Home Mangalorean News Kannada News ಬಜೆಟ್‍ನಲ್ಲಿ ಜಿಲ್ಲೆಯ ಬೇಡಿಕೆ ಈಡೇರಿಕೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

ಬಜೆಟ್‍ನಲ್ಲಿ ಜಿಲ್ಲೆಯ ಬೇಡಿಕೆ ಈಡೇರಿಕೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

Spread the love

ಬಜೆಟ್‍ನಲ್ಲಿ ಜಿಲ್ಲೆಯ ಬೇಡಿಕೆ ಈಡೇರಿಕೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

ಮಂಗಳೂರು:ರಾಜ್ಯ ಬಜೆಟ್‍ಗೆ ಪೂರ್ವಭಾವಿಯಾಗಿ ಜಿಲ್ಲೆಯ ಮೂಲಭೂತ ಅಗತ್ಯಗಳನ್ನು ಮನಗಂಡು ಬಜೆಟ್ ವೇಳೆ ಅಳವಡಿಸಲು ಪೂರಕವಾಗುವಂತೆ ಅಭಿಪ್ರಾಯ, ಬೇಡಿಕೆಗಳನ್ನು ಆಲಿಸಿ ಸಲ್ಲಿಸಲು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಯು ಟಿ ಖಾದರ್ ಅಧ್ಯಕ್ಷತೆಯಲ್ಲಿ ಇಂದು ಸಭೆ ನಡೆಯಿತು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು 2019-2020 ನೇ ಸಾಲಿನ ಮುಂಗಡ ಪತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಅಗತ್ಯವಿರುವ ಬೇಡಿಕೆಗಳ ಬಗ್ಗೆ ಜಿಲ್ಲಾ ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಲು ಇಂದು ಕರೆದ ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸವಿವರ ಚರ್ಚೆ ನಡೆಯಿತು.

ಇಂದಿನ ಸಭೆಯಲ್ಲಿ ನಡೆದ ಚರ್ಚೆಯ ಬಳಿಕ ಎಲ್ಲ ಅಗತ್ಯಗಳ ಬಗ್ಗೆ ಸಮಗ್ರವಾಗಿ ಮಾಹಿತಿ ಸಂಗ್ರಹಿಸಿ ಬಜೆಟ್‍ನಲ್ಲಿ ಒಪ್ಪಿಗೆ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

ಇಂದು ನಡೆದ ಸಭೆಯಲ್ಲಿ ಜಿಲ್ಲೆಯ ಸಂಪರ್ಕ ವ್ಯವಸ್ಥೆ ಬಲಪಡಿಸುವ ಬೇಡಿಕೆ ಮಂಡಿಸಲಾಗಿದ್ದು, ಅಭಿವೃದ್ಧಿಗೆ ಸಂಪರ್ಕವ್ಯವಸ್ಥೆ ಅತ್ಯಗತ್ಯವಾಗಿದ್ದು ರಸ್ತೆ ಮತ್ತು ಸೇತುವೆಗಳಿಗೆ ಸಂಬಂಧಿಸಿದಂತೆ ಬಜೆಟ್‍ನಲ್ಲಿ ಅಳವಡಿಸಲು ಮಾಹಿತಿಯನ್ನು ನೀಡಲಾಯಿತು. ಜಿಲ್ಲೆಯ ಪ್ರಮುಖ 3 ಘಾಟಿ ರಸ್ತೆ ಮತ್ತು ಧಾರ್ಮಿಕ ಕೇಂದ್ರಗಳ ಸಂಪರ್ಕ ರಸ್ತೆ ಅಭಿವೃದ್ಧಿ ಮತ್ತು ಒಳನಾಡು ಜಲಸಾರಿಗೆ ಅಗತ್ಯ ಮಾಹಿತಿಯನ್ನು ನೀಡಲಾಯಿತು.

ಕಿರುಸೇತುವೆ ಮತ್ತು ರಸ್ತೆಗಳಿಗೆ ಸುಮಾರು 30 ಕೋಟಿ ರೂ.ಗಳ ಬೇಡಿಕೆಯನ್ನು ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ನೀಡಿದರು. ಲೋಕೋಪಯೋಗಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖಾಧಿಕಾರಿಗಳು ಅಭಿವೃದ್ಧಿ ಕಾಮಗಾರಿ ಮತ್ತು ಅದರಿಂದಾಗುವ ಅನುಕೂಲಗಳ ಬಗ್ಗೆ ಸವಿವರ ಮಾಹಿತಿ ನೀಡಿದರು.

ಪ್ರಸಕ್ತ ಸಾಲಿನಲ್ಲಿ ಶಾಲಾ ಸಂಪರ್ಕ ಸೇತುವೆಗಳಿಗೆ ಆದ್ಯತೆಯನ್ನು ನೀಡಲಾಗಿದೆ. ಮಳೆಗಾಲದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಅವರಿಗೆ ಶಾಲಾ ಕಾಲೇಜು ತಲುಪುವಿಕೆಯನ್ನು ಸುಲಭಗೊಳಿಸಲು ಕಾಲು ಸೇತುವೆ, ಕಿರುಸೇತುವೆಗಳನ್ನು ರಚಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಈಗಾಗಲೇ ಇಂತಹ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯು ಶೈಕ್ಷಣಿಕ ಹಬ್ ಎಂದು ಗುರುತಿಸಲ್ಪಟ್ಟಿದ್ದು, ಕೊಣಾಜೆಯಿಂದ ನಗರಕ್ಕೆ ಶಿಕ್ಷಣಾರ್ಥಿಗಳ ಅನುಕೂಲಕ್ಕೆ ಉತ್ತಮ ರಸ್ತೆ ಸಂಪರ್ಕ ಕಲ್ಪಿಸುವ ಬಗ್ಗೆ ಲೋಕೋಪಯೋಗಿ ಇಲಾಖೆ ಯೋಜನೆ ರೂಪಿಸಿ ಎಂದು ಸಚಿವರು ಸಲಹೆ ನೀಡಿದರು.

ಪ್ರವಾಸೋದ್ಯಮದಡಿ ಕೂಳೂರಿನಿಂದ ನೇತ್ರಾವತಿಯವರೆಗೆ 13 ಜೆಟ್ಟಿ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ಧವಾಗಿದ್ದು, ಈ ಯೋಜನೆಯಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರೋತ್ಸಾಹ ದೊರೆಯಲಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

ಇದರ ಜೊತೆಗೆ ಹರೇಕಳ ನದೀತೀರವನ್ನು ಅಭಿವೃದ್ಧಿ ಪಡಿಸಿ ಎಂದ ಸಚಿವರು, ಸಸಿಹಿತ್ಲುವಿನಲ್ಲಿ ಸರ್ಫಿಂಗ್ ಝೋನ್ ಅಭಿವೃದ್ಧಿಗೆ ಸಲ್ಲಿಸಲಾದ ಪ್ರಸ್ತಾವನೆಗೆ ಅನುಮೋದನೆ ನೀಡಲು ಸಂಬಂಧಪಟ್ಟವರ ಜೊತೆ ಮಾತುಕತೆ ನಡೆಸುವುದಾಗಿ ಸಚಿವರು ಭರವಸೆ ನೀಡಿದರು.

ವಿಮಾನ ನಿಲ್ದಾಣದ ಅಭಿವೃದ್ದಿಗೆ 36 ಎಕರೆ ಭೂಮಿಯ ಅಗತ್ಯವಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಗಮನ ಸೆಳೆದರು. ಇದರ ಜೊತೆಗೆ ಮರಕಡ ರಸ್ತೆಗೆ ಮಂಜೂರು ನೀಡಲು ಕೋರಿದರು. ಸಚಿವರು ಉತ್ತರಿಸಿ, ವಿಮಾನ ನಿಲ್ದಾಣಕ್ಕೆ ಅಗತ್ಯ ನೆರವು ನೀಡಲು ಬದ್ಧವಾಗಿದ್ದು, ವಿಮಾನ ನಿಲ್ದಾಣದ ಅಧಿಕಾರಿಗಳು ನಿಲ್ದಾಣಕ್ಕೆ ತಮ್ಮ ಸಂಬಂಧಿಕರನ್ನು ಕರೆದೊಯ್ಯಲು ಬರುವವರಿಗೆ ಕನಿಷ್ಠ ಕಾಯಲು ತಂಗು ಬೆಂಚಿನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿ ಎಂದು ಸೂಚಿಸಿದರು. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರ ಕಾರ್ಯೋನ್ಮುಖವಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದರು.

ಸಣ್ಣ ಕೈಗಾರಿಕೆಗಳ ಸಂಘದ ಪ್ರತಿನಿಧಿಗಳು ಮಾತನಾಡಿ, ಬೈಕಂಪಾಡಿಯಲ್ಲಿ ಮೂಲಭೂತ ಸೌಕರ್ಯ ಒದಗಿಸಿ; ಹೊಸ ರಸ್ತೆ ಮತ್ತು ಚರಂಡಿ ಇಲ್ಲಿ ಅತ್ಯಗತ್ಯ ಎಂದರು. ಇದರ ಜೊತೆಗೆ ಇಲ್ಲಿ ಭೂಮಿ ಲಭ್ಯವಿದ್ದು ರಫ್ತು ಮಾಡುವ ಉತ್ಪನ್ನ್ಗಳ ಪ್ರದರ್ಶನ ಮತ್ತು ಅಲ್ಲಿನ ಕಾರ್ಯಚಟುವಟಿಕೆಗಳಿಗೆ ಪೂರಕವಾಗುವಂತೆ ಒಂದು ಎಕ್ಸಿಬಿಷನ್ ಕೇಂದ್ರದ ಅಗತ್ಯವಿದೆ ಎಂದರು.

ಜಿಲ್ಲೆಯ ಪ್ರಮುಖ ಉದ್ಯೋಗವಾಗಿರುವ ಮೀನುಗಾರಿಕೆಗೆ ಉತ್ತೇಜನ ನೀಡಲು ಮೀನುಗಾರಿಕೆ ಅಧಿಕಾರಿಗಳು ಹಾಗೂ ಮುಖಂಡರ ಬೇಡಿಕೆಯನ್ನು ಆಲಿಸಿದ ಸಚಿವರು, ಹಳೆ ಬಂದರಿನ ಇನ್ ಲ್ಯಾಂಡ್ ವಾಟರ್ ವೇ ಮತ್ತು ಫಿಶ್ ಮೀಲ್‍ಗೂ ವಾಟರ್ ವೇ ರಚಿಸುವ ಯೋಜನೆಗೆ ಅಗತ್ಯ ಬಜೆಟ್ ರೂಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಡ್ರೆಜ್ಜಿಂಗ್ ಬಗ್ಗೆಯೂ ಸಚಿವರು ಚರ್ಚಿಸಿದರು. ಬಂದರನ್ನು ಅತ್ಯಾಧುನೀಕರಣಗೊಳಿಸಲು ಬಜೆಟ್ ಅಗತ್ಯವನ್ನು ಬಂದರು ಅಧಿಕಾರಿಗಳು ಸಚಿವರ ಮುಂದಿಟ್ಟರು.

ಜಿಲ್ಲೆಯ ಜನರಿಗೆ ನೆರವಾಗುವ ಸುಸ್ಥಿರ ಅಭಿವೃದ್ಧಿ ಯೋಜನೆಗಳನ್ನು ಬಜೆಟ್‍ನಲ್ಲಿ ಸೇರ್ಪಡೆಗೊಳಿಸಲು ಸಣ್ಣ ನೀರಾವರಿ ಇಲಾಖೆ ರೂಪಿಸಿರುವ ಕಿಂಡಿ ಅಣೆಕಟ್ಟುಗಳ ಮಾಹಿತಿಯನ್ನು ಸಚಿವರು ಪಡೆದರು.

ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಇಲಾಖೆಗೆ ಕಟ್ಟಡಗಳ ಅಗತ್ಯವಿದೆ ಎಂದು ಡಿಡಿಪಿಐ ಹೇಳಿದರು. ವನ್ ಲಾಕ್ ಮತ್ತು ಲೇಡಿಗೋಷನ್ ಆಸ್ಪತ್ರೆಗಳ ಅಗತ್ಯದ ಬಗ್ಗೆ ಆಸ್ಪತ್ರೆಗಳ ಮುಖ್ಯಸ್ಥರು ಗಮನ ಸೆಳೆದರು.

ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಘನತ್ಯಾಜ್ಯ ವಿಲೇ ಘಟಕಗಳಿಗೆ ಬಜೆಟ್ ಅಗತ್ಯವನ್ನು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಮುಂದಿಟ್ಟರು. ಮಹಾನಗರಪಾಲಿಕೆಗೆ ಬಜೆಟ್ ಕೊರತೆ ಇರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತನ್ನಿ ಎಂದರು.

ಕನ್ನಡ ಸಂಸ್ಕøತಿ ಇಲಾಖಾಧಿಕಾರಿಗಳು ರಂಗಮಂದಿರಗಳ ಪ್ರಸಕ್ತ ಸ್ಥಿತಿಯನ್ನು ವಿವರಿಸಿದರು. ಪಿಲಿಕುಳದಲ್ಲಿರುವ ಗುತ್ತು ಮನೆ ಅಭಿವೃದ್ಧಿಗೆ ಬಜೆಟ್‍ನ ಅಗತ್ಯವಿದೆ ಎಂದರು.

ತುಳು ಭಾಷಾ ಚಲನಚಿತ್ರಕ್ಕೆ ಸಂಬಂಧಿಸಿದಂತೆ ಹಾಗೂ ತುಳು ಫಿಲ್ಮೋತ್ಸವ, ರೂಂ ಥಿಯೇಟರ್ ಪರಿಕಲ್ಪನೆಗೆ ಒತ್ತು ನೀಡಲು ಹಾಗೂ ಕಲಾವಿದರಿಗೆ ಆರೋಗ್ಯ ಯೋಜನೆ ಹಾಗೂ ಮಾಸಾಶನ ನೀಡಲು ತುಳು ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದ ಪ್ರತಿನಿಧಿ ತಮ್ಮ ಬೇಡಿಕೆಗಳನ್ನು ಸಚಿವರ ಮುಂದಿಟ್ಟರು.

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಗೆ ಸಂಬಂಧಿಸಿದಂತೆ ಇನ್ನು ಕನಿಷ್ಟ 20 ಹಾಸ್ಟೆಲ್‍ಗಳ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದರು. ಪಶುಸಂಗೋಪನೆ ಇಲಾಖೆಗೆ ಸಂಬಂಧಿಸಿದಂತೆ ಪಾಲಿ ಕ್ಲಿನಿಕ್ ರಚಿಸುವ ಬಗ್ಗೆ ಕಟ್ಟಡಗಳ ಅಗತ್ಯದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಸಿಇಒ ಡಾ ಸೆಲ್ವಮಣಿ, ಅಪರ ಜಿಲ್ಲಾಧಿಕಾರ ಕುಮಾರ್, ಮಹಾನಗರಪಾಲಿಕೆ ಆಯುಕ್ತ ಮಹಮ್ಮದ್ ನಝೀರ್ ಉಪಸ್ಥಿತರಿದ್ದರು.


Spread the love

Exit mobile version