ಬಜೆಟಿ ನಲ್ಲಿ ಬ್ರಹ್ಮಾವರವನ್ನು ಪುರಸಭೆಯನ್ನಾಗಿ ಘೋಷಿಸುವಂತೆ ಮುಖ್ಯಮಂತ್ರಿಗೆ ಮನವಿ

Spread the love

ಬಜೆಟಿ ನಲ್ಲಿ ಬ್ರಹ್ಮಾವರವನ್ನು ಪುರಸಭೆಯನ್ನಾಗಿ ಘೋಷಿಸುವಂತೆ ಮುಖ್ಯಮಂತ್ರಿಗೆ ಮನವಿ

ಉಡುಪಿ: ಬ್ರಹ್ಮಾವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬ್ರಹ್ಮಾವರ ತಾಲೂಕಿನ ಗ್ರಾಮ ಪಂಚಾಯತುಗಳನ್ನು ವಿಲೀನಗೊಳಿಸಿ ಬ್ರಹ್ಮಾವರ ಪುರಸಭೆಯನ್ನು ಬಜೆಟಿನಲ್ಲಿ ಘೋಷಿಸುವಂತೆ ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪ ಅವರಿಗೆ ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು.

ಉಡುಪಿ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿನ ಬ್ರಹ್ಮಾವರವು ಈಗಾಗಲೇ ತಾಲೂಕು ಕೇಂದ್ರವಾಗಿ ರಚನೆಗೊಂಡಿರುತ್ತದೆ. ಈಗಾಗಲೇ ಬ್ರಹ್ಮಾವರವು ನಗರವಾಗಿ ಬೆಳೆಯುತ್ತಿದ್ದು, ಈ ಭಾಗದಲ್ಲಿನ ಹಂದಾಡಿ, ಚಾಂತಾರು, ವಾರಂಬಳ್ಳಿ ಮತ್ತು ಹಾರಾಡಿ ಗ್ರಾಮಪಂಚಾಯತ್ ಗಳಿದ್ದು ಈ ನಾಲ್ಕು ಪಂಚಾಯತ್ ಒಟ್ಟು 8 ಗ್ರಾಮಗಳನ್ನು ಹೊಂದಿರುತ್ತದೆ. ಸುಮಾರು 27713 ಹೆಕ್ಟೆರ್ ಭೂ ಪ್ರದೇಶವನ್ನು ಹೊಂದಿರುವ ೀ 4 ಗ್ರಾಮಪ್ರದೇಶಗಳಲ್ಲಿ 2010 ನೇ ಸಾಲಿನ ಜನಗಣತಿಯಂತೆ ಒಟ್ಟು 30900 ಜನಸಂಖ್ಯೆ ಹೊಂದಿರುತ್ತದೆ. ಈಗ ಈ ಪ್ರದೇಶವು ನಗರವಾಗಿ ಬೆಳೆಯುತ್ತಿರುವುದರಿಂದ ಕಳೆದ ಕೆಲವು ವರ್ಷಗಳಿಂದ ಜನಸಂಖ್ಯೆ ಇನ್ನಷ್ಟು ಹೆಚ್ಚಾಗಿರುತ್ತದೆ.

ಈ ಪ್ರದೇಶದಲ್ಲಿ ಈಗಾಗಲೇ ಕೃಷಿ ಕೇಂದ್ರ ಸಕ್ಕರೆ ಕಾರ್ಖನೆ ಹಾಗೂ ಹಲವಾರು ಕೈಗಾರಿಕೋದ್ಯಮಗಳು ಪ್ರಾರಂಭಗೊಂಡಿರುತ್ತದೆ. ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ವಾಣಿಜ್ಯ ಸಂಕೀರ್ಣಗಳು ಹಾಲ್ ಗಳು ಮತ್ತು ವಸತಿ ಸಂಕೀರ್ಣಗಳು ನಿರ್ಮಾಣಗೊಂಡಿರುತ್ತದೆ. ಜನರಿಗೆ ಮೂಲಭೂತ ಸೌಕರ್ಯಗಳಾದ ನೀರು, ರಸ್ತೆ, ಬೀದಿ ದೀಪ ಹಾಗೂ ಕಸ ವಿಲೇವಾರಿ ಮುಂತಾದವುಗಳನ್ನು ಒದಗಿಸಲು ಗ್ರಾಮ ಪಂಚಾಯತ್ ಗಳಿಗೆ ಸಾಧ್ಯವಾಗದೇ ಇರುವುದರಿಂದ ೀ 4 ಗ್ರಾಮ ಪಂಚಾಯತ್ ಗಳನ್ನು ಸೇರಿಸಿ ಪುರಸಭೆ ಮಾಡಲು ಸಾರ್ವಜನಿಕರಿಂದ ಈಗಾಗಲೇ ಮನವಿಗಳು ಬರುತ್ತಿರುವುದರಿಂದ ಬ್ರಹ್ಮಾವರದ 4 ಪಂಚಾಯತ್ ಗಳನ್ನು ವಿಲೀನಗೊಳಿಸಿ ಬ್ರಹ್ಮಾವರ ಪುರಸಭೆಯನ್ನಾಗಿ ಬಜೆಟ್ ನಲ್ಲಿ ಘೋಷಣೆ ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಸಚಿವರಾದ ಸಿಟಿ ರವಿ , ಶಾಸಕರಾದ ಲಾಲಾಜಿ ಮೆಂಡನ್, ಬ್ರಹ್ಮಾವರ ಪುರಸಭೆ ರಚನೆಯ ನಿಯೋಗದ ಸರ್ವ ಪದಾಧಿಕಾರಿಗಳು,ಮೀನುಗಾರ ಸಂಘದ ಪದಾಧಿಕಾರಿಗಳು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ,ನಾಡೋಜ ಜಿ ಶಂಕರ್ , ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ, ಹಾಗೂ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು   ಹಾಗೂ ಇತರರು ಉಪಸ್ಥಿತರಿದ್ದರು.


Spread the love