Home Mangalorean News Kannada News ಬಡವರ ಬಾಳಿಗೆ ನೆರವಾದ ಕುದ್ರೋಳಿ ಕ್ಷೇತ್ರ – 300 ಕ್ವಿಂಟಾಲ್ ಅಕ್ಕಿ ವಿತರಣೆ  

ಬಡವರ ಬಾಳಿಗೆ ನೆರವಾದ ಕುದ್ರೋಳಿ ಕ್ಷೇತ್ರ – 300 ಕ್ವಿಂಟಾಲ್ ಅಕ್ಕಿ ವಿತರಣೆ  

Spread the love

ಬಡವರ ಬಾಳಿಗೆ ನೆರವಾದ ಕುದ್ರೋಳಿ ಕ್ಷೇತ್ರ – 300 ಕ್ವಿಂಟಾಲ್ ಅಕ್ಕಿ ವಿತರಣೆ  

ಮಂಗಳೂರು: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ದಕ್ಷಿಣ ಕನ್ನಡ ಜಿಲ್ಲೆಯ ದಿನಗೂಲಿ ಕಾರ್ಮಿಕರಿಗೆ, ಬಡವರು, ಜನಸಾಮಾನ್ಯರಿಗೆ ಜೀವನ ಸಾಗಿಸಲು ಅನುಕೂಲವಾಗುವಂತೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ 300ಕ್ವಿಂಟಾಲ್ ಅಕ್ಕಿ ವಿತರಣೆ ಮಾಡಲಾಗುತ್ತಿದ್ದು, ಪ್ರತಿನಿತ್ಯ 1ಸಾವಿರ ಮಂದಿಗೆ ದೇವಸ್ಥಾನದಿಂದಲೇ ಅನ್ನದಾನ ವಿತರಣೆ ಮಾಡಲಾಗುತ್ತಿದೆ.

ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ, ರಾಜಕೀಯ ನೇತಾರ ಬಿ.ಜನಾರ್ದನ ಪೂಜಾರಿಯವರ ಸಲಹೆಯಂತೆ ಈ ಅಕ್ಕಿ ವಿತರಣೆ ಕಾರ್ಯ ಆರಂಭಗೊಂಡಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪ್ರಾರಂಭದಲ್ಲಿ 100 ಕ್ವಿಂಟಾಲ್ ಅಕ್ಕಿ ನೀಡುವ ಉದ್ದೇಶ ಹೊಂದಲಾಗಿತ್ತಾದರೂ, ಬಳಿಕ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಈವರೆಗೆ 2268 ಕ್ವಿಂಟಾಲ್ ಅಕ್ಕಿ ವಿತರಣೆ ಮಾಡಲಾಗಿದೆ ಎನ್ನುತ್ತಾರೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್.

ಕುದ್ರೋಳಿ ಕ್ಷೇತ್ರದಿಂದ ನೀಡಲಾಗುವ ಬಡವರ ನೆರವಿಗೆ ಕ್ಷೇತ್ರದ ಭಕ್ತರು ಮಾತ್ರವಲ್ಲದೆ ಕೊಡುಗೈದಾನಿಗಳು ಉತ್ತಮ ಸಹಕಾರ ನೀಡುತ್ತಿದ್ದಾರೆ. ಲಾಕ್‌ಡೌನ್ ಕಾರಣದಿಂದ ದೇವಾಲಯದಲ್ಲಿ  ಅಕ್ಕಿ ವಿತರಣೆ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಬೇಡಿಕೆಯಿರುವ ಪ್ರದೇಶದಲ್ಲಿರುವ ಸ್ಥಳೀಯ ಅಂಗಡಿಯಿಂದಲೇ ಅಕ್ಕಿ ಪೂರೈಸುವ ಕಾರ್ಯ ಮಾಡಲಾಗುತ್ತಿದೆ. ಇದನ್ನು ದ.ಕ.ಜಿಲ್ಲೆಯ ನಾನಾ ಊರಿನ ಸಂಘ ಸಂಸ್ಥೆಗಳ ಮೂಲಕ ವಿತರಿಸಲು ಉದ್ದೇಶಿಸಲಾಗಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ ಎನ್ನುತ್ತಾರೆ ಪದ್ಮರಾಜ್ ಆರ್.

ಸರ್ವಧರ್ಮದವರಿಗೂ ಅಕ್ಕಿ: ಸಾಮಾಜಿಕ, ಧಾರ್ಮಿಕ, ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ ಕುದ್ರೋಳಿ ಕ್ಷೇತ್ರದಲ್ಲಿ  ಜಗತ್ತಿಗೆ ಏಕತೆಯನ್ನು ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಚಿಂತನೆಯಂತೆ ಲಾಕ್‌ಡೌನ್ ಸಂದರ್ಭ ಸರ್ವಧರ್ಮದ ಬಡವರ ಸಂಕಷ್ಟಕ್ಕೆ ಸ್ಪಂದಿಸಲಾಗುತ್ತಿದೆ. ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ಅವರಿಗೆ ನಿರಾಸೆ ಮಾಡದಂತೆ ವಿಳಂಬ ಮಾಡದಂತೆ ಅಕ್ಕಿ ವಿತರಣೆ ಮಾಡಲಾಗುತ್ತಿದೆ ಎನ್ನುತ್ತಾರೆ ಪದ್ಮರಾಜ್.

ಸಂಘಟನೆಗಳಿಗೂ ಸಹಕಾರ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಕಡೆಯಿಂದ ಅಕ್ಕಿಗೆ ಬೇಡಿಕೆ ಬಂದಿದ್ದು ಯಾರನ್ನೂ ನಿರಾಸೆಗೊಳಿಸದೆ ಅಕ್ಕಿ ವಿತರಣೆ ಮಾಡಲಾಗಿದೆ. ಇದು ಮಾತ್ರವಲ್ಲದೆ ಟೈಲರ್ ಅಸೋಸಿಯೇಶನ್, ಫೋಟೋ ಗ್ರಾಫರ್ ಅಸೋಸಿಯೇಶನ್ ಕೂಡಾ ಅಕ್ಕಿ ಬೇಡಿಕೆ ಸಲ್ಲಿಸಿದ್ದು ಅವರಿಗೂ ವಿತರಿಸಲಾಗಿದೆ ಎಂದು ತಿಳಿದು ಬಂದಿದೆ.

1000 ಮಂದಿಗೆ ನಿತ್ಯ ಅನ್ನದಾನ: ಕುದ್ರೋಳಿ ದೇವಸ್ಥಾನವು ‘ಕಲ್ಪ ಟ್ರಸ್ಟ್’ ಸಹಕಾರದಿಂದ  ಹೊರ ರಾಜ್ಯದ, ಹೊರ ಜಿಲ್ಲೆಯ ಕೂಲಿ ಕಾರ್ಮಿಕರು, ನಿರಾಶ್ರಿತರು, ಕೆಲಸವಿಲ್ಲದೆ ತುತ್ತು ಅನ್ನಕ್ಕೆ ಪರದಾಡುತ್ತಿರುವ ಸುಮಾರು 1000 ಮಂದಿಗೆ ನಿತ್ಯ ಅನ್ನದಾನ ಮಾಡುತ್ತಿದೆ. ಈ ಮೂಲಕ  ಬಡವರ ಹೊಟ್ಟೆ ತಣಿಸುವ ಕೆಲಸವನ್ನು ಶ್ರೀ ಕ್ಷೇತ್ರದಿಂದ ಮಾಡಲಾಗುತ್ತಿದೆ.

ಲಾಕ್‌ಡೌನ್ ಜಾರಿಯಾದ ಬಳಿಕ ಬಹಳಷ್ಟು ಜನ ಹೊರ ರಾಜ್ಯದ, ಹೊರ ಜಿಲ್ಲೆಯ ಕಾರ್ಮಿಕರು ಮಾಡಲು ಕೆಲಸವಿಲ್ಲದೆ, ಹೊಟ್ಟೆಗೆ ಅನ್ನವಿಲ್ಲದೆ ಬೀದಿಗೆ ಬಿದ್ದಿದ್ದಾರೆ. ಅವರಿಗೆ ನೆರವಾಗುವ ದೃಷ್ಟಿಯಿಂದ ಈ ಅನ್ನದಾನ ಮಾಡುವ ಕಾರ್ಯಕ್ಕೆ ದೇವಳ ಕೈ ಹಾಕಿದೆ. ಈಗ ಪ್ರತಿನಿತ್ಯ ದೇವಾಲಯದ ವತಿಯಿಂದಲೇ ಎಲ್ಲ ಆಹಾರ ಸಾಮಾಗ್ರಿಗಳನ್ನು ಭರಿಸಿ ಬಡವರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.

 ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಡವರಿಗೆ, ಸಂಕಷ್ಟದಲ್ಲಿದ್ದವರಿಗೆ ಹಲವಾರು ಸಂಘ ಸಂಸ್ಥೆಗಳು ಕಿಟ್ ವಿತರಣೆ ಮಾಡಿದ್ದು, ಕೆಲವು ಸಂಸ್ಥೆಗಳಿಗೆ ಕುದ್ರೋಳಿ ಕ್ಷೇತ್ರವೇ ಪ್ರೇರಣೆಯಾಗಿ ನಿಂತಿವೆ. ಜಿಲ್ಲೆಯ ಕೆಲವು ಸಂಘಗಳು ಕುದ್ರೋಳಿ ಕ್ಷೇತ್ರದಿಂದ ಅಕ್ಕಿ ಪಡೆದು ಅದಕ್ಕೆ ಮತ್ತೆ ಹೆಚ್ಚುವರಿಯಾಗಿ ಅಕ್ಕಿ, ದಿನಸಿ ಸಾಮಾಗ್ರಿ ಸೇರಿಸಿ ಕಿಟ್ ನೀಡುತ್ತಿದ್ದಾರೆ. ಇದರಿಂದ ಕುದ್ರೋಳಿ ಕ್ಷೇತ್ರ ಒಂದು ರೀತಿ ಪ್ರೇರಣೆ, ಮಾದರಿಯಾಗಿವೆ. ಲಾಕ್‌ಡೌನ್ ಆರಂಭದ ದಿನದಿಂದ ಕುದ್ರೋಳಿ ಕ್ಷೇತ್ರದ ಅಕ್ಕಿ, ಅನ್ನದಾನ ವಿತರಣೆ ಸೇವೆಯಲ್ಲಿ ಕುದ್ರೋಳಿ ಸೇವಾದಳವು ಅವಿತರವಾಗಿ ದುಡಿಯುತ್ತಿವೆ.

 ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರವು ಧಾರ್ಮಿಕ, ಸಾಮಾಜಿಕ, ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಕೊರೊನಾ ಜಾಗೃತಿ ಹಿನ್ನಲೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 268 ಕ್ವಿಂಟಾಲ್ ಅಕ್ಕಿ ವಿತರಣೆ ಮಾಡಲಾಗಿದೆ. ಇದು ಮಾತ್ರವಲ್ಲದೆ ಕ್ಷೇತ್ರದ ವತಿಯಿಂದ ಪ್ರತಿನಿತ್ಯ 1ಸಾವಿರ ಕುಟುಂಬಕ್ಕೆ ಅನ್ನದಾನ ನಡೆಯುತ್ತಿದ್ದು, ಇದನ್ನು ಲಾಕ್‌ಡೌನ್ ತೆರವು ಆಗುವವರೆಗೆ ಮುಂದುವರಿಸಲಾಗುವುದು ಎಂದು ದೇವಳದ ಕೋಶಾಧಿಕಾರಿ ಪದ್ಮರಾಜ್ ಆರ್ ತಿಳಿಸಿದ್ದಾರೆ.


Spread the love

Exit mobile version