ಬಡವರಿಗೆ ನಿವೇಶನ ನೀಡಿಕೆಗೆ ಸಚಿವ ಪ್ರಮೋದ್ ಮಧ್ವರಾಜರಿಂದ ಕಾಲಮಿತಿ ನಿಗದಿ

Spread the love

ಬಡವರಿಗೆ ನಿವೇಶನ ನೀಡಿಕೆಗೆ ಸಚಿವ ಪ್ರಮೋದ್ ಮಧ್ವರಾಜರಿಂದ ಕಾಲಮಿತಿ ನಿಗದಿ

ಉಡುಪಿ: ಬಡವರಿಗೆ ಮನೆ ನಿವೇಶನ ಮಂಜೂರು ಮಾಡುವ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳಿಗೆ ವಿತರಿಸಲು ಸಿದ್ಧ ಪಡಿಸಿರುವ ನಿವೇಶನ ಪಟ್ಟಿಯನ್ನು ಕಾಲಮಿತಿಯೊಳಗೆ ಸಲ್ಲಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ಒದಗಿಸಲು ತಹಸೀಲ್ದಾರ್ ಅವರು ಸಿದ್ಧಪಡಿಸಿರುವ ಎ ಮತ್ತು ಬಿ ಪಟ್ಟಿಗಳಲ್ಲಿರುವ ಒಟ್ಟು ಅರ್ಜಿದಾರರನ್ನು ಗುರುತಿಸಿ, ಆದ್ಯತೆಯಲ್ಲಿ ಎ ಪಟ್ಟಿಯಲ್ಲಿರುವ ಸ್ಥಳೀಯರಿಗೆ ನಿವೇಶನ ನೀಡಿ ಎಂದರು, ಬಿ ಪಟ್ಟಿಯನ್ನು ರೇಷನ್ ಕಾರ್ಡ್ ಮತ್ತು ಅಗತ್ಯ ಡಾಕ್ಯುಮೆಂಟ್‍ಗಳೊಂದಿಗೆ ಪರಿಶೀಲಿಸಿ ವರದಿ ಸಿದ್ಧಪಡಿಸಲು ನಿವೇಶನಕ್ಕೆ ಸಂಬಂಧಿಸಿದ ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು.

ನಿವೇಶನ ನೀಡಿಕೆ ಸಭೆಗಳು ಕೇವಲ ಕಾಟಾಚಾರವಾಗದೆ ಅನುಷ್ಠಾನಕ್ಕೆ ಪೂರಕವಾಗಿರಬೇಕೆಂದು ಎಚ್ಚರಿಸಿದ ಸಚಿವರು, ಡೀಮ್ದ್ ಫಾರೆಸ್ಟ್, ಪರಂಬೋಕು, ಕುಮ್ಕಿಯಂತಹ ಸಮಸ್ಯೆಗಳಿಂದ ಮುಕ್ತವಾಗಿರುವ , ಮನೆ ನಿವೇಶನಕ್ಕೆ ಸೂಕ್ತವಾಗಿರುವ , ಭೂಮಿಯ ಲೆಕ್ಕವನ್ನು ಮಾತ್ರ ತನಗೆ ನೀಡಿ. ನೀವು ಗುರುತಿಸಿರುವ ಜಾಗದ ಬಗ್ಗೆ ಪಕ್ಕಾ ಮಾಹಿತಿಯ ಜೊತೆಗೆ ಫಲಾನುಭವಿಗಳಿಗೆ ನೀಡಲು ಸೂಕ್ತವಾಗಿರಬೇಕೆಂದು ಸಚಿವರು ಸ್ಪಷ್ಟಪಡಿಸಿದರು.

ಈಗಾಗಲೇ ಹಲವು ಸುತ್ತಿನ ಸಭೆಗಳು ನಿವೇಶನಕ್ಕೆ ಸಂಬಂಧಿಸಿದಂತೆ ಜರುಗಿದ್ದು, ಗ್ರಾಮೀಣ ಪ್ರದೇಶದಲ್ಲಿ ನಿವೇಶನ ಹಂಚಿಕೆಗೆ 65 ಎಕರೆ ಅಗತ್ಯವಾಗಿದ್ದು, ಒಟ್ಟು 1429 ಫಲಾನುಭವಿಗಳ ಪಟ್ಟಿ ತಯಾರಾಗಿದೆ. ನಗರ ಪ್ರದೇಶದಲ್ಲಿ 11 ಎಕರೆ ಭೂಮಿ ಲಭ್ಯವಿದ್ದು, ಒಟ್ಟು 15 ಎಕರೆಯ ಅಗತ್ಯವಿತ್ತು ಎಂದು ಪೌರಾಯುಕ್ತರು ಮತ್ತು ಸಹಾಯಕ ಆಯುಕ್ತರು ಸಭೆಗೆ ಮಾಹಿತಿ ನೀಡಿದರು.

ಪೌರಾಯುಕ್ತ ಮಂಜುನಾಥಯ್ಯ ಅವರು ಮಾಹಿತಿ ನೀಡಿ 595 ಫಲಾನುಭವಿಗಳ ಪಟ್ಟಿ ನಗರಸಭೆಯಲ್ಲಿ ಸಿದ್ಧವಾಗಿದ್ದು 500 ಜನರಿಗೆ ಭೂಮಿ ನೀಡಲು ಸಿದ್ದತೆಗಳಾಗಿದೆ ಎಂದು ಸಚಿವರ ಗಮನಕ್ಕೆ ತಂದರು. ಹೆರ್ಗ, ಮಂಚಿ ಪ್ರದೇಶಗಳಲ್ಲಿ ನಿವೇಶನ ಭೂಮಿಯನ್ನು ನಗರಸಭೆ ಗುರುತಿಸಿದೆ.

ಪರಾರಿ ಶಿಮ್ರಾ ಸೇತುವೆ ಡಿಸೆಂಬರ್‍ನಲ್ಲಿ ಉದ್ಘಾಟನೆಯಾಗಲಿದ್ದು ಬಳಿಕ ನಗರದಿಂದ ಈ ಪ್ರದೇಶಕ್ಕಿರುವ ದೂರ ಕಡಿಮೆಯಾಗಲಿದೆ. ಹಾಗಾಗಿ ಮನೆ ನಿವೇಶನ ನೀಡಿಕೆಗೆ ಫಲಾನುಭವಿಗಳ ಆಕ್ಷೇಪವಿರಲಾರದು ಎಂದು ಸಚಿವರು ಹೇಳಿದರು. ಉಪ್ಪೂರಿನಲ್ಲಿ 26 ಎಕರೆ ನಿವೇಶನ ಭೂಮಿ ಸಿದ್ದವಾಗಿದೆ ಎಂದು ತಹಸೀಲ್ದಾರ್ ಪ್ರದೀಪ್ ಮಾಹಿತಿ ನೀಡಿದರು.

ನೀಲಾವರ, ಚೇರ್ಕಾಡಿ, ಹಾರಾಡಿ, ಪೆರ್ಡೂರುಗಳಲ್ಲಿ ನಿವೇಶನಗಳನ್ನು ಗುರುತಿಸಲಾಗಿದೆ ಎಂದೂ ಹೇಳಿದರು. ಐಟಿಐಗೆ ಚೇರ್ಕಾಡಿಯಲ್ಲೇ ಜಾಗ ಮೀಸಲಿಡಿ ಎಂದ ಸಚಿವರು, ನಾಲ್ಕೂರು, ಮಂಚಾರಿನಲ್ಲಿ ನಿವೇಶನ ಮೀಸಲಿಡುವಲ್ಲಿ ಹಿನ್ನಡೆಯಾದರೆ ಅಲ್ಲಿನ ಆರ್ ಐ ಮತ್ತು ವಿಎ ಯನ್ನು ಜವಾಬ್ದಾರರನ್ನಾಗಿಸಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದರು.

ಚೇರ್ಕಾಡಿ ರಸ್ತೆ ಕಾಮಗಾರಿ ಬಗ್ಗೆ, ಪೆರ್ಡೂರಿನಲ್ಲಿ ಫಲಾನುಭವಿ ಪಟ್ಟಿ ಅಂತಿಮಗೊಂಡಿರುವ ಬಗ್ಗೆ, ಕುತ್ಪಾಡಿಯಲ್ಲಿ ಶೀಘ್ರವೇ 14 ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಬಗ್ಗೆ ಸಚಿವರು ಖಾತರಿಪಡಿಸಿಕೊಂಡರು.

ಮಾಜಿ ಯೋಧರಿಗೆ 10 ಸೆಂಟ್ಸ್ ಜಾಗ ನೀಡಬೇಕು. ಸಂಘ ಸಂಸ್ಥೆಗಳ ಜಾಗ ನೀಡುವ ಬೇಡಿಕೆಯನ್ನಾಧರಿಸಿ ಸಹಾಯಕ ಆಯುಕ್ತರು ಅರ್ಜಿ ಹಾಕಿದವರ ಸಭೆ ನಡೆಸಿ ಎಲ್ಲರೂ ಕಾಂಪ್ಲೆಕ್ಸ್ ಮಾದರಿಯಲ್ಲಿ ಒಂದೆಡೆ ಕಟ್ಟಡ ನಿರ್ಮಿಸುವುದರಿಂದ ಸಮಸ್ಯೆ ಪರಿಹಾರವಾಗಲಿದೆ. ಆರ್ ಟಿ ಸಿಯಲ್ಲೂ ಎಲ್ಲರ ಹೆಸರನ್ನು ನಮೂದಿಸಿ ನೀಡುವುದರಿಂದ ಒಂದೆಡೆ ಎಲ್ಲರಿಗೂ ಕಟ್ಟಡ ಲಭ್ಯವಾಗಲಿದೆ ಎಂಬ ನೂತನ ಯೋಚನೆಯನ್ನು ಸಭೆಯ ಮುಂದಿಟ್ಟರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಸಿಇಒ ಶಿವಾನಂದ ಕಾಪಶಿ, ಅಪರ ಜಿಲ್ಲಾಧಿಕಾರಿ ಅನುರಾಧ, ಐಎಎಸ್ ಪ್ರೊಬೇಷನರ್ ಪೂವಿತ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.


Spread the love