ಬಲವಂತದ ಬಂದ್ ಮಾಡಲು ಹೊರಟ ಉಡುಪಿ ಕಾಂಗ್ರೆಸ್ ಕಾರ್ಯಕರ್ತರಿಗೆ ಪೋಲಿಸರಿಂದ ಎಚ್ಚರಿಕೆ
ಉಡುಪಿ: ದೇಶವ್ಯಾಪಿ ಕಾಂಗ್ರೆಸ್ ಪಕ್ಷ ಭಾರತ್ ಬಂದ್ ಉಡುಪಿಯಲ್ಲಿ ಶಾಂತಿಯುತವಾಗಿ ಆರಂಭವಾಗಿದ್ದು, ನಗರದಲ್ಲಿ ಬಲವಂತವಾಗಿ ಬಂದ್ ಮಾಡಲು ಹೊರಟ ಕಾಂಗ್ರೆಸ್ ಕಾರ್ಯಕರ್ತರಿಗೆ ಪೋಲಿಸರು ಖಡಕ್ ಎಚ್ಚರಿಕೆ ನೀಡಿದ ಘಟನೆ ನಡೆಯಿತು.
ತೈಲ ಬೆಲೆ ಏರಿಕೆ ಮಾಡಿದ ಕೇಂದ್ರದ ಬಿಜೆಪಿ ಸರಕಾರದ ವಿರುದ್ದ ದೇಶವ್ಯಾಪಿ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಸೇರಿ ಭಾರತ್ ಬಂದ್ ಗೆ ಕರೆ ನೀಡಿದ್ದು ಇದರ ಭಾಗವಾಗಿ ಕಾಂಗ್ರೆಸ್ ಕಾರ್ಯಕರ್ತರು ಬೆಳಿಗ್ಗೆ ನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ವಿನಂತಿ ಮಾಡಿದರು. ಈ ವೇಳೆ ಕೆಲವೊಂದು ಕಾರ್ಯಕರ್ತರು ಬೇರೆ ಜಿಲ್ಲೆಯಿಂದ ಮಂಗಳೂರು ಡಿಪೋಗೆ ವಾಪಾಸಾಗುತ್ತಿದ್ದ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನ ಚಾಲಕನ್ನನ್ನು ಬೆದರಿಸುವ ಪ್ರಯತ್ನ ಮಾಡಿದರು.
ಇದರ ಕುರಿತು ಮಾಹಿತಿ ಅರಿತ ಪೋಲಿಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಕಾಂಗ್ರೆಸ್ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದು ಯಾವುದೇ ರೀತಿಯಲ್ಲಿ ಬಲವಂತದ ಬಂದ್ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಚಾಲಕನ್ನನ್ನು ಬೆದರಿಸುವ ಬದಲು ಕೆ ಎಸ್ ಆರ್ ಟಿ ಸಿ ಡಿಪೋ ಮ್ಯಾನೇಜರ್ ಬಳಿ ವಿನಂತಿಸಿ ಅದನ್ನು ಬಿಟ್ಟು ಬಲವಂತದಿಂದ ಬಂದ್ ಮಾಡಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೋಲಿಸರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.
ಕೊನೆಗೆ ಪೋಲಿಸರು ಬಲವಂತದ ಬಂದ್ ಮಾಡಿದರ ಬಂಧಿಸುವುದಲ್ಲದೆ ಕಾನೂನು ಕೈಗೆತ್ತಿಕೊಂಡರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.