ಬರ ಪರಿಹಾರ ಬಿಡುಗಡೆಗೆ ಮೋದಿಗೆ ಧನ್ಯವಾದ ಹೇಳಿ ಬಿಜೆಪಿ ಪೋಸ್ಟ್‌: ನೆಟ್ಟಿಗರು ಗರಂ

Spread the love

ಬರ ಪರಿಹಾರ ಬಿಡುಗಡೆಗೆ ಮೋದಿಗೆ ಧನ್ಯವಾದ ಹೇಳಿ ಬಿಜೆಪಿ ಪೋಸ್ಟ್‌: ನೆಟ್ಟಿಗರು ಗರಂ

ಬೆಂಗಳೂರು: ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶದ ನಂತರ ರಾಜ್ಯಕ್ಕೆ ಬರ ಪರಿಹಾರ ಕೊಡುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ, ಇಂದು ರಾಜ್ಯಕ್ಕೆ ₹3,454 ಕೋಟಿ ಬರ ಪರಿಹಾರ ಘೋಷಿಸಿದೆ.

ಏತನ್ಮಧ್ಯೆ, ಬರ ಪರಿಹಾರ ಬಿಡುಗಡೆಗೆ ಪ್ರಧಾನಿ ಮೋದಿಗೆ ಧನ್ಯವಾದ ಹೇಳಿ ರಾಜ್ಯ ಬಿಜೆಪಿ ಘಟಕ ಪೋಸ್ಟ್‌ ಮಾಡಿರುವುದು ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ.

‘ಕರ್ನಾಟಕದಲ್ಲಿ ಕಂಡು ಕೇಳರಿಯದಂತಹ ಬರ ಉಂಟಾದರೂ, ರೈತರಿಗೆ ಬಿಡಿಗಾಸಿನಷ್ಟೂ ಮಧ್ಯಂತರ ಪರಿಹಾರ ನೀಡದೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಓಲೈಕೆ ರಾಜಕಾರಣದಲ್ಲಿ ನಿರತವಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿಯೂ ಕನ್ನಡಿಗರ ಸಂಕಷ್ಟಕ್ಕೆ ನೆರವಾಗಿರುವ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ₹3,454 ಕೋಟಿ ಬರ ಪರಿಹಾರ ನೀಡುವ ಮೂಲಕ ಸಮಸ್ತ ಕನ್ನಡಿಗರ ಹಿತ ಕಾಯುವ ಕೆಲಸ ಮಾಡಿದ್ದಾರೆ. ನಾಡಿನ ಸಮಸ್ತ ಕನ್ನಡಿಗರ ಪರವಾಗಿ ಪ್ರಧಾನಿ ಅವರಿಗೆ ತುಂಬು ಹೃದಯದ ಧನ್ಯವಾದಗಳು’ ಎಂದು ಬಿಜೆಪಿ ತನ್ನ ಪೋಸ್ಟ್‌ನಲ್ಲಿ ಬರೆದುಕೊಂಡಿತ್ತು.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಕೆಲ ನೆಟ್ಟಿಗರು, ಸುಪ್ರೀಂ ಕೋರ್ಟ್‌ನ ಸಕಾಲಿಕ ಮಧ್ಯಸ್ಥಿಕೆ ನಂತರವೇ ಬರ ಪರಿಹಾರ ಬಿಡುಗಡೆಯಾಗಿದೆಯೇ ವಿನಃ ಪ್ರಧಾನಿ ಅವರಿಂದಲ್ಲ. ನಿಜವಾಗಿ ಧನ್ಯವಾದ ತಿಳಿಸಬೇಕಾದದ್ದು ನ್ಯಾಯಾಲಯಕ್ಕೆ’ ಎಂದು ಕಿಡಿಕಾರಿದ್ದಾರೆ.

‘ಆರು ತಿಂಗಳಿನಿಂದ ಬರ ಪರಿಹಾರದ ಹಣ ನೀಡದೆ ಸತಾಯಿಸುತ್ತಿದ್ದ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದ್ದರಿಂದಾಗಿ ಇಂದು ರಾಜ್ಯಕ್ಕೆ ₹3,454 ಕೋಟಿ ಪರಿಹಾರ ಘೋಷಣೆ ಮಾಡಿದೆ. ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸುವ ಪೋಸ್ಟರ್ ಹಂಚಿಕೊಂಡಿರುವುದು ನಾಚಿಕೆಗೇಡು’ ಎಂದು ನೆಟ್ಟಿಗೊರಬ್ಬರು ಬರೆದುಕೊಂಡಿದ್ದಾರೆ.


Spread the love