲಿ ಮೀನುಗಾರರ ಕಡೆಗಣನೆಯ ಪ್ರತಿಭಟನೆ ಕೂಗಿಗೆ ಕುಮಾರಸ್ವಾಮಿ ಪ್ರತಿಕ್ರಿಯೆ- ಹೋರಾಟಕ್ಕೆ ಸಂದ ಜಯ- ಯಶ್ಪಾಲ್ ಸುವರ್ಣ
ಉಡುಪಿ: ರಾಜ್ಯದ ನೂತನ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ಮಂಡಿಸಿರುವ ಬಜೆಟ್ನಲ್ಲಿ ಕರಾವಳಿ ಜಿಲ್ಲೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಬಗ್ಗೆ ನಾವು ನಡೆಸಿರುವ ಪ್ರತಿಭಟನೆಯ ದನಿ ಬೆಂಗಳೂರಿಗೆ ಮುಟ್ಟಿರುವುದು ಮಾತ್ರವಲ್ಲದೆ ಮುಖ್ಯಮಂತ್ರಿಗಳು ನಮ್ಮ ಕೂಗಿಗೆ ಪ್ರತಿಕ್ರಿಯಿಸಿದ್ದಾರೆ. ಹದಿನೈದು ದಿನಗಳೊಳಗಾಗಿ ಕರಾವಳಿಗೆ ಆಗಮಿಸಿ ಎರಡು ದಿನ ಇಲ್ಲೇ ಉಳಿದು ಮೀನುಗಾರ ಸಮುದಾಯದ ಜೊತೆ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಕುಮಾರಸ್ವಾಮಿಯವರು ಹೇಳಿರುವುದು ಕರಾವಳಿಗರಿಗೆ ಹಾಗೂ ಮೀನುಗಾರರಿಗೆ ಸಂದ ಜಯ. ಮುಖ್ಯಮಂತ್ರಿಗಳ ಈ ಸ್ಪಂದನೆಗೆ ನಾವು ಅಭಾರಿಗಳು ಎಂದು ದಕ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟಗಾರರ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಹೇಳಿದರು.
ಅವರು ಸೋಮವಾರ ಉಡುಪಿ ಪ್ರೆಸ್ ಕ್ಲಬ್ಬಿನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಕರಾವಳಿಗರ ಸಮಸ್ಯೆಗಳನ್ನು ಆಲಿಸಲು ಆಗಮಿಸುವ ಮುಖ್ಯಮಂತ್ರಿಗಳನ್ನು ನಾವೂ ಸ್ವಾಗತಿಸುತ್ತೇವೆ. ಮೀನುಗಾರ ಸಮುದಾಯದ ಅಹವಾಲಿನ ಜೊತೆಗೆ ಕರಾವಳಿಯ ಬಹುಕಾಲದ ಬೇಡಿಕೆಗಳು, ಜ್ವಲಂತ ಸಮಸ್ಯೆಗಳನ್ನು ತಿಳಿದುಕೊಂಡು ಈ ಭಾಗದ ಹಿರಿಯರ ಸಲಹೆ ಸೂಚನೆಗಳನ್ನು ಸ್ವೀಕರಿಸಿ ಮೂರು ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಕ್ರಮಕೈಗೊಳ್ಳಬೇಕು ಎನ್ನುವುದು ನಮ್ಮ ಆಗ್ರಹ . ಈ ಚರ್ಚೆಗೆ ವೇದಿಕೆ ನಿರ್ಮಿಸಲು ನಾವು ಸಿದ್ಧರಿದ್ದೇವೆ ಎಂದರು.
ಉಡುಪಿ ಮತ್ತು ಅಕ್ಕಪಕ್ಕದ ಮಂಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಮೀನುಗಾರ ಮುಖಂಡರು, ಸಮಾಜಪರ ಚಿಂತಕರು, ಪರಿಸರವಾದಿಗಳು, ಪತ್ರಕರ್ತರು ಸೇರಿದಂತೆ ಜಿಲ್ಲೆಯ ಹಿತದೃಷ್ಟಿಯಿಂದ ಕಾರ್ಯಾಚರಿಸುತ್ತಿರುವ ಪ್ರಮುಖರನ್ನು ಈ ಸಭೆ ಒಳಗೊಂಡಿರುತ್ತದೆ.
ರಾಜಕೀಯಾತೀತವಾಗಿ ಈ ಹೋರಾಟವನ್ನು ಕೈಗೆತ್ತಿಕೊಂಡಿದ್ದು, ಜಿಲ್ಲೆಯ ಜನರ ಹಿತ ದೃಷ್ಟಿಯಿಂದ ನಮ್ಮೆಲ್ಲ ರಾಜಕೀಯ ಭಿನ್ನಮತಗಳನ್ನು ಪಕ್ಕಕ್ಕಿಟ್ಟು ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ನಾವು ಸಿದ್ಧರಿದ್ದೇವೆ. ಮೀನುಗಾರರ ಹಲವಾರು ಬೇಡಿಕೆಗಳು, ಕರಾವಳಿಯಲ್ಲಿ ಕುಸಿಯುತ್ತಿರುವ ಕೃಷಿ ಚಟುವಟಿಕೆಗಳಿಗೆ ಉತ್ತೇಜನ, ಯುವ ಸಮುದಾಯವನ್ನು ಜಿಲ್ಲೆಯಲ್ಲೇ ಉಳಿಸುವ ನಿಟ್ಟಿನಲ್ಲಿ ಒಂದಷ್ಟು ಪರಿಸರಸ್ನೇಹಿ ಉದ್ದಿಮೆಗಳು, ಬ್ರಹ್ಮಾವರ ಸಕ್ಕರೆ ಕಾರ್ಖಾನೆ, ಹೆಜಮಾಡಿ ಬಂದರು ಅಭಿವೃದ್ಧಿ, ನೇತ್ರಾವತಿ ನದಿ ತಿರುವು ಯೋಜನೆ, ವಾರಾಹಿ ಯೋಜನೆ, ಎಂಡೋ ಪೀಡಿತರ ಪುನರ್ವಸತಿ, ನೂತನ ತಾಲೂಕುಗಳಿಗೆ ಮೂಲಭೂತ ಸೌಕರ್ಯಗಳು ಸೇರಿದಂತೆ ಹಲವಾರು ವಿಚಾರಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ನಾವು ಉತ್ಸುಕರಾಗಿದ್ದೇವೆ ಎಂದರು.
ಪ್ರಾದೇಶಿಕ ಅಸಮಾನತೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕುಮಾರಸ್ವಾಮಿಯವರ ಕರಾವಳಿ ಪ್ರವಾಸ ಮಹತ್ವ ಪಡೆದುಕೊಳ್ಳಲಿದೆ. ಹದಿನೈದು ದಿನಗಳ ಒಳಗಾಗಿ ಕುಮಾರಸ್ವಾಮಿಯವರು ಉಡುಪಿಗೆ ಆಗಮಿಸಿ ಇಲ್ಲಿನ ಬೇಕು ಬೇಡಗಳನ್ನು ಕೇಳಿ ಸ್ಪಂದಿಸಬೇಕು. ಈ ಬಾರಿ ತಾವು ವಚನಬ್ರಷ್ಟರಾಗದೆ ಕರಾವಳಿಗರಿಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ ಎಂಬ ನಂಬಿಕೆಯಲ್ಲಿ ನಾವಿದ್ದು, ಹದಿನೈದು ದಿನಗಳೊಳಗೆ ತಾವು ಬರದೇ ಇದ್ದ ಪಕ್ಷದಲ್ಲಿ ನಾವು ಇನ್ನಷ್ಟು ರಚನಾತ್ಮಕವಾಗಿ ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ. ಈ ಹೋರಾಟಕ್ಕೆ ಭತ್ತ, ಅಡಿಕೆ, ತೆಂಗು, ರಬ್ಬರ್ ಬೆಳೆಗಾರರು, ಎಂಡೋ ಸಂತ್ರಸ್ತರು,ನೇತ್ರಾವತಿ ಉಳಿಸಿ ಹೋರಾಟಗಾರರು ವಿವಿಧ ತಾಲೂಕು ರಚನಾ ಹೋರಾಟಗಳ ಮುಖಂಡರು ಕೈ ಜೋಡಿಸಲಿದ್ದಾರೆ. ಆದರೆ ಮುಖ್ಯಮಂತ್ರಿಗಳು ಈ ಹೋರಾಟಕ್ಕೆ ಅವಕಾಶ ನೀಡದೆ ನಮ್ಮ ಬೇಡಿಕೆಗಳನು ಸೌಹಾರ್ದಯುತವಾಗಿ ಈಡೇರಿಸಲಿದ್ದಾರೆ ಎಂಬ ನಂಬಿಕೆಯಲ್ಲಿದ್ದೇವೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಅಜಿತ್ ಶೆಟ್ಟಿ ಕಿರಾಡಿ ಜೈ ಭಾರ್ಗವ ಬಳಗ, ಬೆಂಗಳೂರು, ಮಂಜು ಕೊಳ ಉಪಸ್ಥಿತರಿದ್ದರು.