ಬಜೆಟ್ ನಲ್ಲಿ ಅಗತ್ಯ ಅನುದಾನ ಮೀಸಲಿರಿಸುವಂತೆ ಸಿಎಂ ಸಿದ್ದರಾಮಯ್ಯರಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮನವಿ
ಉಡುಪಿ: 2025-26 ನೇ ಸಾಲಿನ ಬಜೆಟ್ನಲ್ಲಿ ಉಡುಪಿ ಜಿಲ್ಲೆಯ ವಿವಿಧ ಆದ್ಯತೆಯ ವಿಷಯಗಳ ಬಗ್ಗೆ ವಿಶೇಷ ಅನುದಾನ ಮೀಸಲಿರಿಸುವಂತೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾಡಿ ಮನವಿ ಸಲ್ಲಿಸಿದರು.
ಶಾಲೆಗಳಿಗೆ ಅನುದಾನ : ಉಡುಪಿ ಜಿಲ್ಲೆಯು ಶೈಕ್ಷಣಿಕವಾಗಿ ನಿರಂತರವಾಗಿ ಉತ್ತಮ ಸಾಧನೆ ಮಾಡಿಕೊಂಡು ಬರುತ್ತಿದ್ದು, ನೆರೆಯ ಜಿಲ್ಲೆಗಳಾದ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಲ್ಲದೇ ಉತ್ತರ ಕರ್ನಾಟಕದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಜಿಲ್ಲಾ ಕೇಂದ್ರವಾದ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಧಿಕ ಸಂಖ್ಯೆಯ ಗರಿಷ್ಟ ದಾಖಲಾತಿಯನ್ನು ಹೊಂದಿರುವ ಶಾಲಾ ಕಾಲೇಜುಗಳು ಕಾರ್ಯಚರಿಸುತ್ತಿವೆ. ಇವುಗಳಲ್ಲಿ ಅನೇಕ ಸರಕಾರಿ ಶಾಲಾ ಕಟ್ಟಡಗಳು ಹಳೆಯದಾಗಿದ್ದು, ದುರಸ್ತಿಗೊಳಿಸುವ ಅವಶ್ಯಕತೆಯಿದ್ದು, ಈ ಬಗ್ಗೆ ವಿಶೇಷ ಅನುದಾನದ ಅಗತ್ಯವಿದೆ. ಶಾಲಾ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳ ಸಂಖ್ಯೆ ಮೂತ್ರಾಲಯ ಹಾಗೂ ಶೌಚಾಲಯಗಳೂ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗಿದೆ. ಶಾಲಾ ಕೊಠಡಿಗಳ ದುರಸ್ತಿಗೆ ಆದ್ಯತೆಯ ಮೇರೆಗೆ ತುರ್ತಾಗಿ ಅನುದಾನ ಬಿಡುಗಡೆಗೊಳಿಸಬೇಕಾಗಿದೆ.
ನೂತನ ಜಿಲ್ಲಾಸ್ಪತ್ರೆ ಕಟ್ಟಡಕ್ಕೆ ಪೂರಕ ಹೆಚ್ಚುವರಿ ಅನುದಾನ : ಉಡುಪಿ ಜಿಲ್ಲೆಯ ನೂತನ ಜಿಲ್ಲಾಸ್ಪತ್ರೆ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದ್ದು, ಕಾಮಗಾರಿಯ ಆಡಳಿತಾತ್ಮಕ ಅನುಮೋದಿತ ಮೊತ್ತವು ರೂ. 110.24 ಕೋಟಿಯಾಗಿರುತ್ತದೆ. ಸದ್ರಿ ಮೊತ್ತದಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಜಿ.ಎಸ್.ಟಿ ಮೊತ್ತ ಸುಮಾರು ರೂ. 20.42 ಕೋಟಿ, ಮತ್ತು ಟೆಂಡರ್ ಕರಾರಿನಂತೆ ದರ ಏರಿಕೆ (ಪ್ರೈಸ್ ಎಕ್ಸಲೇಶನ್) ಮೊತ್ತ ಸುಮಾರು ರೂ. 18.44 ಕೋಟಿ ಇವುಗಳನ್ನು ಮೂಲ ಅಂದಾಜಿನಲ್ಲಿ ಅಳವಡಿಸಿಕೊಂಡಿಲ್ಲ. ಇದಲ್ಲದೇ ಆಸ್ಪತ್ರೆಯು ಸಂಪೂರ್ಣ ಉಪಯೋಗಕ್ಕೆ ಬರಲು ಅವಶ್ಯವಿರುವ ಇತರೆ ಕಾಮಗಾರಿಗಳಿಗಾಗಿ ಸುಮಾರು ರೂ 9.50 ಕೋಟಿ ವೆಚ್ಚ ತಗಲಲಿದ್ದು, ರೂ. 48.36 ರಷ್ಟು ಹೆಚ್ಚುವರಿ ಮೊತ್ತದ ಅವಶ್ಯಕತೆಯಿರುತ್ತದೆ.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನಿರ್ವಹಣೆಗೆ ಅನುದಾನ : ಉಡುಪಿ ನಗರದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿಗಳ ವೇತನ ಹಾಗೂ ನಿರ್ವಹಣಾ ವೆಚ್ಚ, ವಿದ್ಯುತ್ ಬಿಲ್ ಪಾವತಿ ಬಾಕಿ ಉಳಿದಿದ್ದು, ಆಸ್ಪತ್ರೆಯ ನಿರ್ವಹಣೆಗೆ ತೊಂದರೆಯಾಗಿದ್ದು, ತುರ್ತಾಗಿ ಅನುದಾನ ಬಿಡುಗಡೆಗೆ ಕ್ರಮವಹಿಸಬೇಕಾಗಿದೆ. ಆಸ್ಪತ್ರೆಯು ತೀವ್ರ ಸಿಬ್ಬಂದಿ ಕೊರತೆ ಎದುರಿಸುತ್ತಿದ್ದು ಸಮಸ್ಯೆ ಬಗೆಹರಿಸಬೇಕಾಗಿದೆ.
ಮೀನುಗಾರಿಕೆಗೆ ಪ್ರೋತ್ಸಾಹ : ಉಡುಪಿಯ ಲಕ್ಷಾಂತರ ಜನ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಮೀನುಗಾರಿಕೆಯನ್ನು ಅವಲಂಬಿಸಿದ್ದು, ಮುಂದಿನ ಬಜೆಟ್ನಲ್ಲಿ ಮೀನುಗಾರಿಕೆಯನ್ನು ಪ್ರೋತ್ಸಾಹಿಸಲು ಮಲ್ಪೆ ಬಂದರಿನಲ್ಲಿ ಡ್ರೆಜ್ಜಿಂಗ್, ಡಿಸೇಲ್ ಸಬ್ಸಿಡಿ, ನಾಡದೋಣಿಗಳಿಗೆ ಸೀಮೆಎಣ್ಣೆ ಪೂರೈಕೆ, ರೈತಾಪಿ ವರ್ಗದವರಿಗೆ ನೀಡುವಂತೆ ಮೀನುಗಾರರಿಗೆ ಸಾಲ ಸೌಲಭ್ಯ ಯೋಜನೆ, ಸೀ ಆಂಬ್ಯುಲೆನ್ಸ್ ಮತ್ತಿತರ ಕಾರ್ಯಕ್ರಮಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ಅನಿವಾರ್ಯತೆಯಿದೆ.
ಕಡಲು ಕೊರೆತಕ್ಕೆ ಶಾಶ್ವತ ಪರಿಹಾರ : ಉಡುಪಿಯ ಕರಾವಳಿ ತೀರದ ಹಲವು ಭಾಗಗಳು ನಿರಂತರವಾಗಿ ಕಡಲು ಕೊರೆತಕ್ಕೆ ಒಳಗಾಗುತ್ತಿದೆ. ಇದರಿಂದಾಗಿ ಸ್ಥಳೀಯ ಮೀನುಗಾರರು ಸತತವಾಗಿ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಕಡಲು ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ.
ನಾರಾಯಣ ಗುರು ಅಭಿವೃದ್ಧಿ ನಿಗಮ : ಹಿಂದುಳಿದ ವರ್ಗಕ್ಕೆ ಸೇರಿದ ಬಿಲ್ಲವ, ಈಡೀಗ ಮತ್ತಿತರ ಸಮುದಾಯದ ಏಳ್ಗೆಯ ಉದ್ದೇಶಕ್ಕೆ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿರುತ್ತದೆ. ಸದ್ರಿ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ರೂ.500 ಕೋಟಿ ವಿಶೇಷ ಅನುದಾನ ಮೀಸಲಿರಿಸುವ ಮೂಲಕ ಅವಕಾಶ ವಂಚಿತರಿಗೆ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ.
ಪ್ರಾಕೃತಿಕ ವಿಕೋಪಕ್ಕೆ ಅನುದಾನ : ಕರಾವಳಿಯಲ್ಲಿ ವಿಪರೀತ ಮಳೆಯಿಂದಾಗಿ ನೂರಾರು ಮರಗಳು ಬಿದ್ದು, ವಿದ್ಯುತ್ ಕಂಬಗಳಿಗೆ, ಮನೆಗಳಿಗೆ ಹಾನಿಯಾಗಿದ್ದು, ರಸ್ತೆ, ಮೋರಿ, ಕಾಲುಸಂಕಗಳು ಹಾಗೂ ಸೇತುವೆಗಳು ಅಪಾಯದಲ್ಲಿವೆ. ಸಂತೃಸ್ತರಿಗೆ ಪರಿಹಾರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳ ರಕ್ಷಣೆಗೆ ಹಾಗೂ ದುರಸ್ತಿಗೆ ಸಾಕಷ್ಟು ಅನುದಾನದ ಅಗತ್ಯವಿದ್ದು ಈ ಬಗ್ಗೆ ರೂ. 25 ಕೋಟಿ ವಿಶೇಷ ಅನುದಾನವನ್ನು ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಸರಕಾರದಿಂದ ಮಂಜೂರು ಮಾಡಿಸಬೇಕಾಗಿ ಕೋರುತ್ತೇನೆ.
ಮಳೆಹಾನಿಗೆ ವೈಯಕ್ತಿಕ ಪರಿಹಾರ : ಮಳೆಯಿಂದ ಹಾನಿಗೊಳಗಾದ ವಾಸದ ಮನೆಗಳಿಗೆ ಈ ಹಿಂದೆ ಎ. ಬಿ. ಸಿ. ವರ್ಗೀಕರಣದಡಿ ಗರಿಷ್ಠ ರೂ. 5 ಲಕ್ಷ ಪರಿಹಾರ ಮೊತ್ತ ನೀಡಲಾಗುತ್ತಿತ್ತು. ಪೂರ್ಣ ಹಾನಿಗೊಳಗಾದ ವಾಸದ ಮನೆಗಳ ಪುನರ್ ನಿರ್ಮಾಣಕ್ಕೆ ಸದ್ರಿ ಮೊತ್ತವು ಅಗತ್ಯವಾಗಿದ್ದು, ಈ ಹಿಂದಿನಂತೆ ಪರಿಹಾರ ಮೊತ್ತವನ್ನು ಮುಂದುವರಿಸಬೇಕಾಗಿದೆ.
ಕೃಷಿ ಕಾಲೇಜು ಸ್ಥಾಪನೆ : ಉಡುಪಿ ಜಿಲ್ಲೆಯ ಬ್ರಹ್ಮಾವರ ಕೃಷಿ ಕೇಂದ್ರದ ಆವರಣದಲ್ಲಿ ಕೃಷಿ ಕಾಲೇಜು ಸ್ಥಾಪನೆಯ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು ಆದ್ಯತೆಯ ಮೇರೆಗೆ ಗಮನಹರಿಸಿ ಕೃಷಿ ಕಾಲೇಜು ಸ್ಥಾಪನೆಗೆ ಕ್ರಮ ವಹಿಸುವಂತೆ ಕೋರುತ್ತೇನೆ.
ಸರಕಾರಿ ಬಸ್ ಸೌಲಭ್ಯ : ಉಡುಪಿಯಲ್ಲಿ ಸರಕಾರಿ ಬಸ್ಗಳ ಓಡಾಟ ಬಹಳ ಕಡಿಮೆ ಸಂಖ್ಯೆಯಲ್ಲಿದೆ. ಗ್ರಾಮೀಣ ಭಾಗದಲ್ಲಿ ಈ ಬಗ್ಗೆ ಬೇಡಿಕೆಯಿದ್ದು ನಿರಂತರವಾಗಿ ಮನವಿಗಳು ಸ್ವೀಕಾರವಾಗುತ್ತಿವೆ. ರೈತರಿಗೆ, ಕಾರ್ಮಿಕರಿಗೆ, ಶಾಲಾ ಕಾಲೇಜು ಮಕ್ಕಳಿಗೆ ಅನುಕೂಲವಾಗುವಂತೆ ಸರಕಾರಿ ಬಸ್ ಸೌಲಭ್ಯವನ್ನು ಹೆಚ್ಚಿಸಬೇಕಾಗಿದೆ. ಕೊರೋನಾ ಸಂದರ್ಭದಲ್ಲಿ ಸ್ಥಗಿತಗೊಳಿಸಲಾದ ನರ್ಮ್ ಬಸ್ ಓಡಾಟಗಳನ್ನು ಪುನರಾರಂಭಿಸಬೇಕಾಗಿದೆ.
ಸುಸಜ್ಜಿತ ಕ್ರೀಡಾಂಗಣಗಳ ನಿರ್ಮಾಣ : ಉಡುಪಿ ಮತ್ತು ಬ್ರಹ್ಮಾವರ ತಾಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣಗಳ ಕೊರತೆಯಿದೆ. ವಿವಿಧ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಲಾ ಒಂದು ಕ್ರೀಡಾಂಗಣಗಳ ನಿರ್ಮಾಣದ ಅಗತ್ಯವಿದೆ.
ನೂತನ ಬ್ರಹ್ಮಾವರ ತಾಲೂಕಿನಲ್ಲಿ ಪ್ರವಾಸಿ ಬಂಗಲೆ (ಸರ್ಕ್ಯೂಟ್ ಹೌಸ್) ನಿರ್ಮಾಣ : ನೂತನ ಬ್ರಹ್ಮಾವರ ತಾಲೂಕಿನ, ಬ್ರಹ್ಮಾವರ ಕೇಂದ್ರ ಭಾಗದಲ್ಲಿ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಬಂಗಲೆ ನಿರ್ಮಾಣದ ಅಗತ್ಯವಿದೆ.
ಸರ್ಕಾರಿ ವೈದ್ಯಕೀಯ ಕಾಲೇಜು : ಉಡುಪಿ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ದಶಕಗಳ ಬೇಡಿಕೆಯಾಗಿದ್ದು, ಉಡುಪಿ ವಿಧಾನಸಭಾ ಕ್ಷೇತ್ರದ ಉಪ್ಪೂರು ಗ್ರಾಮದ ಸರ್ವೆ ನಂಬ್ರ 293/1ಎ ಹಾಗೂ 232 ರಲ್ಲಿ 25 ಎಕ್ರೆ ಜಾಗವನ್ನು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಗುರುತಿಸಲಾಗಿದೆ. ಪ್ರತಿ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸುವ ಸರಕಾರದ ನೀತಿಯಂತೆ ಉಡುಪಿಗೆ ಶೀಘ್ರವಾಗಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮಂಜೂರಾತಿ ನೀಡಿ ಅನುದಾನ ಮೀಸಲಿರಿಸಬೇಕಾಗಿದೆ.
ಉಡುಪಿ ಪರ್ಯಾಯ ಮಹೋತ್ಸವಕ್ಕೆ ಅನುದಾನ : ನಾಡ ಹಬ್ಬದ ರೀತಿಯಲ್ಲಿ ಎರಡು ವರ್ಷಗಳಿಗೊಮ್ಮೆ ಬಹಳ ವಿಜೃಂಭಣೆಯಿಂದ ನಡೆಯುವ, ಪೊಡವಿಗೊಡೆಯ ಉಡುಪಿ ಶ್ರೀ ಕೃಷ್ಣ ದೇವರ ಶೀರೂರು ಪರ್ಯಾಯ ಮಹೋತ್ಸವವು ಮುಂದಿನ ಜನವರಿಯಲ್ಲಿ ನಡೆಯಲಿದೆ. ಪ್ರಸ್ತುತ ಬಜೆಟ್ನಲ್ಲಿ ಪರ್ಯಾಯ ಪೂರ್ವ ಅಗತ್ಯ ನಿರ್ವಹಣೆ ಮತ್ತು ಸ್ವಚ್ಛತೆ ಮತ್ತಿತರ ಕೆಲಸಗಳಿಗಾಗಿ ರೂ. 25 ಕೋಟಿ ವಿಶೇಷ ಅನುದಾನವನ್ನು ಮೀಸಲಿರಿಸಬೇಕಾಗಿದೆ.
ಮಣಿಪಾಲ ಮಣ್ಣಪಳ್ಳ ಕೆರೆ ಅಭಿವೃದ್ಧಿಗೆ ಅನುದಾನ : ಮಣಿಪಾಲದ ಮಣ್ಣಪಳ್ಳ ಕೆರೆಯು ಸುಮಾರು 120 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ, ಜೀವ ಜಗತ್ತಿಗೆ ಆಸರೆಯಾಗಬಲ್ಲ ಜಲ ಸಿರಿಯಾಗಿದೆ. ಸದ್ರಿ ಕೆರೆ ಹಾಗೂ ಕೆರೆಯ ಸುತ್ತ ಮುತ್ತ ಪ್ರಾಥಮಿಕ ಅಭಿವೃದ್ಧಿ ಕೆಲಸಗಳು ನಡೆದಿದ್ದು, ಪ್ರವಾಸೋದ್ಯಮ ಉತ್ತೇಜನ, ವಾಯು ವಿಹಾರ ಹಾಗೂ ಮಕ್ಕಳ ಚಟುವಟಿಕೆಗಳಿಗೆ ವಿಫುಲ ಅವಕಾಶಗಳಿದ್ದು, ಸದ್ರಿ ಕೆರೆಯ ಅಭಿವೃದ್ಧಿಗೆ ರೂ. 25 ಕೋಟಿ ವಿಶೇಷ ಅನುದಾನದ ಅಗತ್ಯವಿದೆ.
ಕಂಬಳ ಕ್ರೀಡೆಗೆ ಅನುದಾನ : ಕರಾವಳಿಯ ಕೃಷಿಕ ಬಂಧುಗಳ ಆಚರಣೆ, ನಂಬಿಕೆ ಹಾಗೂ ಅವರ ಕೃಷಿ ಬದುಕಿನ ಅವಿಭಾಜ್ಯ ಅಂಗ ಕಂಬಳ. ಕಂಬಳವು ದೇಶ-ವಿದೇಶದ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ತುಳು ನಾಡಿನ ಕೃಷಿಕರು ಜಾತಿ ಮತ ಭೇದವಿಲ್ಲದೆ, ಪ್ರೀತಿ ಸಹಕಾರದಿಂದ ಆಚರಿಸಲ್ಪಡುವ ಸಂಪ್ರದಾಯಗಳನ್ನೊಳಗೊಂಡಿದೆ. ಉಡುಪಿ ಜಿಲ್ಲೆಯಲ್ಲಿ ಸುಮಾರು 25 ಕಂಬಳ ಕ್ರೀಡೆ ನಡೆದುಕೊಂಡು ಬರುತ್ತಿದ್ದು, ಸರಕಾರವು ಪ್ರತಿ ಕಂಬಳಕ್ಕೆ ರೂ. 10 ಲಕ್ಷ ವಿಶೇಷ ಅನುದಾನ ನೀಡಿ ಗ್ರಾಮೀಣ ಕಂಬಳ ಕ್ರೀಡೆಯನ್ನು ಪ್ರೋತ್ಸಾಹಿಬೇಕು.
ಉಪವಿಭಾಗಾಧಿಕಾರಿಗಳ ಕಛೇರಿ ಮಂಜೂರಾತಿ : ಉಡುಪಿ ಜಿಲ್ಲೆಯು ದಕ್ಷಿಣ ಕನ್ನಡ ಜಿಲ್ಲೆಯಿಂದ ಭೌಗೋಳಿಕವಾಗಿ ಬೇರ್ಪಟ್ಟು, ನೂತನ ಜಿಲ್ಲೆಯಾಗಿ ಘೋಷಣೆಯಾಗಿ 27 ವರ್ಷಗಳು ಪೂರ್ಣಗೊಂಡಿದ್ದು, ಪ್ರಸ್ತುತ 7 ತಾಲೂಕುಗಳನ್ನು ಹೊಂದಿರುತ್ತದೆ. ಜಿಲ್ಲೆಯಲ್ಲಿ ಏಕೈಕ ಉಪವಿಭಾಗಾಧಿಕಾರಿಗಳ ಕಛೇರಿಯು ಕುಂದಾಪುರದಲ್ಲಿ ಕಾರ್ಯಾಚರಿಸುತ್ತಿದೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಾರ್ವಜನಿಕರು ಕೆಲಸಗಳಿಗಾಗಿ ಸದ್ರಿ ಕಛೇರಿಗೆ 60 ಕಿ. ಮೀ. ಗೂ ಹೆಚ್ಚು ಪ್ರಯಾಣಿಸಬೇಕಾಗಿರುತ್ತದೆ. ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಉಪವಿಭಾಗಾಧಿಕಾರಿಗಳ ಕಛೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 4 ಉಪವಿಭಾಗಾಧಿಕಾರಿಗಳ ಕಛೇರಿ ಕಾರ್ಯಾಚರಿಸುತ್ತಿದ್ದು, ಉಡುಪಿ ಜಿಲ್ಲೆಯ ಕೇಂದ್ರ ಸ್ಥಾನವಾದ, ಉತ್ತಮ ಸಾರಿಗೆ ಸಂಪರ್ಕ ಹೊಂದಿರುವ ಮತ್ತು ಸರಕಾರಿ ಜಾಗ ಲಭ್ಯವಿರುವ ಉಡುಪಿ ನಗರದಲ್ಲಿ ಒಂದು ಹೆಚ್ಚುವರಿ ಉಪವಿಭಾಗಾಧಿಕಾರಿಗಳ ಕಛೇರಿ ಮಂಜೂರು ಮಾಡುವ ಅಗತ್ಯವಿದೆ.
ಕರಾವಳಿಗೆ ಪ್ರತ್ಯೇಕ ಮರಳು ನೀತಿ : ಕರಾವಳಿಯ ನದಿಗಳಲ್ಲಿ ವರ್ಷ ಪೂರ್ತಿ ನೀರಿನ ಹರಿವು ಇದ್ದು, ಸಮುದ್ರದ ಹಿನ್ನೀರಿನ ಪ್ರಭಾವವೂ ಇರುತ್ತದೆ. ಆದುದರಿಂದ, ಕರಾವಳಿಯ ಮೂರು ಜಿಲ್ಲೆಗಳ ನದಿಯಲ್ಲಿ ಮುಳುಗಿ ದೋಣಿಗಳ ಮೂಲಕ ಮರಳು ತೆಗೆಯುವ ಕ್ರಮ ಬಹಳ ಹಿಂದಿನಿಂದಲೂ ಇದೆ. ನೂರಾರು ವರ್ಷಗಳಿಂದ ಇದೇ ಉದ್ಯೋಗ ಮಾಡಿಕೊಂಡು ಬಂದ ಕುಟುಂಬಗಳಿವೆ. ಅದಕ್ಕಾಗಿ ಮರಳು ಗಣಿಗಾರಿಕೆ ನಿರ್ಬಂಧವನ್ನು ತೆಗೆಯಬೇಕು, ಪರಂಪರಾಗತವಾಗಿ ಮರಳು ತೆಗೆಯುವ ಕುಟುಂಬಗಳಿಗೆ ಅನುಮತಿ ನೀಡಬೇಕು. ಇದಕ್ಕಾಗಿ ಕರಾವಳಿಗೆ ಪ್ರತ್ಯೇಕ ಮರಳು ನೀತಿಯ ಅಗತ್ಯವಿದ್ದು, ಪ್ರಸ್ತುತ ಬಜೆಟ್ನಲ್ಲಿ ಇದನ್ನು ಘೋಷಿಸಬೇಕು.
ಆದುದರಿಂದ, ಮುಂದಿನ ಮಾರ್ಚ್ ತಿಂಗಳಿನಲ್ಲಿ ಮಂಡಿಸಲಿರುವ 2025-26ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಈ ಮೇಲಿನ ವಿಷಯಗಳ ಕುರಿತು ಗಮನಹರಿಸಿ, ವಿಶೇಷ ಅನುದಾನ ಮೀಸಲಿರಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು