ಬಡ ಜನರ ಕಷ್ಟದಲ್ಲಿ ಗುರುತಿಸಿಕೊಳ್ಳುವುದೆ ನಿಜವಾದ ಕ್ರಿಸ್ಮಸ್ ಆಚರಣೆ; ಎಫ್. ಎಕ್ಸ್. ಗೋಮ್ಸ್
ಮೂಡುಬಿದಿರೆ: ಕ್ರಿಸ್ತನ ಜನನ ಮತ್ತು ಜೀವನ ಶೋಷಿತರ ಉದ್ಧಾರಕ್ಕಾಗಿ. ಪ್ರಾಮಾಣಿಕತೆ ಮತ್ತು ಬಡ ಜನರ ಕಷ್ಟದಲ್ಲಿ ಗುರುತಿಸಿಕೊಳ್ಳುವುದೆ ನಿಜವಾದ ಆಚರಣೆ ಎಂದು ಮಂಗಳೂರಿನ ಧರ್ಮಗುರುಗಳಾದ ವಂದನೀಯ ಎಫ್. ಎಕ್ಸ್. ಗೋಮ್ಸ್ ಹೇಳಿದರು.
ಪ್ರೀತಿಸುವ, ಹಂಚುವ, ಕ್ಷಮಿಸುವ ಮತ್ತು ನಗುವ ಪ್ರತಿ ದಿನವೂ ಹಬ್ಬವಿದ್ದಂತೆ. ಮದರ್ ತೆರೆಸಾ ಮತ್ತು ಮಹಾತ್ಮಾ ಗಾಂಧಿಯಂತ ವ್ಯಕ್ತಿತ್ವಗಳು ಹುಟ್ಟಿಕೊಂಡಾಗ ಶೋಷಿತರಿಗೆ ನೆಲೆಯಾಗಿತ್ತು. ಇಂದು ಸಮಾಜದಲ್ಲಿ ಇಂತಹ ವ್ಯಕ್ತಿತ್ವಗಳ ಸಂಖ್ಯೆ ಸಾವಿರ ಲಕ್ಷಗಳಲ್ಲಿ ಮೂಡಿಬರಲಿ. ಆಗ ಕ್ರಿಸ್ತನ ಜೀವಿತದ ಧ್ಯೇಯ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಮೂಡುಬಿದಿರೆಯ ಕೋರ್ಪುಸ್ ಕ್ರಿಸ್ತಿ ಚರ್ಚನ ಧರ್ಮಗುರುಗಳಾದ ಅತಿ ವಂದನೀಯ ಪಾವ್ಲ್ ಸಿಕ್ವೇರ ಕ್ರಿಸ್ಮಸ್ ಸಂದೇಶ ನೀಡುತ್ತಾ, ಕ್ರಿಸ್ಮಸ್ ಒಂದು ಸಂತೋಷವನ್ನು ಹಂಚುವ ಹಬ್ಬ. ಈ ಆಚರಣೆಯ ಪ್ರತಿಯೊಂದು ಅಂಶಗಳು ವಿಶೇಷ ಮಹತ್ವ ಹೊಂದಿದೆ. ಕಿಸ್ತನ ಸಂದೇಶದಂತೆ ಆಚರಣೆಗಳು ಗಲಾಟೆ ಗದ್ದಲಗಳಿಲ್ಲದೆ ಪ್ರೀತಿ ಹಂಚುವಂತಿರಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಹ್ಯುಮಾನಿಟಿಸ್ ಟ್ರಸ್ಟ್ ನ ಸಂಸ್ಥಾಪಕರಾದ ರೋಷನ್ ಬೆಳ್ಮಣ್ ರವರನ್ನು ಶಾಲು, ಸನ್ಮಾನ ಪತ್ರ, ಫಲಪುಷ್ಪ ಹಾಗೂ ಹತ್ತು ಸಾವಿರ ನಗದಿನೊಂದಿಗೆ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಅವರು, ಧರ್ಮ ಗ್ರಂಥಗಳನ್ನು ಕಲಿಯುವುದಕ್ಕಿಂತಲೂ ಜನರ ವೇದನೆಯನ್ನು ಅರಿಯುವುದು ಸ್ವರ್ಗಕ್ಕೆ ದಾರಿ ಮಾಡಿ ಕೊಡುತ್ತದೆ ಎಂದರು.
ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ
ಉಡುಪಿ ಹಾಗೂ ದಕ್ಷಿಣ ಕನ್ನಡ ಡಯೋಸಿಸ್‍ನ ವಿವಿಧ ಚರ್ಚ್‍ಗಳಿಗೆ ನಡೆಸಿದ ಸ್ಟಾರ್ ಮೇಕಿಂಗ್ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಕೋರ್ಪುಸ್ ಕ್ರಿಸ್ತಿ ಚರ್ಚ್ ಪ್ರಥಮ, ಉಡುಪಿಯ ಮದರ್ ಆಫ್ ಸೊರೋ ಚರ್ಚ್ ದ್ವಿತೀಯ ಹಾಗೂ ವಾಮದಪದವಿನ ಇನ್ಫಾಂಟ್ ಜೀಸಸ್ ಚರ್ಚ್ ತೃತೀಯ ಸ್ಥಾನ ಪಡೆದುಕೊಂಡಿತು. ಕ್ಯಾರಲ್ ಸಿಂಗಿಂಗ್ ಸ್ಪರ್ಧೆಯಲ್ಲಿ ಬಿಕರ್ನಕಟ್ಟೆಯ ಇನ್ಫಾಂಟ್ ಜೀಸಸ್ ಚರ್ಚ್ ಪ್ರಥಮ, ಉಡುಪಿಯ ಮದರ್ ಆಫ್ ಸೊರೋ ಚರ್ಚ್ ದ್ವಿತೀಯ ಹಾಗೂ ಮೂಡುಬಿದಿರೆಯ ಕೋರ್ಪುಸ್ ಕ್ರಿಸ್ತಿ ಚರ್ಚ್ ತೃತೀಯ ಸ್ಥಾನ ಪಡೆಯಿತು. ಸ್ಟಾರ್ ಮೇಕಿಂಗ್ ಸ್ಪರ್ಧೆ ಹಾಗೂ ಕ್ಯಾರಲ್ ಸಿಂಗಿಂಗ್ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಪರ್ಧಾರ್ಥಿಗಳಿಗೆ ಕ್ರಮವಾಗಿ ರೂ 10000, 7500 , 5000 ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಇದೇ ಸಂಧರ್ಭದಲ್ಲಿ ಆಳ್ವಾಸ್ ಪ್ರತಿಷ್ಠಾನದ ವಿವಿಧ ಸಂಸ್ಥೆಗಳಲ್ಲಿ ಕ್ರಿಸ್ಮಸ್ ಪ್ರಯುಕ್ತ ಆಯೋಜಿಸಿದ್ದ ಸ್ಪರ್ಧೆಗಳ ಸ್ಪರ್ಧಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ವಿದ್ಯಾರ್ಥಿಗಳ ಆಕರ್ಷಕ ಕ್ರಿಸ್ಮಸ್ ಕ್ಯಾರಲ್, ಬಣ್ಣ ಬಣ್ಣದ ನಕ್ಷತ್ರಗಳು, ಸಾಂತ ಕ್ಲಾಸ್ ಮುಖ್ಯ ಆಕರ್ಷಣೆಯಾಗಿತ್ತು. ವಿದ್ಯಾರ್ಥಿಗಳು ಮೇಣದ ಬತ್ತಿ ಹಿಡಿದು ಏಂಜಲ್ಗಳೊಂದಿಗೆ ಸಾಂಪ್ರದಾಯಿಕವಾಗಿ ಮೆರವಣಿಗೆಯಲ್ಲಿ ಅತಿಥಿಗಳನ್ನು ವೇದಿಕೆಗೆ ಕರೆತಂದರು. ಪ್ರಾರ್ಥನಾ ವಿಧಿಯ ಬಳಿಕ ಕ್ರಿಸ್ಮಸ್ ಕ್ಯಾರಲ್ಗಳನ್ನು ಹಾಡಲಾಯಿತು. ಸಾಂತ ಕ್ಲಾಸ್ನೊಂದಿಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಕೇಕ್ ಕತ್ತರಿಸಿ ಕ್ರಿಸ್ಮಸ್ ಸಂಭ್ರಮವನ್ನು ಹಂಚಿಕೊಂಡರು. ಇದಾದ ಬಳಿಕ ವಿದ್ಯಾರ್ಥಿಗಳು ಏಸುವಿನ ಜನ್ಮ ಕಥೆಯನ್ನು ನೃತ್ಯ ರೂಪಕದ ಮೂಲಕ ಹೇಳಿದರು.
ಸಂಸ್ಥೆಯ ಅಡ್ಮಿಷನ್ ಆಫೀಸರ್ ಎಲ್ ಜೆ ಫೆನಾರ್ಂಡೀಸ್ ಸ್ವಾಗತಿಸಿದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ವಂದಿಸಿದರು. ಉಪನ್ಯಾಸಕ ರಾಜೇಶ್ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜೋಯ್ಲಸ್ ಡಿ’ಸೋಜ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಜಯಕರ ಆಳ್ವ, ಮೀನಾಕ್ಷಿ ಆಳ್ವ, ಗ್ರೀಷ್ಮಾ ಆಳ್ವ, ಉದ್ಯಮಿ ಶ್ರೀಪತಿ ಭಟ್ ಹಾಗೂ ಇನ್ನಿತರರು ಭಾಗಿಯಾಗಿದ್ದರು.